ಶಾಲೆಗಳು ಆಧುನಿಕ ದೇವಾಲಯಗಳು : ಸಿದ್ಧರಾಮ ಶ್ರೀಗಳು

0
2710th Shivanubhava program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ನಮ್ಮ ದೇಶದ ಭವಿಷ್ಯಕ್ಕೆ, ಅಭಿವೃದ್ಧಿಗೆ ಪೂರಕವಾಗಿ ಉತ್ತಮ ಪ್ರಜೆಗಳನ್ನು ರೂಪಿಸುವಲ್ಲಿ ಶಿಕ್ಷಕರ ಪಾತ್ರ ಬಹಳ ದೊಡ್ಡದು. ಶಾಲೆಗಳು ಆಧುನಿಕ ದೇವಾಲಯಗಳು. ಅಲ್ಲಿ ಮಕ್ಕಳಿದ್ದಾರೆ. ನಗೆ ಇದೆ, ನೆಮ್ಮದಿ ಇದೆ, ಶಾಂತಿ ಇದೆ, ಸಂತೋಷವಿದೆ ಎಂದು ಡಾ. ತೋಂಟದ ಸಿದ್ಧರಾಮ ಶ್ರೀಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2710ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಶಿಕ್ಷಕ ಈ ದೇಶದ ಪರಮೋಚ್ಚ ಶಕ್ತಿ. ಶಿಕ್ಷಕರು ಯಾವಾಗಲೂ ಮಕ್ಕಳೊಂದಿಗೆ ಇರುವುದರಿಂದ ಅವರ ಮನಸ್ಸು ಕೂಡ ಶುಭ್ರವಾಗಿರುತ್ತದೆ. ಬಿ.ಜಿ. ಅಣ್ಣಿಗೇರಿ ಗುರುಗಳು ಶಿಕ್ಷಕ ಸಂತರಾಗಿದ್ದುಕೊಂಡು, ಸಾವಿರಾರು ಹಳ್ಳಿಯ ಬಡ ಮಕ್ಕಳಿಗೆ ಸಹಾಯ ಮಾಡಿ, ತಮ್ಮ ಜೀವನವನ್ನೇ ತ್ಯಾಗ ಮಾಡಿದರು. ಅವರು ಈ ಜಗದ ಬೆಳಕಾದರು. ಅವರು ಬಿಟ್ಟು ಹೋದ ಅಕ್ಷರದ ಬೆಳಕು, ಅಣ್ಣಿಗೇರಿ ಗುರುಗಳ ಆಶ್ರಮದಲ್ಲಿ ಈಗಲೂ ಬೆಳಗುತ್ತಿದೆ ಎಂದು ಸ್ಮರಿಸಿದರು.

ಮುಂದುವರೆದು ಮಾತನಾಡಿದ ಶ್ರೀಗಳು, ಸಾವಿತ್ರಿಬಾಯಿ ಫುಲೆಯವರು ಅನೇಕ ಕಷ್ಟ, ನೋವು, ಅವಮಾನ, ಸಂದಿಗ್ಧ ಪರಿಸ್ಥಿತಿಗಳನ್ನು ಸಹಿಸಿ, ಎದುರಿಸಿ ಶಾಲೆಯನ್ನು ತೆರೆದು ಶಿಕ್ಷಣವನ್ನು ನೀಡಿದ್ದಾರೆ. ಸಾವಿತ್ರಿಬಾಯಿ ಫುಲೆಯವರು ನಮ್ಮ ದೇಶದ ಮೊಟ್ಟಮೊದಲ ಮಹಿಳಾ ಶಿಕ್ಷಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಶಿಕ್ಷಕರು ರಾಧಾಕೃಷ್ಣರಂತೆ ತತ್ವಜ್ಞಾನಿಗಳಾಗಬೇಕು. ಅವರಂತೆ ಇಂದಿನ ಶಿಕ್ಷಕರು ಸದಾ ಅಭ್ಯಾಸ ಮಾಡುತ್ತ ಒಬ್ಬ ಶ್ರೇಷ್ಠ ಗುರುವಾಗಬೇಕೆಂದರು.

‘ಅಧ್ಯಾಪಕ ಭೂಷಣ ಪ್ರಶಸ್ತಿ’ಯನ್ನು ಮುಂಡರಗಿಯ ಜಗದ್ಗುರು ತೋಂಟದಾರ್ಯ ಸಿಬಿಎಸ್‌ಇ ಶಾಲೆಯ ಪ್ರಾಚಾರ್ಯರಾದ ಶರಣಕುಮಾರ್ ಬುಗಟಿ ಹಾಗೂ ರೋಣದ ಶರಣಬಸವೇಶ್ವರ ಪ್ರೌಢಶಾಲೆಯ ಪ್ರಭಾರಿ ಮುಖ್ಯೋಪಾಧ್ಯಾಯೆ ಗಂಗೂಬಾಯಿ ದಿವಟರ ಅವರಿಗೆ ಪ್ರದಾನ ಮಾಡಲಾಯಿತು. ಡಿ.ಸಿ. ಪಾವಟೆ ಬಿ.ಇಡಿ. ಕಾಲೇಜಿನ ವಿದ್ಯಾರ್ಥಿ, ಶೇಕಡಾ 91.50 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಹೀನಾ ಕೌಸರ್ ಮಾಳೆಕೊಪ್ಪ ಅವರನ್ನು ಸನ್ಮಾನಿಸಲಾಯಿತು.

ಮಾಜಿ ಸಚಿವರಾದ ಎಸ್.ಎಸ್. ಪಾಟೀಲ ಉಪಸ್ಥಿತರಿದ್ದರು. ದಾಸೋಹ ಸೇವೆಯನ್ನು ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಇವರು ವಹಿಸಿದ್ದರು. ಧರ್ಮಗ್ರಂಥ ಪಠಣವನ್ನು ಪ್ರತೀಕ್ಷಾ ಎಂ.ತುಕ್ಕಪ್ಪನವರ ಹಾಗೂ ವಚನ ಚಿಂತನವನ್ನು ಪ್ರಣವಿ ಬಿ.ಅಣ್ಣಿಗೇರಿ ಮಾಡಿದರು. ಸಂಗೀತ ಸೇವೆಯನ್ನು ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ್ ಸುತಾರ ನೇರವೇರಿಸಿದರು.

ಪ್ರೊ. ಶಿವಾನಂದ ಹೊಂಬಳ ಕಾರ್ಯಕ್ರಮ ನಿರೂಪಿಸಿದರು. ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಬಾಲಚಂದ್ರ ಭರಮಗೌಡ್ರ ಸ್ವಾಗತಿಸಿದರು. ಉಪಾಧ್ಯಕ್ಷ ಉಮೇಶ ಪುರದ, ವಿದ್ಯಾವತಿ ಪ್ರಭು ಗಂಜಿಹಾಳ, ಕಾರ್ಯದರ್ಶಿ ವೀರಣ್ಣ ಗೋಟಡಕಿ, ಸಹಕಾರ್ಯದರ್ಶಿ ಸೋಮಶೇಖರ ಪುರಾಣಿಕ, ನಾಗರಾಜ ಹಿರೇಮಠ, ಸಂಘಟನಾ ಕಾರ್ಯದರ್ಶಿ ಮಹೇಶ ಗಾಣಿಗೇರ, ಕೋಶಾಧ್ಯಕ್ಷ ಬಸವರಾಜ ಕಾಡಪ್ಪನವರ, ಶಿವಾನುಭವ ಸಮಿತಿ ಚೇರಮನ್‌ರಾದ ಐ.ಬಿ. ಬೆನಕೊಪ್ಪ, ಶಿವಾನುಭವ ಸಮಿತಿ ಸಹಚೇರಮನ್‌ರಾದ ಶಿವಾನಂದ ಹೊಂಬಳ ಉಪಸ್ಥಿತರಿದ್ದರು.

‘ಭವಿಷ್ಯದಲ್ಲಿ ಶಿಕ್ಷಕರ ಪಾತ್ರ’ ಕುರಿತು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ವಿವೇಕಾನಂದಗೌಡ ಪಾಟೀಲ ಅವರು ಉಪನ್ಯಾಸ ನೀಡಿ, ನಾನು ಅಣ್ಣಿಗೇರಿ ಗುರುಗಳ ಶಿಷ್ಯ. ಅಣ್ಣಿಗೇರಿ ಗುರುಗಳು ತಮ್ಮ ಪಗಾರವನ್ನು ಬಡ ಮಕ್ಕಳ ಶಿಕ್ಷಣಕ್ಕೆ, ಬಟ್ಟೆಗಳಿಗೆ, ಪುಸ್ತಕಗಳಿಗಾಗಿ ವ್ಯಯಿಸುತ್ತಿದ್ದರು. ಅತೀ ದಡ್ಡ ಹುಡುಗರನ್ನು ಆಶ್ರಮದಲ್ಲಿ ಇಟ್ಟುಕೊಂಡು ಒಳ್ಳೆಯ ವ್ಯಕ್ತಿಗಳನ್ನಾಗಿ ನಿರ್ಮಿಸುವ ಕಲೆ ಅವರಿಗೆ ಸಿದ್ಧಿಸಿತ್ತು. ಕಲಿಕೆ ನಿರಂತರ ಪ್ರಕ್ರಿಯೆ. ಭವಿಷ್ಯದಲ್ಲಿ ಶಿಕ್ಷಕರು ತಂತ್ರಜ್ಞಾನ ಬಳಸಿಕೊಂಡು, ಅನ್ವೇಷಕರಾಗಿ ಹೊಸ ಆಲೋಚನೆಗಳೊಂದಿಗೆ ಪಾಠಬೋಧನೆ ಮಾಡಬೇಕೆಂದರು ಸಲಹೆ ನೀಡಿದರು.

 


Spread the love

LEAVE A REPLY

Please enter your comment!
Please enter your name here