ನೀರಾವರಿ ಯೋಜನೆಗಳ ಅನುಷ್ಠಾನವಾಗಲಿ : ಪ್ರವೀಣ್ ಶೆಟ್ಟಿ

0
Karave padayatra demanding implementation of various schemes
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಯಾವುದೇ ಹೋರಾಟ ಕೈಗೆತ್ತಿಕೊಂಡರೂ ಅದಕ್ಕೊಂದು ತಾರ್ಕಿಕ ಅಂತ್ಯ ನೀಡುವವರೆಗೆ ಹಿಂದಡಿ ಇಟ್ಟಿಲ್ಲ. ಕಳಸಾ–ಬಂಡೂರಿ, ಮಹದಾಯಿ ಉತ್ತರ ಕರ್ನಾಟಕದ ಜನರ, ರೈತರ ಅಗತ್ಯದ ಯೋಜನೆಯಾಗಿದ್ದು, ಅದು ಅನುಷ್ಠಾನ ಆಗುವವರೆಗೂ ನಿದ್ರಿಸುವುದಿಲ್ಲ ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹೇಳಿದರು.

Advertisement

ಮಹಾದಾಯಿ, ಕಳಸಾ ಬಂಡೂರಿ ಯೋಜನೆ ಶೀಘ್ರ ಅನುಷ್ಠಾನಕ್ಕೆ ಆಗ್ರಹಿಸಿ ನರಗುಂದದಿಂದ ಗದಗ ನಗರದವರೆಗೆ ನೂರಾರು ಕಾರ್ಯಕರ್ತರು ಹಾಗೂ ರೈತ ಮುಖಂಡರೊಂದಿಗೆ ಪಾದಯಾತ್ರೆ ನಡೆಸಿದ ಅವರು, ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.

ನಾಡಿನ ನೆಲ-ಜಲ-ಭಾಷೆಗೆ ಸಂಬಂಧಿಸಿದಂತೆ ನಮ್ಮ ವೇದಿಕೆ ವತಿಯಿಂದ ಅನೇಕ ಹೋರಾಟಗಳನ್ನು ನಡೆಸಲಾಗಿದೆ. ಈ ವೇಳೆ ಪೊಲೀಸರ ಲಾಠಿ ಏಟು ತಿಂದಿದ್ದೇವೆ. ಸೆರೆವಾಸ ಅನುಭವಿಸಿದ್ದೇವೆ. ಯಾವುದಕ್ಕೂ ಜಗ್ಗದೇ ಮುಂದೆ ನಡೆದಿದ್ದೇವೆ. ಅನೇಕ ಸಂದರ್ಭದಲ್ಲಿ ನಮ್ಮ ಹೋರಾಟಕ್ಕೆ ಜಯ ಸಿಕ್ಕಿದೆ. ಅದೇರೀತಿ, ಕಳಸಾ ಬಂಡೂರಿ, ಮಹದಾಯಿ ಯೋಜನೆಯ ಶೀಘ್ರ ಅನುಷ್ಠಾನಕ್ಕೆ ಪಾದಯಾತ್ರೆ ನಡೆಸಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಯೋಜನೆ ಅನುಷ್ಠಾನಕ್ಕೆ ತ್ವರಿತ ನಿರ್ಧಾರ ಕೈಗೊಳ್ಳಬೇಕು ಎಂದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಈ ವಿಚಾರದಲ್ಲಿ ಹೆಚ್ಚಿನ ಮುತುವರ್ಜಿ ವಹಿಸಬೇಕಿದೆ. ಅವರಿಗೂ ಮನವಿ ಪತ್ರ ನೀಡಿದ್ದು, ಒಂದು ತಿಂಗಳ ಗಡುವು ನೀಡಲಾಗಿದೆ. ಆಗಲೂ ಪ್ರಗತಿ ಕಾಣದಿದ್ದರೆ ಸಂಸದರು, ಕೇಂದ್ರ ಸಚಿವರ ಮನೆ ಮುಂದೆ ಧರಣಿ ಕೂರಲಾಗುವುದು ಎಂದು ತಿಳಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಮಾತನಾಡಿ, ಜಿಲ್ಲೆಯ ನೀರಾವರಿ ಯೋಜನೆಗಾಗಿ ರಾಜ್ಯದ ವಿವಿಧೆಡೆಯಿಂದ ಕರವೇ ಕಾರ್ಯಕರ್ತರು ಬಂದು ಹೋರಾಟ ಕೈಗೊಂಡಿದ್ದು, ಪಾದಯಾತ್ರೆಯನ್ನು ಶಾಂತಿಯುತವಾಗಿ ನಡೆಸಿದ್ದಾಗಿ ಅಭಿನಂದಿಸುವೆ. ನಿಮ್ಮ ಮನವಿಯನ್ನು ಸರ್ಕಾರಕ್ಕೆ ಮುಟ್ಟಿಸಲಾಗುವುದು ಎಂದು ತಿಳಿಸಿದರು.

ಪಾದಯಾತ್ರೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಪಾದಯಾತ್ರೆಯ ವೇಳೆ ಅನೇಕ ಕಡೆಗಳಲ್ಲಿ ಜನರು ಬಯಲು ಶೌಚಕ್ಕೆ ತೆರಳುತ್ತಿದ್ದುದನ್ನು ನೋಡಿ ಬೇಸರವಾಯಿತು. ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಕ್ರಮವಹಿಸಬೇಕು ಎಂದು ಕರವೇ ರಾಜ್ಯ ಘಟಕದ ಅಧ್ಯಕ್ಷ ಪ್ರವೀಣ್ ಶೆಟ್ಟಿ ವಿನಂತಿಸಿದಾಗ, ಕರವೇ ಬೇಡಿಕೆಗಳ ಈಡೇರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು. ಬಯಲು ಶೌಚ ನಿರ್ಮೂಲನೆಗೆ ಜಿಲ್ಲಾಡಳಿತ ಕ್ರಮ ವಹಿಸಲಿದೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದರು.


Spread the love

LEAVE A REPLY

Please enter your comment!
Please enter your name here