ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಸೆಪ್ಟೆಂಬರ್ 29ರಂದು ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಜರುಗಲಿದ್ದು, ಪರೀಕ್ಷೆಯನ್ನು ಪಾರದರ್ಶಕವಾಗಿ ಯಾವುದೇ ಅವ್ಯವಹಾರಗಳಿಗೆ ಆಸ್ಪದ ನೀಡದೇ ಸುವ್ಯವಸ್ಥಿತವಾಗಿ ಜರುಗಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.
ಜಿಲ್ಲಾಡಳಿತ ಭವನದ ಕೆಸ್ವಾನ್ ಹಾಲ್ನಲ್ಲಿ ಬುಧವಾರ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಕುರಿತು ಜರುಗಿದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯ್ಯಾದಂತ 38 ಪರೀಕ್ಷಾ ಕೇಂದ್ರಗಳಲ್ಲಿ ಸೆ.29ರಂದು ಪರೀಕ್ಷೆ ಜರುಗಲಿದೆ. ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಬೆಳಿಗ್ಗೆ 10.30ರಿಂದ ಮ. 12.30ರವರೆಗೆ ಸುಗಮವಾಗಿ, ಯಾವುದೇ ಲೋಪದೋಷಗಳಿಲ್ಲದಂತೆ ನಡೆಸಬೇಕು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನೀಡಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದರು.
ತ್ರಿಸದಸ್ಯ ಸಮಿತಿ, ವೀಕ್ಷಕ ಹಾಗೂ ಮಾರ್ಗಾಧಿಕಾರಿಗಳ ನೇಮಕ: ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆಯಲು ತ್ರಿ-ಸದಸ್ಯ ಸಮಿತಿಯನ್ನು, ವೀಕ್ಷಕರನ್ನು, ಸ್ಥಳೀಯ ನಿರೀಕ್ಷಣಾಧಿಕಾರಿ ಹಾಗೂ ಮಾರ್ಗಾಧಿಕಾರಿಗಳನ್ನು ನೇಮಕ ಮಾಡಲಾಗಿದ್ದು, ಅಧಿಕಾರಿಗಳು ತಮಗೆ ನಿಗದಿಪಡಿಸಿದ ಕರ್ತವ್ಯಗಳನ್ನು ನಿರ್ವಹಿಸತಕ್ಕದ್ದು. ಪ್ರಶ್ನೆ ಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳನ್ನು ಕೊಂಡೊಯ್ಯುವ ಸಮಯದಲ್ಲಿ ಉಸ್ತುವಾರಿ ತಂಡಕ್ಕೆ ಅಗತ್ಯ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ನಿರ್ದೇಶಿಸಿದರು.
ಪ್ರತಿಬಂಧಕಾಜ್ಞೆ ಜಾರಿ: ಪರೀಕ್ಷೆಗಳು ಸುಗಮವಾಗಿ ಜರುಗುವ ಮತ್ತು ಶಿಸ್ತು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪರೀಕ್ಷಾ ಕೇಂದ್ರಗಳ ಸುತ್ತಲೂ 200 ಮೀ ಪರಿಮಿತಿಯೊಳಗೆ ಅಂದು ಬೆಳಿಗ್ಗೆ 8ರಿಂದ ಸಾಯಂಕಾಲ 6 ಗಂಟೆಯವರೆಗೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಲಾಗಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಬರುವ ಝೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್ಸ್ಟಾಲ್, ಫೋಟೋ ಕಾಪಿಯರ್ಗಳನ್ನು ಬಂದ ಮಾಡಲು ಆದೇಶಿಸಿದೆ. ಈ ಪ್ರದೇಶ ವ್ಯಾಪ್ತಿಯಲ್ಲಿ ಪರೀಕ್ಷೆಗಳು ನಡೆಯುವ ಸಮಯದಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿರ್ಬಂಧಿಸಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು, ಪರೀಕ್ಷಾ ಕೇಂದ್ರದಲ್ಲಿ ಪ್ರಿಸ್ಕಿಂಗ್ ನಡೆಸುವ ಸಿಬ್ಬಂದಿಯೊಂದಿಗೆ ಮತ್ತು ಪರೀಕ್ಷಾ ಕೊಠಡಿಯ ಸಂವೀಕ್ಷಕರೊಂದಿಗೆ ಸಹಕರಿಸಿ ತಪಾಸಣೆಗೊಳಗಾಗುವುದು ಕಡ್ಡಾಯವಾಗಿದೆ. ಯಾವುದೇ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳು, ಯಾವುದೇ ರೀತಿಯ ಉಪಕರಣಗಳನ್ನು ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ. ಹೀಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ವಿಶೇಷ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿರುತ್ತದೆ.
ಡ್ರೆಸ್ಕೋಡ್: ಅಭ್ಯರ್ಥಿಗಳು ಪರೀಕ್ಷಾ ಪ್ರವೇಶಪತ್ರದಲ್ಲಿ ತಿಳಿದಿರುವಂತೆ ಪರೀಕ್ಷೆ ವೇಳೆಯಲ್ಲಿ ಶೂ, ಸಾಕ್ಸ್ಗಳನ್ನು ಧರಿಸುವಂತಿಲ್ಲ. ಸಾಧಾರಣ ಚಪ್ಪಲಿಯನ್ನು ಧರಿಸಿ ಪರೀಕ್ಷೆಗೆ ಹಾಜರಾಗಬೇಕು. ಪರೀಕ್ಷಾ ಕೊಠಡಿಯೊಳಗೆ ಯಾವುದೇ ಆಧುನಿಕ ಉಪಕರಣಗಳು, ಪೇಪರ್, ಬುಕ್ಸ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ತುಂಬು ತೋಳಿನ ಶರ್ಟ್ ಮತ್ತು ಯಾವುದೇ ಆಭರಣಗಳನ್ನು ಮೆಟಲ್ ಮತ್ತು ನಾನ್ ಮೆಟಲ್(ಮಂಗಳ ಸೂತ್ರ ಹಾಗೂ ಕಾಲುಂಗುರಗಳನ್ನು ಹೊರತುಪಡಿಸಿ) ಪುಲ್ಲೋವರ್ಸ, ಜಾಕೆಟ್ ಮತ್ತು ಸ್ವೆಟರ್ಸಗಳನ್ನು ಧರಿಸಿ ಹಾಜರಾಗುವುದನ್ನು ನಿಷೇಧಿಸಿದೆ. ಮೆಟಲ್ ವಾಟರ್ ಬಾಟಲ್ ಮತ್ತು ನಾನ್ ಟ್ರಾನ್ಸಪರಂಟ್ ವಾಟರ್ ಬಾಟಲ್ಗಳನ್ನು ನಿಷೇಧಿಸಿದೆ.
ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ತಿಳಿಸಿರುವ ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು. ಪ್ರಾಧಿಕಾರವು ನಿಗದಿಪಡಿಸಿರುವ ಸೂಚನೆಗಳನ್ನು ಸಂಬಂಧಪಟ್ಟವರು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ, ಗೋಡೆ ಗಡಿಯಾರಗಳ ಅಳವಡಿಕೆ, ಪರೀಕ್ಷಾ ಸಮಿತಿಯ ಸದಸ್ಯರುಗಳ ನಿರ್ವಹಿಸಬೇಕಾದ ವಿವಿಧ ಕರ್ತವ್ಯಗಳ ಕುರಿತು ಚರ್ಚಿಸಲಾಯಿತು. ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿದ್ಧಲಿಂಗ ಮಸನಾಯಕ ಮತ್ತು ಬಿ.ಜಿ. ಗಿರಿತಿಮ್ಮನಣ್ಣವರ, ಜಿಲ್ಲಾ ಸಂಖ್ಯಾಸಂಗ್ರಹಣಾಧಿಕಾರಿ ಎ.ಎ. ಕಂಬಾಳಿಮಠ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಲ್. ಬಾರಾಟಕ್ಕೆ, ಪರೀಕ್ಷಾ ಕಾರ್ಯಕ್ಕೆ ನಿಯೋಜಿತರಾಗಿರುವ ಅಧಿಕಾರಿಗಳು, ಮೇಲ್ವಿಚಾರಕರು, ಸಮನ್ವಯ ಅಧಿಕಾರಿಗಳು ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಜಿ.ಪಂ ಸಿಇಒ ಭರತ್ ಎಸ್ ಮಾತನಾಡಿ, ಪರೀಕ್ಷೆಗಳು ಪಾರದರ್ಶಕವಾಗಿ ಜರುಗಬೇಕು ಎನ್ನುವ ಹಿತದೃಷ್ಟಿಯಿಂದಲೇ ಪರೀಕ್ಷಾರ್ಥಿಗಳನ್ನು ಕಟ್ಟುನಿಟ್ಟಾಗಿ ತಪಾಸಣೆಗೊಳಪಡಿಸಲಾಗುತ್ತದೆ. ಪರೀಕ್ಷಾ ಕೊಠಡಿಯಿಂದ ಯಾವುದೇ ಪ್ರಶ್ನೆ ಪತ್ರಿಕೆ/ಓಎಂಆರ್ ಉತ್ತರ ಹಾಳೆ/ಪ್ರಶ್ನೆ ಸಹಿತ ಉತ್ತರ ಪುಸ್ತಕ ಹೊರಹೋಗದಂತೆ ಜಾಗೃತೆ ವಹಿಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಕೊಠಡಿ ಸಂವೀಕ್ಷಕರು ಅಭ್ಯರ್ಥಿಗಳ ಚಲನವಲನಗಳನ್ನು ಆಗಿಂದಾಗ್ಗೆ ಸೂಕ್ಷ÷್ಮವಾಗಿ ಗಮನಿಸಿ, ಯಾವುದೇ ಅಭ್ಯರ್ಥಿ ಸಂಶಯಾತ್ಮಕವಾಗಿ ವರ್ತಿಸುತ್ತಿದ್ದಲ್ಲಿ ತಕ್ಷಣ ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಗಮನಕ್ಕೆ ತಂದು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.