ವಿಜಯಸಾಕ್ಷಿ ಸುದ್ದಿ, ಗದಗ : ವೈದ್ಯರು ರೋಗಿಗಳೊಂದಿಗೆ ಸೌಜನ್ಯ ಹಾಗೂ ವಿನಮ್ರತೆಯಿಂದ ವರ್ತಿಸುವ ಮೂಲಕ ನೋವಿನಿಂದ ಬಂದವರಿಗೆ ಸಾಂತ್ವನದಿಂದ ಚಿಕಿತ್ಸೆ ನೀಡಿ ಧನ್ಯತೆಯನ್ನು ಕಾಣಬೇಕೆಂದು ಹಿರಿಯ ತಜ್ಞ ವೈದ್ಯ, ಕೆ.ಎಂ.ಸಿ ಅಧ್ಯಕ್ಷ ಡಾ. ಯೋಗಾನಂದ ರೆಡ್ಡಿ ಹೇಳಿದರು.
ಅವರು ಶುಕ್ರವಾರ ಗದಗ ಐಎಂಎ ಸಭಾಂಗಣದಲ್ಲಿ ನಡೆದ ಗದಗ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರ ಸೊಸೈಟಿ (ಗಾಗ್ಸ್)ಯ ನೂತನ ಪದಾಧಿಕಾರಿಗಳ ಪದಗ್ರಹಣ ನೆರವೇರಿಸಿ ಮಾತನಾಡಿದರು.
ಸಮಾಜದಲ್ಲಿ ವೈದ್ಯರಿಗೆ ಗೌರವದ ಸ್ಥಾನವಿದೆ. ವೈದ್ಯರನ್ನು ದೇವರೆಂದೇ ಬಣ್ಣಿಸಲಾಗಿದೆ. ನಮ್ಮ ವೈದ್ಯಕೀಯ ಸೇವೆ ಚೆನ್ನಾಗಿರಬೇಕು. ನಮ್ಮ ವಿದ್ವತ್, ಹುಮ್ಮಸ್ಸು, ಅಹಂಕಾರ ಸಲ್ಲದು. ವೈದ್ಯರಾದವರು ಸದಾಕಾಲ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರನ್ನು ಬದುಕಿಸಬೇಕೆಂದು ಪ್ರಯತ್ನಿಸುವರು. ಕೆಲವೊಮ್ಮೆ ರೋಗಿಯ ರೋಗ ಉಲ್ಬಣಗೊಂಡಿದ್ದರೆ ಬದುಕಿಸಲಾಗದು. ಆಗ ವೈದ್ಯರ ನಿರ್ಲಕ್ಷ್ಯ ಎಂಬ ಆರೋಪ, ದೂರುಗಳು ಬರುತ್ತವೆ. ಇವು ಭಾವುಕತನದ ಆರೋಪಗಳಾದರೂ ಇಂತಹ ಆರೋಪಗಳನ್ನು ಅಲ್ಲಗಳೆಯುವಂತಿಲ್ಲ ಎಂದರು.
ವೈದ್ಯರು ಯಾವುದೇ ಒತ್ತಡಗಳಿಲ್ಲದೆ ಆಸ್ಪತ್ರೆಯಲ್ಲಿ ಶಾಂತಚಿತ್ತದಿಂದ ವರ್ತಿಸಬೇಕು. ರೋಗಿಗಳಿಗೆ, ಆಸ್ಪತ್ರೆಯ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಲ್ಲವನ್ನು ಸರಿದೂಗಿಸಿಕೊಂಡು ಮುನ್ನಡೆಬೇಕು. ಗದಗ ಪರಿಸರದಲ್ಲಿ ಹಿರಿಯ ವೈದ್ಯರ ಪಡೆಯೇ ಇದೆ. ಅವರ ಮಾರ್ಗದರ್ಶನದಲ್ಲಿ ಯುವ ವೈದ್ಯರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಲಿ, ನೂತನ ಪದಾಧಿಕಾರಿಗಳು ಕ್ರಿಯಾಶೀಲತೆಯಿಂದ ಕಾರ್ಯ ಮಾಡಲಿ ಎಂದರು.
ಉದ್ಘಾಟನೆ ನೆರವೇರಿಸಿ ‘ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆ’ ವಿಷಯವಗಿ ಮಾತನಾಡಿದ ರಾಜ್ಯ ಕಸೂಗಾ ಅಧ್ಯಕ್ಷೆ ಡಾ.ಭಾರತಿ ರಾಜಶೇಖರ ಕ್ಯಾನ್ಸರ್ ಬಗ್ಗೆ ಭಯ ಬೇಡ, ಆದರೆ ಜಾಗ್ರತಿ ಅವಶ್ಯ. ಕ್ಯಾನ್ಸರ್ ವ್ಯಾಕ್ಸಿನ್ ಈಗಾಗಲೇ ವೈದ್ಯಕೀಯ ರಂಗವನ್ನು ಪ್ರವೇಶಿಸಿದ್ದು, ಕೊಂಚ ದುಬಾರಿ ಎನ್ನಿಸಿದರೂ ಪರಿಣಾಮ ಬಿರುತ್ತಿರುವ ಬಗ್ಗೆ ವರದಿಗಳಿವೆ. ಬರಲಿರುವ ದಿನಮಾನಗಳಲ್ಲಿ ಕ್ಯಾನ್ಸರ್ ಲಸಿಕೆ ಉಚಿತವಾಗಿ ದೊರೆಯುವಂತಾಗಲಿ. ಆ ಮೂಲಕ ಕ್ಯಾನ್ಸರ್ ಶಮನಗೊಳ್ಳಲಿ ಎಂದರು.
ಗದಗ ಐಎಂಎ ಅಧ್ಯಕ್ಷ ಡಾ. ಜಿ.ಎಸ್. ಪಲ್ಲೇದ, ಕಾರ್ಯದರ್ಶಿ ಡಾ. ಚಂದ್ರಶೇಖರ ಬಳ್ಳಾರಿ, ರಾಷ್ಟ್ರೀಯ ಐಎಂಎ ಉಪಾಧ್ಯಕ್ಷ ಡಾ. ಜಿ.ಬಿ. ಬಿಡನಾಳ ವಿಶೇಷ ಅತಿಥಿಗಳಾಗಿ ಆಗಮಿಸಿದ್ದರು. ವೇದಿಕೆಯ ಮೇಲೆ ಹಿರಿಯ ತಜ್ಞ ವೈದ್ಯ ಡಾ.ಶಶಿಧರ ರೇಶ್ಮೆ ಉಪಸ್ಥಿತರಿದ್ದರು. ಗಾಗ್ಸ್ ನೂತನ ಅಧ್ಯಕ್ಷರಾಗಿ ಡಾ.ಪ್ರವೀಣ ಸಜ್ಜನರ, ಕಾರ್ಯದರ್ಶಿಯಾಗಿ ಡಾ. ರಶ್ಮಿ ಪಾಟೀಲ, ಖಜಾಂಚಿಯಾಗಿ ಡಾ. ತೇಜಸ್ವಿನಿ ಹಿರೇಮಠ ಹಾಗೂ ಇತರರು ಅಧಿಕಾರ ವಹಿಸಿಕೊಂಡರು.
ಡಾ.ಶೃತಿಭಾವಿ ಪಾಟೀಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಸಪ್ನಾ ಕಾಳೆ ಪರಿಚಯಿಸಿದರು. ಡಾ.ಅನ್ನಪೂರ್ಣ ಧನ್ನೂರ ನಿರೂಪಿಸಿ ವರದಿ ಸಾದರಪಡಿಸಿದರು. ಕೊನೆಗೆ ಸಂತೋಷ ಹುಯಿಲಗೋಳ ವಂದಿಸಿದರು.
ಕ್ಯಾನ್ಸರ್ ಬರಲು ಕಾರಣವೇನು, ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಎಂದು ಜನಸಾಮಾನ್ಯರಿಗೆ ತಿಳಿಸಿ ಜಾಗೃತಿ ಮೂಡಿಸುವ ಕಾರ್ಯ ವೈದ್ಯರಿಂದ, ಸಮಾಜ ಸೇವಕರಿಂದ, ಸಂಘ-ಸಂಸ್ಥೆ ಹಾಗೂ ಮಾಧ್ಯಮಗಳ ಮೂಲಕ ಆಗಬೇಕಿದೆ. ಈ ಕಾರಣಕ್ಕಾಗಿ ರಾಜ್ಯ ಕಸೂಗಾ ಜಾಗೃತಿಯ ಕಾರ್ಯಕ್ರಮಗಳನ್ನು ರೂಪಿಸಿದ್ದು, ಈ ಕಾರ್ಯ ಗದುಗಿನಲ್ಲೂ ನಡೆಯಲಿ, ಹೊಸ ಪದಾಧಿಕಾರಿಗಳು ಚೆನ್ನಾಗಿ ಕೆಲಸ ಮಾಡಲಿ ಎಂದು ರಾಜ್ಯ ಕಸೂಗಾ ಅಧ್ಯಕ್ಷೆ ಡಾ.ಭಾರತಿ ರಾಜಶೇಖರ ಆಶಿಸಿದರು.
Advertisement