ಕನ್ನಡವೇ ಆಡಳಿತ ಭಾಷೆಯಾಗಲಿ

0
Protest by Karawe against imposition of Hindi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕೇಂದ್ರ ಸರಕಾರ ಹಿಂದಿ ಹೇರಿಕೆಯನ್ನು ಕೈಬಿಟ್ಟು, ಸಂವಿಧಾನದ 8ನೇ ಪರಿಚ್ಛೇದದಲ್ಲಿ ಉಲ್ಲೇಖಿಸಿರುವ 22 ಭಾಷೆಗಳನ್ನೂ ಅಧಿಕೃತ ಆಡಳಿತ ಭಾಷೆಯನ್ನಾಗಿ ಮಾಡಿ, ಈ ದೇಶದ ಬಹುತ್ವವನ್ನು, ಸೌರ್ವಭೌಮತೆಯನ್ನು ಕಾಪಾಡಬೇಕು. ದೇಶದ ಎಲ್ಲ ಭಾಷೆಗಳೂ ಸಮಾನ ಎಂದು ಸಾರಬೇಕು.

Advertisement

ಕರ್ನಾಟಕದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಕೇಂದ್ರ ಸರಕಾರಿ ಇಲಾಖೆಗಳು, ಉದ್ಯಮಗಳಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ಕರ್ನಾಟಕದಲ್ಲಿ ತ್ರಿಭಾಷಾ ಸೂತ್ರ ಕೈಬಿಟ್ಟು, ಹಿಂದಿ ಕಡ್ಡಾಯ ಕಲಿಕೆ ರದ್ದುಗೊಳಿಸಬೇಕು ಎಂದು ಕರವೇ ಕಾರ್ಯಕರ್ತರು ಒತ್ತಾಯಿಸಿದರು.

ಕೇಂದ್ರ ಸರಕಾರ ಬಲವಂತವಾಗಿ ಹಿಂದಿ ಭಾಷೆಯನ್ನು ಹಿಂದಿಯೇತರ ಭಾಷೆ ಬಳಸುವ ರಾಜ್ಯಗಳ ಮೇಲೆ ಹೇರಿಕೆ ಮಾಡಿ ಹಿಂದಿಯನ್ನು ಆಡಳಿತ ಭಾಷೆಯನ್ನಾಗಿ ಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಶನಿವಾರ ಇಲ್ಲಿನ ಮಹಾತ್ಮ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾಕಾರರು, ಸಂವಿಧಾನದ 8ನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ರಾಷ್ಟ್ರಭಾಷೆಗಳೇ ಆಗಿವೆ. ಈ ಪರಿಚ್ಛೇದದಲ್ಲಿ ಒಳಗೊಳ್ಳದ ಅನೇಕ ಭಾಷೆಗಳು ನಮ್ಮ ದೇಶದಲ್ಲಿವೆ.

ಇಂಥ ಸಮಯದಲ್ಲಿ ಹಿಂದಿಯನ್ನು ನಮ್ಮ ರಾಷ್ಟ್ರಭಾಷೆಯನ್ನಾಗಿ ಮಾಡುವ ಪ್ರಸ್ತಾಪವನ್ನು ಸಂವಿಧಾನ ಕರಡು ರಚನೆ ಸಂದರ್ಭದಲ್ಲಿಯೇ ತಿರಸ್ಕೃರಿಸಲಾಗಿದೆ. ಆದರೂ ಕೇಂದ್ರ ಸರಕಾರ ಹಿಂದಿ ದಿವಸ್ ಆಚರಣೆ ಮೂಲಕ ಹಿಂದಿಯೇತರ ಭಾಷೆ ಮಾತನಾಡುವ ರಾಜ್ಯಗಳ ಮೇಲೆ ಬಲವಂತವಾಗಿ ಹಿಂದಿ ಹೇರಿಕೆ ಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕರವೇ ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಿಂಗನಗೌಡ ಮಾಲಿಪಾಟೀಲ, ಆಶಾ ಜೂಲಗುಡ್ಡ, ಜಿಲ್ಲಾ ವಕ್ತಾರ ವೀರಪಾಕ್ಷಪ್ಪ ಹಿತ್ತಲಮನಿ, ಮುತ್ತಣ್ಣ ಚೌಡಣ್ಣವರ, ವಿನಾಯಕ ಬದಿ, ನಾಗರಾಜ ಅಣ್ಣಿಗೇರಿ, ಯಲ್ಲಪ್ಪ ಬೋವಿ, ದಾವಲಸಾಬವ ತಹಸೀಲ್ದಾರ್, ತೌಸಿಫ್ ಢಾಲಾಯತ್, ಸಲೀಂ ಶಿರವಾರ, ಸಿರಾಜ ಹೊಸಮನಿ, ಭರಮಪ್ಪ ಕಿಲಾರಿ, ಹನುಮಂತ ಪೂಜಾರ, ಶರಣಪ್ಪ ಪುರ್ತಗೇರಿ ಮುಂತಾದವರು ಉಪಸ್ಥಿತರಿದ್ದರು.

ಭಾರತ ಒಕ್ಕೂಟ ವ್ಯವಸ್ಥೆಯ ದೇಶ. ಒಂದು ಒಕ್ಕೂಟ ರಾಷ್ಟ್ರವಾಗಿ ಎಲ್ಲ ಪ್ರಾಂತ್ಯಗಳ ಭಾಷೆ, ಸಂಸ್ಕೃತಿ, ಇತಿಹಾಸ, ಆಚಾರ-ವಿಚಾರಗಳನ್ನು ಗೌರವಿಸುವ ಹೊಣೆ ಒಕ್ಕೂಟ ವ್ಯವಸ್ಥೆಗೆ ಸೇರಿದ್ದು. ವಿವಿಧತೆಯಲ್ಲಿ ಏಕತೆ ಎಂಬುದು ಒಕ್ಕೂಟದ ಮೂಲಮಂತ್ರ. ಈ ಒಗ್ಗಟ್ಟನ್ನು ಮುರಿಯುವ ಕೆಲಸವನ್ನು ಹಿಂದಿ ಸಾಮ್ರಾಜ್ಯಶಾಹಿಗಳು ನಿರಂತರವಾಗಿ ನಡೆಸುತ್ತಲೇ ಇದ್ದಾರೆ. ಇದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ಯಾವತ್ತಿಗೂ ಅವಕಾಶ ಕೊಡುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.


Spread the love

LEAVE A REPLY

Please enter your comment!
Please enter your name here