ವಿಜಯಸಾಕ್ಷಿ ಸುದ್ದಿ, ಗದಗ : ಮುಹಮ್ಮದ ಪೈಗಂಬರ್ ಮನುಕುಲದ ಪ್ರವಾದಿಯಾಗಿ, ಶಾಂತಿದೂತರಾಗಿ ಜಗತ್ತಿಗೆ ನೀಡಿದ ಕೊಡುಗೆಗಳನ್ನು ನಾವಿಂದು ಅರ್ಥ ಮಾಡಿಕೊಳ್ಳಬೇಕಿದೆ. ಸರ್ವ ಧರ್ಮಗಳನ್ನು ಗೌರವಿಸುವ ಮೂಲಕ ನಾವು ಸುಂದರ ಸಮಾಜವನ್ನು ಕಟ್ಟಬೇಕಾಗಿದೆ. ಮಹಮ್ಮದ್ ಪೈಗಂಬರ್ ಅವರ ಸಿದ್ಧಾಂತ ಕೇವಲ ಆಧ್ಯಾತ್ಮ ಸಿದ್ಧಾಂತವಾಗಿರಲಿಲ್ಲ. ಮಸೀದಿ, ಮದರಸಾ, ಧಾರ್ಮಿಕ ಆಚಾರ-ವಿಚಾರಗಳನ್ನು ಪಸರಿಸುವ ಸಿದ್ಧಾಂತವಾಗಿದೆ. ಹೀಗಾಗಿ, ಎಲ್ಲ ಧರ್ಮದವರೂ ಸೇರಿ ಈ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಸಚಿವ ಎಚ್.ಕೆ. ಪಾಟೀಲ ಆಶಿಸಿದರು.
ಸೋಮವಾರ ನಗರದ ಹಳೇ ಬಸ್ ನಿಲ್ದಾಣದ ಬಳಿಯ ಉರ್ದು ಶಾಲಾ ಆವರಣದಲ್ಲಿ ಈದ್ ಮಿಲಾದ್ ಕಮಿಟಿಯಿಂದ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ್ ಅವರ ಜಯಂತ್ಯುತ್ಸವ, ನೋಟ್ ಬುಕ್ ವಿತರಣೆ, ಮುಸಲ್ಮಾನ ಬಡ ಮಹಿಳೆಯರಿಗೆ ಸೀರೆಗಳು, ಮದರಸಾ ಮಕ್ಕಳಿಗೆ ಬಟ್ಟೆ ವಿತರಣೆ, ರಕ್ತ ತಪಾಸಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಸಚಿವರು ಮಾತನಾಡಿದರು.
ನಾವು ಇಂದು ಸಾಮಾಜಿಕ ಜೀವನದಲ್ಲಿ ಇರುವುದರಿಂದ ನಾವಾಡುವ ಮಾತುಗಳ ಮೇಲೆ ಹತೋಟಿ ಇಟ್ಟುಕೊಳ್ಳಬೇಕು. ಒಂದು ವೇಳೆ ನಾಲಿಗೆ ಮೇಲೆ ಹತೋಟಿ ತಪ್ಪಿದರೆ ಜೈಲು ಅನಿವಾರ್ಯವಾಗುತ್ತದೆ. ಕೆಟ್ಟ ವಿಚಾರಕ್ಕೆ ಜೈಲು ಒಂದು ಪರಿಹಾರವಲ್ಲ. ಕುರಾನ್‌ನಲ್ಲಿರುವ ತತ್ವ-ಆದರ್ಶಗಳನ್ನು ಅಳವಡಿಸಿಕೊಂಡು ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಳೆದ 45 ವರ್ಷಗಳಿಂದ ಇಲ್ಲಿನ ಉರ್ದು ಶಾಲಾ ಆವರಣದಲ್ಲಿ ಈದ್ ಮಿಲಾದ್ ಕಾರ್ಯಕ್ರಮ ಹಮ್ಮಿಕೊಂಡು ಬರಲಾಗುತ್ತಿದೆ. ಇಷ್ಟು ವರ್ಷಗಳಲ್ಲಿ ಇದೇ ಸಲ ಸಮುದಾಯ ಭವನ ನಿರ್ಮಾಣ ಮಾಡಲು ನಗರದಲ್ಲಿ ಜಾಗ ನೀಡುವಂತೆ ಈದ್ ಮಿಲಾದ್ ಕಮಿಟಿಯಿಂದ ಮನವಿ ನೀಡಲಾಗಿದೆ. ಸಮಾಜವನ್ನು ಜಾಗೃತಿ ಮಾಡುವ ಕೆಲಸವನ್ನು ಮಾಡಲಾಗುತ್ತದೆ. ಮುಂದಿನ ಮೂರು ತಿಂಗಳಲ್ಲಿ ನಗರದ ವಿವಿಧ ಭಾಗಗಳಲ್ಲಿ ಐದು ಕಡೆ ಜಾಗ ಗುರುತಿಸಬೇಕು. ಅದರಲ್ಲಿ ಒಂದು ಜಾಗವನ್ನು ನೀಡಲಾಗುತ್ತದೆ. ಜನವರಿ ಮೊದಲ ತಿಂಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಜಾಗ ಮಂಜೂರು ಮಾಡಲಾಗುತ್ತದೆ ಎಂದರು.
ಪ್ರಸಕ್ತ ವರ್ಷದಿಂದ ಈದ್ ಮಿಲಾದ್ ಕಮಿಟಿಯಿಂದ ಮಕ್ಕಳಿಗೆ ಪುಸ್ತಕ ವಿತರಿಸುತ್ತಿರುವ ಕೆಲಸ ಮಾಡುತ್ತಿರುವುದು ಉತ್ತಮವಾಗಿದೆ. ಮುಂದಿನ ವರ್ಷದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಿಗೆ ವಿತರಣೆ ಮಾಡಬೇಕು. ಮಕ್ಕಳ ಶೈಕ್ಷಣಿಕ ವಸ್ತುಗಳ ಬಗ್ಗೆ ಹೆಚ್ಚು ಆಸಕ್ತಿ ವಹಿಸಬೇಕು. ಗ್ಯಾರಂಟಿ ಯೋಜನೆಯಿಂದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ಅನೂಕುಲವಾಗಿದೆ ಎಂದರು.
ಮೌಲಾನ ನಿಜಾಮುದ್ದೀನ್ ಕಾಸ್ತಿ ಮಾತನಾಡಿದರು. ಮಹಮ್ಮದ ಇಸ್ಲಾಕ್ ಪುತ್ತೂರ ಪ್ರವಾದಿ ಮುಮಹ್ಮದ್ ಪೈಗಂಬರ್ ಅವರ ಜೀವನ ಚರಿತ್ರೆ ಬಗ್ಗೆ ಉಪನ್ಯಾಸ ನೀಡಿದರು. ಈದ್ ಮಿಲಾದ್ ಕಮಿಟಿ ಅಧ್ಯಕ್ಷ ಬಾಷಾಸಾಬ್ ಮಲ್ಲಸಮುದ್ರ, ಬಿ.ಬಿ. ಅಸೂಟಿ, ಯುಸೂಪ್ ಕೊಟೂರ, ಶೌಕತ್ ಕಾತರಕಿ, ಆರೀಫ್ ಹುನಗುಂದ, ಕರಿಂಸಾಬ್ ಸುಳಗಾರ, ರಿಯಾಜಅಹ್ಮದ್ ಗುಡಿಸಲಮನಿ, ಅಕ್ಬರ್ ಅಲಿ ಅತ್ತರ್, ಶಬ್ಬರ್ ಧಾರವಾಡ, ಚಾಂದಸಾಬ್ ಕೊಟ್ಟೂರ, ಮಲ್ಲಿಕಜಾನ್ ಬಾಗಲಕೋಟಿ, ಸಮೀರ್ ಅಗಸನಹಳ್ಳಿ, ದಾದಾಪೀರ್ ಮುಂಡರಗಿ ಮುಂತಾದವರಿದ್ದರು.
ಜಯಂತಿಯ ನಿಮಿತ್ತ ಹಳೇ ಬಸ್ ನಿಲ್ದಾಣ ಸಮೀಪದ ಉರ್ದು ಶಾಲಾ ಆವರಣದಲ್ಲಿ ಈದ್ ಮಿಲಾದ್ ಕಮಿಟಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಅದರಲ್ಲೂ ಉರ್ದು ಶಾಲೆಯ ಮಕ್ಕಳಿಗೆ 5 ಸಾವಿರ ನೋಟ್ ಬುಕ್ ವಿತರಣೆ, ಮುಸಲ್ಮಾನ ಬಡ ಮಹಿಳೆಯರಿಗೆ 250 ಸೀರೆಗಳು, 150 ಮದರಸಾ ಮಕ್ಕಳಿಗೆ ಬಟ್ಟೆ ವಿತರಣೆ, ಅನ್ನ ಸಂತರ್ಪಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ರಕ್ತ ತಪಾಸಣೆ ಹಾಗೂ ಕಣ್ಣಿನ ತಪಾಸಣೆ ಕಾರ್ಯಕ್ರಮದಲ್ಲಿ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.