ಚಿಕ್ಕಮಗಳೂರು:- ಸರ್ಕಾರದಿಂದ ಹಣ ಬರದೇ ತಮ್ಮ ಸ್ವಂತ ಹಣದಲ್ಲಿ ತರಕಾರಿ ಖರೀದಿ ಮಾಡಿ ಅಡುಗೆ ಮಾಡಿ ಮಕ್ಕಳಿಗೆ ಬಡಿಸುವ ಸ್ಥಿತಿ ಅಂಗನವಾಡಿ ಕಾರ್ಯಕರ್ತೆಯರಿಗೆ ಎದುರಾಗಿದೆ. ಹೀಗಾಗಿ ಅಂಗನವಾಡಿ ಕಾರ್ಯಕರ್ತರು ತಮ್ಮ ಮೇಲಾಗುತ್ತಿರುವ ಧೋರಣೆ ಬಗ್ಗೆ ಅಳಲು ತೋಡಿಕೊಂಡಿದ್ದಾರೆ.
ಅಂಗನವಾಡಿ ಕೇಂದ್ರಗಳಿಗೆ ಕಳಪೆ ಗುಣಮಟ್ಟದ ಉಪ್ಪಿಟ್ಟಿನ ಪೌಡರ್, ಸಾಂಬಾರ್ ಪೌಡರ್ ವಿತರಣೆ ಮಾಡಲಾಗುತ್ತಿದೆ. ನೀರಿನಲ್ಲಿ ಕಲಸಿ ಅಡುಗೆ ಮಾಡಿ ಕೊಡಿ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಈ ಕಳಪೆ ಗುಣಮಟ್ಟದ ಉಪ್ಪಿಟ್ಟು ತಿನ್ನಲು ಪುಟ್ಟ ಮಕ್ಕಳು ಪರದಾಡುತ್ತಿದ್ದಾರೆ. ಹೀಗಾಗಿ ಮಾನವೀಯತೆ ದೃಷ್ಟಿಯಿಂದ ಸ್ವಂತ ಹಣದಲ್ಲಿ ತರಕಾರಿ ತಂದು ಅಡುಗೆ ಮಾಡುತ್ತಿದ್ದೇವೆ ಎಂದು ಕಾರ್ಯಕರ್ತೆಯರು ತಿಳಿಸಿದ್ದಾರೆ.
ಈರುಳ್ಳಿ , ಟೊಮೇಟೊ, ಮೆಣಸಿನಕಾಯಿ ಇಲ್ಲದೆ ಉಪ್ಪಿಟ್ಟು, ಸಾಂಬಾರ್ ಮಾಡಿ ಎಂದು ಸರ್ಕಾರ ಹೇಳುತ್ತಿದೆ. ಎರಡು ವರ್ಷಗಳಿಂದ ಅಂಗನವಾಡಿ ಕೇಂದ್ರಗಳಿಗೆ ಸರ್ಕಾರ ತರಕಾರಿ ವಿತರಣೆ ನಿಲ್ಲಿಸಿದೆ. ಕಳಪೆ ಗುಣಮಟ್ಟದ ಆಹಾರ ಸಾಮಗ್ರಿಗಳನ್ನ ವಿತರಣೆ ಮಾಡುತ್ತಿದೆ. ಕಳಪೆ ಗುಣಮಟ್ಟದ ಉಪ್ಪಿಟ್ಟು ತಿನ್ನಲು ಮಕ್ಕಳಿಂದಾಗುತ್ತಿಲ್ಲ. ಹೀಗಾಗಿ ಉತ್ತಮ ಗುಣಮಟ್ಟದ ಆಹಾರ ಸಾಮಗ್ರಿಗಳ ವಿತರಣೆ ಮಾಡುವಂತೆ ಅಂಗನವಾಡಿ ಕಾರ್ಯಕರ್ತೆಯರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಇನ್ನು ಮತ್ತೊಂದೆಡೆ ಸರ್ಕಾರ ಮೇ ವರೆಗೆ ಮಾತ್ರ ಅಂಗನವಾಡಿ ಕಾರ್ಯಕರ್ತೆಯರಿಗೆ ಸಂಬಳ ನೀಡಿದೆ. ಹಾಗೂ ಏಪ್ರಿಲ್ ವರೆಗೆ ಮಾತ್ರ ಮೊಟ್ಟೆ ಖರೀದಿಸಿರುವ ಹಣ ನೀಡಿದೆ. ಇನ್ನೂ ಉಳಿದ ತಿಂಗಳುಗಳ ಹಣ ನೀಡಿಲ್ಲ ಹೀಗಾಗಿ ಹಣ ಹಣ ನೀಡುವಂತೆಯೂ ಅಂಗನವಾಡಿ ಕಾರ್ಯಕರ್ತೆಯರು ಮನವಿ ಮಾಡಿದ್ದಾರೆ.