ವಿಜಯಸಾಕ್ಷಿ ಸುದ್ದಿ, ಬೆಂಗಳೂರು
ಕೊರೋನಾದಿಂದಾಗಿ ಕಳೆದ ಒಂಬತ್ತು ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಶಾಲಾ ಕಾಲೇಜು ತೆರೆಯಲು ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಹಸಿರು ನಿಶಾನೆ ತೋರಿಸಿದೆ.
ಬೋರ್ಡ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಜನವರಿ 1 ರಿಂದ 10 ಮತ್ತು 12ನೇ ತರಗತಿಗಳು ಪುನಾರಂಭವಾಗಲಿವೆ. ಹೊಸ ವರ್ಷದಂದು ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, ವಾರಕ್ಕೆ ಮೂರು ದಿನ ಮಾತ್ರ ತರಗತಿಗಳು ನಡೆಯಲಿವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಶನಿವಾರ ಬೆಂಗಳೂರಿನ ಸಿಎಂ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ರಾಜ್ಯದಲ್ಲಿ ಜನವರಿ 1 ರಿಂದ 10 ಮತ್ತು 12ನೇ ತರಗತಿಗಳ ಜೊತೆಗೆ 6 ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗಾಗಿ ವಿದ್ಯಾಗಮ ತರಗತಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಈ ತರಗತಿಗಳ ಪಾಸ್ ಫೇಲ್ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ರಾಜ್ಯದಲ್ಲಿನ ಕೊವಿಡ್ ಪರಿಸ್ಥಿತಿ ನೋಡಿಕೊಂಡು ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು. ಅದರಂತೆ, ತರಗತಿ ನಡೆಯಬೇಕಾಗಿರುವ ವೇಳಾಪಟ್ಟಿ ಸಿದ್ದಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಕಳೆದ ವಾರ ವಿದ್ಯಾಗಮ ಬಗ್ಗೆ ರಾಜ್ಯ ಹೈಕೋರ್ಟ್ ಮಾಹಿತಿ ನೀಡುವಂತೆ ಆದೇಶಿಸಿತ್ತು. ಶಿಕ್ಷಣ ಇಲಾಖೆ ಸಂಪೂರ್ಣ ಮಾಹಿತಿ ನೀಡಿತ್ತು. ವಿದ್ಯಾಗಮ ತರಗತಿಗಳನ್ನು ಪುನಾರಂಭಿಸುವಂತೆ ಹೈಕೋರ್ಟ್ ಅಪೇಕ್ಷಿಸಿತ್ತು. ಹಾಗಾಗಿ ಜನವರಿ 1 ರಿಂದ ವಿದ್ಯಾಗಮ ತರಗತಿಗಳನ್ನು ಆರಂಭಿಸಲಾಗುತ್ತಿದೆ. ಈ ಬಾರಿ ವಿದ್ಯಾಗಮ ತರಗತಿಗಳು ಶಾಲಾ ಆವರಣದಲ್ಲೇ ನಡೆಯಲಿದ್ದು, ಖಾಸಗಿ ಶಾಲೆಯವರು 6 ರಿಂದ 9 ನೇ ವಿದ್ಯಾರ್ಥಿಗಳಿಗೆ ವಿದ್ಯಾಗಮ ತರಗತಿಗಳನ್ನು ಪ್ರಾರಂಭಿಸಬೇಕು ಎಂದು ಸಚಿವರು ತಿಳಿಸಿದರು.
ವಿದ್ಯಾಗಮ ತರಗತಿಗೆ ಆಗಮಿಸುವ ಮಕ್ಕಳು ಕಡ್ಡಾಯವಾಗಿ ಪೋಷಕರಿಂದ ಒಪ್ಪಿಗೆ ಪತ್ರ ತರಬೇಕು. ಪೋಷಕರು ತಮ್ಮ ಮಕ್ಕಳನ್ನು ತರಗತಿಗೆ ಕಳುಹಿಸುವಂತೆ ಒತ್ತಾಯವಿಲ್ಲ. ಮಕ್ಕಳ ಹಾಜರಾತಿಯೂ ಕಡ್ಡಾಯವಿಲ್ಲ. ಮಕ್ಕಳಿಗೆ ಆನ್‌ಲೈನ್‌ನಲ್ಲೂ ಕಲಿಯುವುದಕ್ಕೆ ಅವಕಾಶವಿದ್ದು, ಆಸಕ್ತಿ ಇದ್ದವರೂ ಮಾತ್ರ ವಿದ್ಯಾಗಮ ತರಗತಿಗಳಿಗೆ ಬರಬಹುದು ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್ ತಿಳಿಸಿದರು.