ಗ್ರಾ.ಪಂ.ಚುನಾವಣೆ: ರಾಜಕೀಯ ನಾಯಕರು ಪ್ರಚಾರದಲ್ಲಿ ಭಾಗವಹಿಸುವಂತಿಲ್ಲ

0
Spread the love

ವಿಜಯಸಾಕ್ಷಿ ಸುದ್ದಿ, ಬೆಂಗಳೂರು

Advertisement

ಗ್ರಾಮ ಪಂಚಾಯತಿ ಚುನಾವಣೆ ರಾಜಕೀಯ ಪಕ್ಷಗಳಿಗೆ ಮಹತ್ವದ್ದಾಗಿದೆ. ತಳಮಟ್ಟದಲ್ಲಿ ಪಕ್ಷ ಬಲಪಡಿಸಲು ಸಹಕಾರಿಯಾಗಲಿದ್ದು, ಮುಂಬರುವ ವಿಧಾನಸಭಾ, ಲೋಕಸಭಾ ಸಾರ್ವತ್ರಿಕ ಚುನಾವಣೆಗಳಲ್ಲಿ ಸುಲಭವಾಗಿ ಗೆಲವು ಸಾಧಿಸಲು ಅನುಕೂಲವಾಗಲಿದೆ. ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ನೇರವಾಗಿ ಭಾಗವಹಿಸದಿದ್ದರೂ, ಕಾರ್ಯಕರ್ತರನ್ನು ಗೆಲ್ಲಿಸಲು ತೆರೆಮರೆಯಲ್ಲಿ ಕೆಲಸ ಮಾಡುತ್ತಿವೆ. ಪರೋಕ್ಷವಾಗಿ ಕಾರ್ಯಕರ್ತರ ಪರವಾಗಿ ಪ್ರಚಾರ ಮಾಡುತ್ತಿವೆ. ಗ್ರಾ.ಪಂ. ಪಕ್ಷಾತೀತ ಚುನಾವಣೆಯಾಗಿದ್ದರೂ, ಸ್ಪರ್ಧಿಸಿರುವ ಅಭ್ಯರ್ಥಿಗಳು ಒಂದಲ್ಲ ಒಂದು ರಾಜಕೀಯ ಪಕ್ಷದ ಬೆಂಬಲಿಗರಾಗಿರುತ್ತಾರೆ.
ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗ ಮಹತ್ವದ ಆದೇಶ ಹೊರಡಿಸಿದ್ದು, ರಾಜಕೀಯ ಪಕ್ಷಗಳ ನಿದ್ದೆಗೆಡೆಸಿದೆ.

ರಾಜ್ಯ ಚುನಾವಣಾ ಆಯೋಗ ನ್ಯಾಯಾಲಯದ ಆದೇಶದಂತೆ ರಾಜ್ಯದಲ್ಲಿ ಎರಡು ಹಂತಗಳಲ್ಲಿ ಚುನಾವಣೆ ನಡೆಸುತ್ತಿದೆ. ಡಿ.22 ಹಾಗೂ 27 ರಂದು ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಒಟ್ಟಾರೆ 5,762 ಗ್ರಾಮ ಪಂಚಾಯ್ತಿಗಳಿಗೆ ಚುನಾವಣೆ ಘೋಷಣೆಯಾಗಿದೆ. ವಿವಿಧ ಕಾರಣಗಳಿಂದ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಯುತ್ತಿಲ್ಲ. ಒಟ್ಟು 92,121 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಇದು ಬೃಹತ್ ಚುನಾವಣೆಯಾಗಿದೆ. ಈಗಾಗಲೇ ಎರಡೂ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಅವಧಿ ಮುಗಿದಿದೆ.

ಮೊದಲ ಹಂತದಲ್ಲಿ ರಾಜ್ಯದ ಒಟ್ಟು 117 ತಾಲ್ಲೂಕುಗಳ 3,019 ಗ್ರಾ.ಪಂ. 48,048 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಈಗಾಗಲೇ 4,377 ಸ್ಥಾನಗಳಿಗೆ ಅವಿರೋಧ ಆಯ್ಕೆ ಆಗಿಯಾಗಿದ್ದಾರೆ. ಅಂತಿಮವಾಗಿ 1,17,387 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು, ಚುನಾವಣಾ ಕಣ ರಂಗೇರಿದೆ. ಗದಗ ಜಿಲ್ಲೆಯೊಂದರಲ್ಲೇ ಮೂರು ತಾಲ್ಲೂಕುಗಳ 53 ಗ್ರಾ.ಪಂ.ಗಳ 801 ಸ್ಥಾನಗಳಿಗೆ 2216 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ‌.

ಇದು ಪಕ್ಷ ಆಧಾರ ರಹಿತ ಚುನಾವಣೆ

ಗ್ರಾ.ಪಂ.ಚುನಾವಣೆಯು ಕರ್ನಾಟಕ ಗ್ರಾಮ್ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಂತೆ ಪಕ್ಷ ಆಧಾರ ರಹಿತವಾಗಿ ನಡೆಸಲಾಗುತ್ತಿದೆ. ಹಾಗಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಅಭ್ಯರ್ಥಿಗಳಿಗೆ ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ನೀಡುವುದಿಲ್ಲ. ಅದರ ಬದಲಿಗೆ ಸಾಮಾನ್ಯ ಚಿಹ್ನೆಗಳನ್ನು ಕೊಡಲಾಗುತ್ತದೆ ಎಂದು ಆಯೋಗ ತಿಳಿಸಿದೆ.

ಕ್ರಮ ಕೈಗೊಳ್ಳುವಂತೆ ಚುನಾವಣಾಧಿಕಾರಿಗಳಿಗೆ ಆಯೋಗ ಸೂಚನೆ

ಗ್ರಾ.ಪಂ.ಚುನಾವಣೆಗಳು ಪಕ್ಷರಹಿತ ಚುನಾವಣೆಯಾಗಿದ್ದು, ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಚುನಾವಣೆ ಪ್ರಚಾರ ಕಾರ್ಯಗಳಲ್ಲಿ ಭಾಗಿಯಾಗುವ, ಸಭೆ ಸಮಾರಂಭಗಳನ್ನು ನಡೆಸುವ ಹಾಗೂ ರಾಜಕೀಯ ನಾಯಕರ ಫೋಟೊಗಳಿರುವ ಕರಪತ್ರ ಹಂಚುವ ಮತ್ತು ಪಕ್ಷದ ಬವುಟ ಹಿಡಿದು ಪ್ರಚಾರ ಮಾಡುವ ಸಂಭವವಿದೆ. ಆ ಬಗ್ಗೆ ಗಮನಹರಿಸಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗ ಆಯಾ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದೆ.

ಪ್ರಚಾರದಲ್ಲಿ ಭಾಗವಹಿಸಿದರೆ ಕಾನೂನು ಕ್ರಮ

ರಾಜಕೀಯ ಪಕ್ಷಗಳ ನಾಯಕರು ಚುನಾವಣೆ ಪ್ರಚಾರದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗವಹಿಸುವಂತಿಲ್ಲ ಎಂದು ರಾಜ್ಯ ಚುನಾವಣಾ ಆಯೋಗ ಕಟ್ಟುನಿಟ್ಟಿನ ಆದೇಶ ಮಾಡಿದೆ. ರಾಜಕೀಯ ನಾಯಕರು ಸಭೆಗಳನ್ನು ನಡೆಸಿ ಮತದಾರರ ಮೇಲೆ ಪ್ರಭಾವ ಬೀರುವುದಕ್ಕೂ ಅವಕಾಶವಿಲ್ಲ. ಯಾವುದೇ ಸಂದರ್ಭದಲ್ಲಿಯೂ ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷ ರಾಜಕೀಯ ಸಲ್ಲದು. ಒಂದು ವೇಳೆ ರಾಜಕೀಯ ನಾಯಕರು ಯಾರಾದರೂ ಮಾಡಿದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗಲಿದ್ದು, ಪ್ರಕರಣ ದಾಖಲಾಗುತ್ತದೆ ಎಂದು ರಾಜ್ಯ ಚುನಾವಣಾ ಆಯೋಗ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ನೀಡಿದೆ.


Spread the love

LEAVE A REPLY

Please enter your comment!
Please enter your name here