ವಿಜಯಸಾಕ್ಷಿ ಸುದ್ದಿ, ಗದಗ : 3ನೇ ವರ್ಷದ ಗಣಪತಿ ಪ್ರತಿಷ್ಠಾಪನೆಯ ಅಂಗವಾಗಿ ಸೆ. 22ರಂದು ಸಂಜೆ 6 ಗಂಟೆಗೆ ಧರ್ಮಸಭೆ, ನೃತ್ಯ, ಸಂಗೀತ ವೈಭವ ಹಾಗೂ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಮಹಾಗಣಪತಿ ಗದಗ ಜಿಲ್ಲೆಯ ಗೌರವಾಧ್ಯಕ್ಷ ಎಸ್.ಎಚ್. ಶಿವನಗೌಡರ ಹೇಳಿದರು.
ಇಲ್ಲಿನ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಸುದರ್ಶನ ಚಕ್ರ ಯುವ ಮಂಡಳ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾಟನ್ ಮಾರ್ಕೆಟ್ ರಸ್ತೆಯಲ್ಲಿನ ಬೃಹತ್ ವೇದಿಕೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಮಂಗಳೂರಿನ ಹೆಜ್ಜೆನಾದ ತಂಡದಿಂದ ನೃತ್ಯ ಮತ್ತು ಸಂಗೀತ ವೈಭವ ಕಾರ್ಯಕ್ರಮ ನಡೆಯಲಿದೆ. ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸುವರು. ವಿ.ಪ ಸದಸ್ಯ ಎಸ್.ವಿ. ಸಂಕನೂರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಗಣ್ಯರು, ದಾನಿಗಳನ್ನು ಸನ್ಮಾನಿಸಲಾಗುವುದು ಎಂದರು.
ಹಿಂದೂ ಮಹಾಗಣಪತಿ ಗದಗ ಜಿಲ್ಲೆ ಅಧ್ಯಕ್ಷ ಸುಧೀರ್ ಕಾಟಿಗಾರ ಮಾತನಾಡಿ, ಗಣೇಶೋತ್ಸವದ ಅಂಗವಾಗಿ ಮಹಿಳೆಯರಿಗೆ, ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುವುದು. ಸೆ.24ರಂದು ಲಯನ್ಸ್ ಕ್ಲಬ್ ಸಹಯೋಗದಲ್ಲಿ ಹುಬ್ಬಳ್ಳಿ ಜನಪ್ರಿಯಾ ಆಸ್ಪತ್ರೆ ವೈದ್ಯರಿಂದ ಉಚಿತವಾಗಿ ಕಣ್ಣಿನ ತಪಾಸಣೆ, ಸೆ.25ರಂದು ಬೆಳಗ್ಗೆ 9 ಗಂಟೆಗೆ ಸತ್ಯನಾರಾಯಣ ಪೂಜೆ ಹಾಗೂ ಸೆ. 27ರಂದು ಸಕಲ ಮಂಗಲ ವಾದ್ಯಮೇಳದೊಂದಿಗೆ ಮೂರ್ತಿ ವಿಸರ್ಜನಾ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ರಾಘು ಹಬೀಬ, ಅಶ್ವಿನಿ ಜಗತಾಪ, ವಂದನಾ ವರ್ಣೇಕರ, ಮಂಜುನಾಥ ಖೋಡೆ, ರಮೇಶ ಸಜ್ಜಗಾರ ಇತರರು ಉಪಸ್ಥಿತರಿದ್ದರು.



