ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ನಾಮಪತ್ರ ಹಿಂಪಡೆಯಲು ನೀಡಿದ ಸಮಯಾವಕಾಶ ನಾಳೆ ಮುಕ್ತಾಯಗೊಳ್ಳಲಿದೆ. ಡಿ.14 ರಂದು ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಚುನಾವಣಾ ಆಯೋಗದ ನಿಯಮಾನುಸಾರ ಚುನಾವಣಾಧಿಕಾರಿಗಳು ಚುನಾವಣಾ ಚಿಹ್ನೆಗಳನ್ನು ಹಂಚಿಕೆ ಮಾಡಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯ ಚುನಾವಣಾ ಆಯೋಗವು ಆಧಿಸೂಚನೆಯ ಮೂಲಕ ಮುಕ್ತ ಚಿಹ್ನೆಗಳ ಪಟ್ಟಿ ಪ್ರಕಟಿಸಿದೆ. ರಾಷ್ಟ್ರೀಯ ಪ್ರಾದೇಶಿಕ ಹಾಗೂ ಇತರ ನೋಂದಾಯಿತ ಮಾನ್ಯತೆ ಪಡೆದ ಪಕ್ಷಗಳಿಗೆ ಈಗಾಗಲೇ ಹಂಚಿಯಾಗಿರುವ ಚಿಹ್ನೆಗಳನ್ನು ಹೊರತುಪಡಿಸಿ ಹಂಚಿಕೆಗೆ ಮುಕ್ತವಾಗಿರುವ ಚಿಹ್ನೆಗಳ ಪೈಕಿ ಅಭ್ಯರ್ಥಿಗಳು ನಾಮಪತ್ರದಲ್ಲಿ ಯಾವುದಾದರೂಂದು ಚಿಹ್ನೆ ನಮೂದಿಸಬೇಕು. ನಮೂದಿಸಿರುವ ಚಿಹ್ನೆಗಳ ಹೊರತು ಬೇರಾವ ಚಿಹ್ನೆ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ನಿಯಮ 22 ರಂತೆ ಅಭ್ಯರ್ಥಿಗಳಿಗೆ ಚಿಹ್ನೆಯನ್ನು ನಾಮಪತ್ರದ ಕ್ರಮಾಂಕ ಅನುಸರಿಸಿ ಹಂಚಿಕೆ ಮಾಡಲಾಗುತ್ತದೆ. ಅದಕ್ಕೂ ಮೊದಲು ಇಬ್ಬರು ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿದ್ದಾರೆಯೇ ಎಂದು ಪರಿಶೀಲಿಸಲಾಗುತ್ತದೆ. ಒಂದೇ ಚಿಹ್ನೆ ಇಬ್ಬರಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕೋರಿದ್ದಲ್ಲಿ ನಿಯಮ 22 (5)(ಎ) ಪ್ರಕಾರ ಚೀಟಿ ಎತ್ತುವ ಮೂಲಕ ಯಾರಿಗೆ ಆ ಚಿಹ್ನೆ ನೀಡಬೇಕೆಂಬುದನ್ನು ನಿರ್ಧರಿಸಲಾಗುತ್ತದೆ. ಉಳಿದ ಅಭ್ಯರ್ಥಿಗಳಿಗೆ ಅವರು ಕೋರಿದ 2ನೇ ಅಥವಾ 3ನೇ ಚಿಹ್ನೆಯನ್ನು ನಿಯಮ 22 ಅನುಸರಿಸಿ ನೀಡಲಾಗುವುದು.
ಉಮೇದುವಾರರಿಗೆ ಮಂಜೂರು ಮಾಡಿದ ಚುನಾವಣಾ ಚಿಹ್ನೆಯ ಮಾದರಿ ಪ್ರತಿಯನ್ನು ಸ್ಪರ್ಧಿಸುವ ಅಭ್ಯರ್ಥಿಗೆ ಅಥವಾ ಚುನಾವಣಾ ಏಜಂಟನಿಗೆ ನೀಡಿ ಸ್ವೀಕೃತಿ ಪಡೆದುಕೊಳ್ಳಲಾಗುತ್ತದೆ. ಯಾವುದೇ ಅಭ್ಯರ್ಥಿಯು ಹಾಜರಿಲ್ಲದಿದ್ದಲ್ಲಿ ಚುನಾವಣಾಧಿಕಾರಿಯು ಆ ಅಭ್ಯರ್ಥಿಗೆ ಮಂಜೂರು ಮಾಡಿರುವ ಚಿಹ್ನೆಯ ಬಗ್ಗೆ ನಡಾವಳಿ ಮಾಡಿ, ಇತರೆ ಅಭ್ಯರ್ಥಿಗಳಿಂದ ಸಹಿ ಪಡೆದುಕೊಳ್ಳುವರು.
ಕ್ಷೇತ್ರವಾರು ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ತಯಾರಿಸಿ, ಅವರಿಗೆ ಚುನಾವಣಾ ಚಿಹ್ನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಯಾ ಕ್ಷೇತ್ರದ ಅಭ್ಯರ್ಥಿಗಳು ಮಾತ್ರ ಹಾಜರಿರಬೇಕು. ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕ್ರಮವಾಗಿ ಒಬ್ಬೊಬ್ಬರನ್ನೇ ಕರೆದು ಅವರಿಗೆ ನಿಯಮವನ್ನು ಅನುಸರಿಸಿ ಚುನಾವಣಾ ಚಿಹ್ನೆ ಹಂಚಿಕೆ ಮಾಡಲಾಗುತ್ತದೆ.
ಹೆಚ್ಚಿನ ಅಭ್ಯರ್ಥಿಗಳು ಒಂದೇ ಚಿಹ್ನೆ ಕೋರಿರುವ ಸಂದರ್ಭದಲ್ಲಿ ಲಾಟರಿ ಮೂಲಕ ಹಂಚಿಕೆ ಮಾಡಬೇಕಾಗಿರುವುದರಿಂದ, ಇಂತಹ ಎಲ್ಲಾ ಅಭ್ಯರ್ಥಿ ಕರೆದು ಚಿಹ್ನೆ ಹಂಚಿಕೆ ಮಾಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.