ಪ್ರತಿಭೆಗಳನ್ನು ಗುರುತಿಸುವ ಕೆಲಸವಾಗಲಿ : ನಾಗರತ್ನ ಹಡಗಲಿ

0
``Natyanjali-24'' programme
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಇಂದಿನ ದಿನಗಳಲ್ಲಿ ಮಕ್ಕಳು ದೇಶೀಯ ಕಲೆಗಳಿಂದ ದೂರಾಗುತ್ತಿದ್ದು, ಪಾಲಕರು ಮಕ್ಕಳಿಗೆ ಮೊಬೈಲ್‌ಗಳನ್ನು ನೀಡದೆ ಅವರಲ್ಲಿರುವ ಪ್ರತಿಭೆಗಳನ್ನು ಗುರುತಿಸುವ ಕೆಲಸ ಮಾಡಬೇಕು ಎಂದು ಧಾರವಾಡದ ರತಿಕಾ ನೃತ್ಯ ನಿಕೇತನ ಭರತನಾಟ್ಯ ಶಾಲೆಯ ನಿರ್ದೇಶಕಿ, ವಿದುಷಿ ನಾಗರತ್ನ ಹಡಗಲಿ ಹೇಳಿದರು.

Advertisement

ನಗರದ ಪಂ. ಭೀಮಸೇನ ಜೋಶಿ ರಂಗಮಂದಿರದಲ್ಲಿ ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯ 3ನೇ ವಾರ್ಷಿಕೋತ್ಸವದ ಅಂಗವಾಗಿ ಜರುಗಿದ `ನಾಟ್ಯಾಂಜಲಿ-24′ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾಟ್ಯಕಲೆ ನಮ್ಮ ದೇಶದ ಸಂಸ್ಕೃತಿಯಾಗಿದ್ದು, ಪಾಲಕರು ಮಕ್ಕಳಿಗೆ ನೃತ್ಯ ಕಲೆಗಳಲ್ಲಿರುವ ಆಸಕ್ತಿಯನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕಿದೆ. ನಿಮಿಷಾಂಬ ಜ್ಯೋತಿಶ್ರೀ ನಾಟ್ಯ ಅಕಾಡೆಮಿಯು ವರ್ಷದಿಂದ ವರ್ಷಕ್ಕೆ ಹೆಚ್ಚು ಕ್ರಿಯಾಶೀಲವಾಗಿ ಜಿಲ್ಲೆಯಾದ್ಯಾಂತ ಶಿಬಿರಗಳನ್ನು ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಗಳನ್ನು ಬೆಳೆಸುವ ಅಕಾಡೆಮಿ ಆಗಲಿ ಎಂದು ಹಾರೈಸಿದರು.

ಪತ್ರಕರ್ತ ವೆಂಕಟೇಶ ಇಮರಾಪೂರ ಮಾತನಾಡಿ, ಇಂದಿನ ದಿನಗಳಲ್ಲಿ ಪಾಲಕರು ಮಕ್ಕಳನ್ನು ಅಂಕ ಗಳಿಸುವ ಯಂತ್ರ ಎಂದು ತಿಳಿದಂತಿದೆ. ಅವರ ಒತ್ತಡವನ್ನು ತಡೆದು ಅವರ ಆಸಕ್ತಿಯನ್ನು ಗುರುತಿಸಿ ಸಂಗೀತ, ನೃತ್ಯ, ನಾಟಕ, ಕ್ರೀಡೆ ಸೇರಿದಂತೆ ಹಲವಾರು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಪ್ರೇರಣೆ ನೀಡಬೇಕು ಎಂದರು.

ಅಕಾಡೆಮಿಯ ನಿರ್ದೇಶಕಿ ಜ್ಯೋತಿಶ್ರೀ ಎಂ.ಎಲ್. ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪಂ. ಪುಟ್ಟರಾಜ ಕವಿ ಗವಾಯಿಗಳವರ ಶಿಷ್ಯರಾದ ಡಾ. ನಾರಾಯಣ ಹಿರೇಕೊಳಚಿ, ಶಿರಹಟ್ಟಿಯ ಅಮೃತ ಭಾತಖಂಡೆ, ಪಾರ್ಶ್ವನಾಥ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ವಿಜಯಲಕ್ಷ್ಮಿ ಪುರಾಣಿಕ, ಷಡಾಕ್ಷರಿ ಟಿ.ವಿ. ಮುಂತಾದವರು ಉಪಸ್ಥಿತರಿದ್ದರು.

ಹುಬ್ಬಳ್ಳಿಯ ಮೊರಾರ್ಜಿ ವಸತಿ ಶಾಲೆಯ ಸಂಗೀತ ಶಿಕ್ಷಕಿ ನಾಗರತ್ನಾ ಕುಂಬಾರ ಕಾರ್ಯಕ್ರಮ ನಿರೂಪಿಸಿದರು. ನಂತರ ಮಕ್ಕಳಿಂದ ನಡೆದ ನಾಟ್ಯಾಂಜಲಿ ಕಾರ್ಯಕ್ರಮ ಎಲ್ಲರನ್ನೂ ಮನಸೂರೆಗೊಳ್ಳುವಂತೆ ಮಾಡಿತು.

ಮುಳಗುಂದದ ಡಾ. ಎಸ್.ಸಿ. ಚವಡಿ ಮಾತನಾಡಿ, ಈ ಹಿಂದೆ ನಾಟ್ಯ ಕಲೆ ರಾಜರುಗಳ ಗೌರವವಾಗಿತ್ತು. ಅದರೆ, ಈಗ ಸರಕಾರದಿಂದ ಅದನ್ನು ಉಳಿಸಿ-ಬೆಳೆಸಲು ಪ್ರೋತ್ಸಾಹ ನೀಡಬೇಕಾಗಿದೆ. ನೃತ್ಯಕಲೆಯನ್ನು ಉಳಿಸಿ-ಬೆಳಸಲು ಅಕಾಡೆಮಿಯ ನಿರ್ದೇಶಕಿ ಜ್ಯೋತಿಶ್ರೀ ಅವರು ತುಂಬಾ ಶ್ರಮವಹಿಸಿ ಗದಗ ಸೇರಿದಂತೆ ಶಿರಹಟ್ಟಿ, ಮುಂಡರಗಿ, ಮುಳಗುಂದ ಭಾಗಗಳಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ. ನೂರಾರು ಮಕ್ಕಳು ಈ ನೃತ್ಯಕಲೆಯನ್ನು ಕಲಿಯುತ್ತಿರುವುದು ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

 


Spread the love

LEAVE A REPLY

Please enter your comment!
Please enter your name here