–ಫಲಿಸಿತೇ ವಿಶೇಷ ತಂಡದ ಪ್ಲ್ಯಾನ್?
ವಿಜಯಸಾಕ್ಷಿ ಸುದ್ದಿ, ಕೊಪ್ಪಳ: ಜಿಲ್ಲೆಯ ಆನೆಗೊಂದಿಯಲ್ಲಿ ಚಿರತೆಗಳ ಸುಳಿವಿಗಾಗಿ ವಿಶೇಷ ತಂಡ ನಡೆಸಿದ ಕಾರ್ಯಾಚರಣೆಗೆ ಚಿರತೆಯೊಂದು ಸೆರೆ ಸಿಕ್ಕಿದೆ. ಆದರೆ ಸೆರೆ ಸಿಕ್ಕ ಚಿರತೆ ನರಭಕ್ಷಕವೊ? ಅಥವಾ ಬೇರೊಂದು ಚಿರತೆಯೋ? ಎಂಬುದಿನ್ನೂ ದೃಢಪಟ್ಟಿಲ್ಲ.
ಚಿರತೆ ಪತ್ತೆಗಾಗಿ ನಾಲ್ವರ ವಿಶೇಷ ವನ್ಯ ಜೀವಿ ತಜ್ಞರ ತಂಡ ಭೇಟಿ ನೀಡಿತ್ತು. ತಂಡಕ್ಕೆ ಕೈ ಜೋಡಿಸಿದ ವೈಲ್ಡ್ ಲೈಫ್ ಎಸ್ ಎಸ್ ಓ ಸಂಸ್ಥೆ, ಈ ಹಿಂದೆ ಬಂಡಿಪುರ, ಬನ್ನೇರುಘಟ್ಟ, ನಾಗರಹೊಳೆ ಸೇರಿ ವಿವಿಧಡೆ ಪ್ರಾಣಿಗಳ ಸಂಶೋಧಿಸಿದೆ.
ಪ್ರಾಣಿಗಳ ಜೀವನ ಹಾಗೂ ಮಾನವ ಪ್ರಾಣಿಗಳ ಸಂಘರ್ಷದ ಕುರಿತು ಅಧ್ಯಯನ ಮಾಡುವ ವೈಲ್ಡ್ ಲೈಫ್ ಎಸ್ ಎಸ್ ಓ, ಚಿರತೆಗಳ ಚಲವಲನ, ವಾಸವಿರುವ ಸ್ಥಳ, ಆಹಾರ ಪದ್ಧತಿ, ಬೇಟೆಯಾಡುವ ವಿಧಾನ, ಹೆಜ್ಜೆಗುರುತು ಪತ್ತೆಗಾಗಿ ಕಾರ್ಯಾಚರಣೆ ಆರಂಭಿಸಿತ್ತು.
ವಿಶೇಷ ತಂಡದ ಕಾರ್ಯಾಚರಣೆಯಿಂದ ಒಂದು ಚಿರತೆ ಸೆರೆ ಸಿಕ್ಕಿದೆ. ನಿನ್ನೆಯಿಂದ ಚಲನವಲನ ಗುರುತಿಸಿ ಚಿರತೆ ಸೆರೆ ಹಿಡಿಯುವಲ್ಲಿ ವಿಶೇಷ ತಂಡವು ಯಶಸ್ವಿಯಾಗಿದೆ.
ಸೆರೆ ಸಿಕ್ಕಿರುವ ಚಿರತೆ ಈ ಹಿಂದೆ ಪೂಜಾರಿಯನ್ನು ಕೊಂದು ತಿಂದ ಚಿರತೆಯಾ? ಎನ್ನುವ ಬಗ್ಗೆ ಸ್ಪಷ್ಟತೆಯಿಲ್ಲ ಎಂದು ಡಿಎಫ್ಓ ಹರ್ಷಭಾನು ಮಾಹಿತಿ ನೀಡಿದ್ದಾರೆ.
ಬೋನ್ಗಳ ಇರಿಸುವಿಕೆಗೆ ಸೂಕ್ತ ಸ್ಥಳಗಳ ಆಯ್ಕೆಯ ಕಾರ್ಯಾಚರಣೆ ನಡೆದಿದ್ದು,
ಅತಿ ಹೆಚ್ಚು ಚಿರತೆಗಳು ಓಡಾಡುವ ಸ್ಥಳಗಳ ಮಾಹಿತಿಗಾಗಿ ಆನೆಗೊಂದಿ ಸುತ್ತಮುತ್ತ ತಂಡಗಳು ಶೋಧನೆ ನಡೆಸುತ್ತಿವೆ.
ಆನೆಗೊಂದಿಯ ಚಿರತೆಗಳ ಚಲನವಲನ ಪತ್ತೆಗೆ 8 ಕ್ಕೂ ಹೆಚ್ಚು ಸ್ಥಳಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಲಾಗಿದೆ. ಇನ್ನೂ ಮೂರ್ನಾಲ್ಕು ಚಿರತೆಗಳು ಬೆಟ್ಟದ ಸುತ್ತ ಮುತ್ತ ಬೀಡು ಬಿಟ್ಟಿದ್ದು ಸಾರ್ವಜನಿಕರು ಸಂಜೆ 5ರ ಮೇಲೆ ಓಡಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.