ವಿಜಯಸಾಕ್ಷಿ ಸುದ್ದಿ, ರೋಣ : ಮೂಲಭೂತ ಸೌಲಭ್ಯಗಳನ್ನು ಒದಗಿಸದೆ ಕೆಲಸ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈಗಾಗಲೇ 22ಕ್ಕೂ ಹೆಚ್ಚು ಸರಕಾರಿ ಕೆಲಸಗಳನ್ನು ಮೊಬೈಲ್‌ನಲ್ಲಿ ನಿರ್ವಹಣೆ ಮಾಡುತ್ತಿದ್ದರೂ ಸಹ ಸಮಸ್ಯೆಗಳು ತಪ್ಪಿಲ್ಲ. ಸರಕಾರ ನಮಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ತಹಸೀಲ್ದಾರ್ ಕಚೇರಿಯ ಆವರಣದಲ್ಲಿ ಗುರುವಾರ ಗ್ರಾಮಾಡಳಿತಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಧರಿಸಿ ಮೂಲಕ ಅನಿರ್ದಿಷ್ಟಾವಧಿ ಮುಷ್ಕರ ನಡೆಸಿದರು.
ತಾಲೂಕಾಧ್ಯಕ್ಷ ಎಸ್.ಎಸ್. ಗಿರಿಯಪ್ಪಗೌಡ ಮಾತನಾಡಿ, ಸರಕಾರ ವಹಿಸುವ ಜವಾಬ್ದಾರಿಗಳನ್ನು ಗ್ರಾಮಾಡಳಿತಾಧಿಕಾರಿಗಳು ಸಮರ್ಪಕವಾಗಿ ನಿಭಾಯಿಸುತ್ತಾ ಬಂದಿದ್ದಾರೆ. ಆದರೆ ಈಗ 21 ತಂತ್ರಾಂಶಗಳನ್ನು ನಿರ್ವಹಣೆ ಮಾಡಿದರೂ ಸಹ ನಮಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಲ್ಲ. ಆದರೂ ಕೆಲಸ ನಿರ್ವಹಿಸಿ ಎಂದು ಒತ್ತಡ ಹಾಕುತ್ತಿರುವುದು ಸಮಂಜಸವಲ್ಲ. ಮೊಬೈಲ್ ತಂತ್ರಾಂಶದಲ್ಲಿ ಕೆಲಸ ನಿರ್ವಹಿಸುವ ಸಂದರ್ಭದಲ್ಲಿ ನೆಟ್‌ವರ್ಕ್ ಸಮಸ್ಯೆಗಳಿರುತ್ತವೆ. ಗ್ರಾಮೀಣ ಭಾಗಗಳಲ್ಲಿಯೂ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಬಗೆಹರಿಸದೆ ನಮಗೆ ಒತ್ತಡ ಹಾಕಿದರೆ ಹೇಗೆ ಎಂದು ಪ್ರಶ್ನಿಸಿದರು.
ಜೆ.ಎಂ. ಹವಾಲ್ದಾರ ಮಾತನಾಡಿ, ಗ್ರಾಮಾಡಳಿತಾಧಿಕಾರಿಗಳಿಗೆ ಸ್ವಂತ ಕಚೇರಿಗಳಿಲ್ಲ. ಮುಖ್ಯವಾಗಿ ಕಿರುಕುಳ ಹೆಚ್ಚಾಗಿದೆ. ಇನ್ನು ಕೆಲಸ ನಿರ್ವಹಿಸುವ ಸಂಧರ್ಭದಲ್ಲಿ ಹಲ್ಲೆ ಮಾಡಿರುವ ಘಟನೆಗಳೂ ನಡೆದಿದ್ದು, ಸರಕಾರ ಇವುಗಳನ್ನು ಅವಲೋಕಿಸಿ ನಮಗೆ ಅಗತ್ಯ ಇರುವ ಸೌಲಭ್ಯಗಳನ್ನು ಒಸಗಿಸಬೇಕು ಎಂದು ಆಗ್ರಹಿಸಿದರು.
ಕಂದಾಯ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ಇತರೆ ಸಿಬ್ಬಂದಿಗಳು ಗ್ರಾಮಾಡಳಿತಾಧಿಕಾರಿಗಳ ಮುಷ್ಕರಕ್ಕೆ ಬಾಹ್ಯ ಬೆಂಬಲವನ್ನು ವ್ಯಕ್ತಪಡಿಸಿದರು. ಸಂತೋಷ ಪೂಜಾರ, ಜೆ.ಎಚ್. ಜಂತ್ಲಿ, ವಾಯ್.ಡಿ. ಬಡಿಗೇರ, ಜಗದೀಶ ತೊಗರಿಕಟ್ಟಿ, ಎಲ್.ಎಂ. ಅರಹುಣಸಿ, ಕಿರ್ತಿ ಗಾಣಿಗೇರ, ದೀಪಾ ಹೆಬ್ಬಾಳ, ಪ್ರತಿಭಾ ಗೌಡರ ಸೇರಿದಂತೆ ಗ್ರಾಮಾಡಳಿತಾಧಿಕಾರಿಗಳು ಉಪಸ್ಥಿತರಿದ್ದರು.