ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಾಧಕರು ಯಾರೇ ಇರಲಿ, ಅವರಿಗೆ ಸಮಾಜದ ವತಿಯಿಂದ ಸನ್ಮಾನಗಳು ಸಲ್ಲಬೇಕು. ಅಂದಾಗ ಮಾತ್ರ ಅವರ ಸಾಧನೆಗೊಂದು ಬೆಲೆ ಬರುತ್ತದೆ. ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ನಿರಂತರವಾದ ಪ್ರಯತ್ನ ಮುಖ್ಯ. ಸಾಧಕರು ಸಮಾಜದ ಆಸ್ತಿಯಾಗಿದ್ದು, ಅವರು ಇನ್ನೊಬ್ಬರಿಗೆ ಪ್ರೇರಣೆಯಾಗುತ್ತಾರೆ ಎಂದು ಗಜೇಂದ್ರಗಡ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಮಹಾದೇವಪ್ಪ ಬೇವಿನಕಟ್ಟಿ ಹೇಳಿದರು.
ಜಾನಪದ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಜಾನಪದ ಪರಿಷತ್ ನಡೆ ಸಾಧಕರ ಮನೆ ಕಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಹುಡುಕಿಕೊಂಡು ಅವರ ಮನೆಗೆ ಹೋಗಿ ಅವರನ್ನು ಸನ್ಮಾನಿಸುವ ಕಾರ್ಯವನ್ನು ತಾಲೂಕಾ ಜಾನಪದ ಪರಿಷತ್ ಹಮ್ಮಿಕೊಂಡಿದ್ದು, ಸಾಧಕರ ಸಾಧನೆ ಇತರರಿಗೆ ಪ್ರೇರಣೆಯಾಗಲಿ, ಸಾಧಕರು ಸಮಾಜಕ್ಕೆ ಪರಿಚಯವಾಗಲಿ, ಇದರಿಂದ ಇನ್ನಷ್ಟು ಜನರು ಸಾಧನೆ ಮಾಡುವಂತಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕ ಮೃತ್ಯುಂಜಯ ಧಡೇಸೂರಮಠ ಮಾತನಾಡಿ, ವೃತ್ತಿ ಯಾವುದೇ ಇರಲಿ ಅದರಲ್ಲಿ ಶ್ರದ್ಧೆ ಮತ್ತು ನಿರಂತರ ಪ್ರಯತ್ನಗಳಿದ್ದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದರು.
ರಾಜ್ಯ ಮಟ್ಟದ ಛಾಯಾಶ್ರೀ ಪ್ರಶಸ್ತಿ ಪುರಸ್ಕೃತರಾದ ಮಲ್ಲಯ್ಯ ಗುಂಡಗೋಪುರಮಠ ದಂಪತಿಗಳನ್ನು, ಹಾಗೂ ಎಂ.ಎ. ಪರೀಕ್ಷೆಯಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ವರ್ಣ ಪದಕ ಪಡೆದ ಪೂಜಾ ವಿನಾಯಕ ಗ್ರಾಮಪುರೋಹಿತರನ್ನು ಸನ್ಮಾನಿಸಲಾಯಿತು.
ಮುಖ್ಯ ಶಿಕ್ಷಕ ಬಿ.ಬಿ. ಕುರಿ. ಈಶ್ವರ ಬೆಟಗೇರಿ, ಕಾನಿಪ ಅಧ್ಯಕ್ಷ ಆದರ್ಶ ಕುಲಕರ್ಣಿ, ಜಿಲ್ಲಾ ಕಾನಿಪ ಕಾರ್ಯಕಾರಿ ಮಂಡಳಿ ಸದಸ್ಯ ಪ್ರಭುಸ್ವಾಮಿ ಅರವಟಗಿಮಠ, ಗವಿಸಿದ್ದಪ್ಪ ಗೊಡಚಪ್ಪನವರ ಉಪಸ್ಥಿತರಿದ್ದರು.