ವಿಜಯಸಾಕ್ಷಿ ಸುದ್ದಿ, ಗದಗ : ವಿಶ್ವಕರ್ಮ ಸಮಾಜದವರು ಕಠಿಣ ಪರಿಶ್ರಮ ಮತ್ತು ಶ್ರದ್ಧೆಯಿಂದ ಕೆಲಸ ನಿರ್ವಹಸಿ ವಿಶೇಷ ಕಲೆಯ ಮೂಲಕ ಸಮಾಜಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ ಹೇಳಿದರು.
ನಗರದ ವಿಶ್ವಕರ್ಮ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವಕರ್ಮ ಸಮಾಜದವರು ಏಕಾಗ್ರತೆಯಿಂದ ಶಿಲ್ಪಕಲೆ, ಪತ್ತಾರ, ಬಡಿಗೇರ ಅಂತಹ ಅನೇಕ ವಿಶೇಷ ಕಲೆಯನ್ನು ಕಲಿತು ಉತ್ತಮ ಪ್ರತಿಭೆಯನ್ನು ಹೊಂದಿ ಸುಂದರವಾದ ರೂಪ ನೀಡುತ್ತಾರೆ. ಪ್ರಸ್ತುತ ದಿನಮಾನದಲ್ಲಿ ಯಂತ್ರಗಳ ಹಾವಳಿ ಹೆಚ್ಚಾಗಿದ್ದು, ಮಾನವ ತಯಾರಿಸುತ್ತಿದ್ದ ಎಲ್ಲಾ ರೀತಿಯ ಶೈಲಿಗಳನ್ನು ಯಂತ್ರಗಳು ಸರಾಗವಾಗಿ ಮಾಡುತ್ತಿವೆ. ಹಾಗಾಗಿ ಈ ಕಲೆಗಳು ಕೇವಲ ಯಂತ್ರಗಳಿಗೆ ಸೀಮಿತವಾಗದೆ, ನಿಮ್ಮ ಪೂರ್ವಜರು ನೀಡಿದ ವಿದ್ಯೆಯನ್ನು ಇಂದಿನ ಯುವಪೀಳಿಗೆಗೆ ಕಲಿಸಿ ಈ ಕಲೆಯನ್ನು ಉತ್ತಂಗಕ್ಕೆ ಬೆಳೆಸಬೇಕು ಎಂದರು.
ಶ್ರೀ ಗುರು ಭೀಮಾ ಶಂಕರ ವಿದ್ಯಾಪೀಠದ ಅಧ್ಯಕ್ಷರಾದ ಬಸವರಾಜ ಬಡಿಗೇರ ಮಾತನಾಡಿ, ಮೂಲತಃ ವಿಶ್ವಕರ್ಮ ಸಮಾಜದವರು ತ್ಯಾಗ ಸ್ವರೂಪಿಗಳು. ಎಲ್ಲವನ್ನು ಕಳೆದುಕೊಂಡರೂ ಸದಾ ಸಂತೋಷದಿಂದ ಇದ್ದು, ಶ್ರಮ ಸಂಸ್ಕೃತಿಯಲ್ಲಿ ನಂಬಿಕೆಯಿಟ್ಟು ವಿಷದಲ್ಲಿ ಅಮೃತ ಕಂಡು, ಮಣ್ಣಿನಲ್ಲಿ ಮಾಣಿಕ್ಯವನ್ನು ಕಂಡವರು. ನಮ್ಮ ಸಮಾಜ ತುಂಬಾ ಹಳೆಯದಾಗಿದ್ದು, ವೇದ-ಪುರಾಣಕ್ಕೂ ಮೊದಲೇ ವಿಶ್ವಕರ್ಮ ಸಮಾಜದ ಅಸ್ತಿತ್ವದಲ್ಲಿತ್ತು ಎಂದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಮೆಹಬೂಬಸಾಬ ನದಾಫ್, ಕುರ್ತಕೋಟಿ ಎಜ್ಯುಕೇಶನ್ ಸೊಸೈಟಿ ಅಧ್ಯಕ್ಷ ಗೀರಿಶ ಎಂ.ಡಬಾಲಿ, ಕೃಷ್ಣಗೌಡ ಪಾಟೀಲ, ಗದಗ ತಾಲೂಕಾ ತಹಸೀಲ್ದಾರ ಶ್ರೀನಿವಾಸಮೂರ್ತಿ ಕುಲಕರ್ಣಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ಕಾರ್ಮಿಕ ಅಧಿಕಾರಿ ಶ್ರೀಶೈಲ ಸೋಮನಕಟ್ಟಿ, ಖಜಾನೆ ಇಲಾಖೆ ಉಪನಿರ್ದೇಶಕ ವಿ.ಹರಿನಾಥ ಬಾಬು ಸೇರಿದಂತೆ ಸಮಾಜದ ಗಣ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಸಾದ ಸುತಾರ ಮತ್ತು ತಂಡದವರು ಸಂಗೀತ ಪ್ರಸ್ತುತಪಡಿಸಿದರು. ಕಾರ್ಯಕ್ರಮವನ್ನು ವಿಶ್ವನಾಥ ಕಮ್ಮಾರ ನಿರ್ವಹಿಸಿದರು.
ಪ್ರಸ್ತುತ ದಿನಗಳಲ್ಲಿ ವಿಶ್ವಕರ್ಮ ಸಮಾಜದಲ್ಲಿ ಅಪಾರ ಜ್ಞಾನ ಮತ್ತು ಉತ್ತಮ ಪ್ರತಿಭೆ ಹೊಂದಿದವರಿದ್ದಾರೆ. ಹಾಗಾಗಿ ಎಲ್ಲರೂ ಒಚಿದಾಗಿ, ಒಗ್ಗಟ್ಟಿನಿಂದ ಸಂಘಟನೆಯನ್ನು ಗಟ್ಟಿಗೊಳಿಸಿ ಸರ್ಕಾರದಿಂದ ದೊರೆಯುವ ಸೌಕರ್ಯಗಳನ್ನು ತೆಗೆದುಕೊಳ್ಳಬೇಕು ಎಂದು ಬಸವರಾಜ ಬಡಿಗೇರ ಸುದೀರ್ಘವಾಗಿ ಉಪನ್ಯಾಸ ನೀಡಿದರು.


