ವಿಜಯಸಾಕ್ಷಿ ಸುದ್ದಿ, ಗದಗ : ದಾವಣಗೆರೆ ಮೂಲದ ಮಾರುತಿ ಎನ್ನುವ ವ್ಯಕ್ತಿ ಎನ್‌ಆರ್‌ಎಲ್‌ಎಮ್ ಅಡಿಯಲ್ಲಿ ಜಿಲ್ಲೆಯಲ್ಲಿ ರೈತರಿಂದ ಕಡಲೆಯನ್ನು ಖರಿದಿ ಮಾಡಿ 9 ತಿಂಗಳವರೆಗೂ ಹಣ ನೀಡದೇ ರೈತರನ್ನು ಸತಾಯಿಸುತ್ತಿದ್ದಾರೆ ಎಂದು ರೈತ ಮುಖಂಡ ವಿಜಯಕುಮಾರ ಸುಂಕದ ಆರೋಪಿಸಿದರು.
ಗುರುವಾರ ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ-ಮುಂಡರಗಿ ರೈತರು ಸಚಿವ ಎಚ್.ಕೆ. ಪಾಟೀಲ್ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಗುಂಪಿನ ಮೂಲಕ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರ ಸೂಚನೆಯಂತೆ ಖರೀದಿ ಮಾಡಿದ್ದಾರೆ. ಆದರೂ ರೈತರಿಗೆ ಹಣ ಕೊಡದೆ ಮೋಸ ಮಾಡಲಾಗಿದೆ ಎಂದು ಆರೋಪಿಸಿದರು.
ರೈತರ ಸಮಸ್ಯೆಗೆ ಶೀಘ್ರವೇ ಪರಿಹಾರ ಒದಗಿಸದಿದ್ದರೆ ಸೆ. 23ರಂದು ಚನ್ನಮ್ಮ ವೃತ್ತದಿಂದ ಡಿಸಿ ಕಚೇರಿವರೆಗೆ ಪಾದಯಾತ್ರೆ ನಡೆಸಿ, ಅನಿರ್ದಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸಲಾಗುವುದು. ಅದಕ್ಕೂ ಸ್ಪಂದಿಸದಿದ್ದರೆ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್.ಪಿ. ಮುಲ್ಲಾ, ನಾರಾಯಣ ಬಿರಸಲ, ಸೋಮನಾಥ ಲಮಾಣಿ, ಲಕ್ಷ್ಮೀ ಹಿತ್ತಲಮನಿ, ಸರಸ್ವತಿ ದಾಸರ, ಸರಸ್ವತಿ ಬಡಗೇರ, ಶಿವಪ್ಪ ಮುಲಿಮನಿ, ವೆಂಕಣ್ಣ ಮಲ್ಲರೆಡ್ಡಿ, ಸೋಮರಡ್ಡಿ ಹೊಸಮನಿ, ಪಂಚಾಕ್ಷರಯ್ಯ ಬೆಟಗೇರಿಮಠ, ಸಿದ್ದಪ್ಪ ಮಳ್ಳೂರ, ಬಸವರಾಜ ಬಾಳಿಕಾಯಿ, ಮಂಜುನಾಥ ಗೋಡಿ, ವಾಯ್.ಎನ್. ಕೆಂಚನಗೌಡ್ರ, ಆನಂದ ಮುಂತಾದವರು ಉಪಸ್ಥಿತರಿದ್ದರು.