ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಸಮೀಪದ ಜಕ್ಕಲಿ ಗ್ರಾಮದ ಸುಮಂಗಲೆಯರು ಹಾಲಕೆರೆ ಶ್ರೀ ಅನ್ನದಾನೇಶ್ವರ ಮಠದಲ್ಲಿ ಒಳಬಳ್ಳಾರಿ ತಾತನವರ ತೊಟ್ಟಿಲೋತ್ಸವವನ್ನು ಸಡಗರದಿಂದ ಆಚರಿಸಿ, ಮಗುವಿಗೆ ಚನ್ನಯ್ಯನೆಂದು ನಾಮಕರಣ ಮಾಡಿ ಸಂಭ್ರಮಿಸಿದರು.
ಜಕ್ಕಲಿ ಗ್ರಾಮದ ಶ್ರೀ ಅನ್ನದಾನೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದ ಅಂಗವಾಗಿ ನಡೆದಿರುವ ಒಳ ಬಳ್ಳಾರಿಯ ತಾತಾನವರ ಪುರಾಣ ಪ್ರವಚನದ ಕಾರ್ಯಕ್ರಮದಲ್ಲಿ ನಡೆದ ಈ ದೃಶ್ಯ ಭಕ್ತರ ಮೈಮನ ತುಂಬಿತು.
ಸಾಂಪ್ರದಾಯದಂತೆ ಮೆಣಸಗಿಯವರ ಓಣಿಯ ಸಕಲ ಸದ್ಭಕ್ತರು ವಿವಿಧ ಬಗೆಯ ಹೂವುಗಳಿಂದ ಶೃಂಗಾರಗೊಳಿಸಿದ್ದ ತೊಟ್ಟಿಲನ್ನು ಶ್ರೀ ಬಸವೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭಜನೆ ಮೆರವಣಿಗೆ ಮಾಡುವುದರ ಮೂಲಕ ಶ್ರೀಮಠಕ್ಕೆ ತಂದು ಸಮರ್ಪಣೆ ಮಾಡಿದರು.
ಮಂಜುನಾಥ ಶಾಸ್ತ್ರೀ ಶಿವಪೂಜಿ ಪುರಾಣ ಪ್ರವಚನಗೈದರು. ಶ್ರೀಮಠದ ಸದ್ಭಕ್ತರಾದ ಶೇಖಣ್ಣ ಮೇಟಿ ಪ್ರಸಾದ ಸೇವೆ ವಹಿಸಿಕೊಂಡಿದ್ದರು. ಶ್ರೀಮಠದ ಸಮಿತಿಯ ಹಿರಿಯರಾದ ವೀರಯ್ಯ ಹಿರೇಮಠ, ಶಿವನಾಗಪ್ಪ ದೊಡ್ಡಮೇಟಿ, ಈಶ್ವರಪ್ಪ ಇಟಗಿ, ಸುಭಾಸ ಕಡಗದ, ಪ್ರಕಾಶಪ್ಪ ಹೊಸಮನಿ, ಶರಣಪ್ಪ ಕುರಡಗಿ, ಉಮೇಶ ಕೊಪ್ಪದ, ಮಲ್ಲಿಕಾರ್ಜುನ ಕುರಡಗಿ, ವೀರೇಶ ಹಿರೇಮಠ, ಸಣ್ಣ ದ್ಯಾಮಣ್ಣ ಮಡಿವಾಳರ, ಚನ್ನಬಸಪ್ಪ ಸೂಡಿ, ವೀರಪ್ಪ ತಳವಾರ, ಅಂದಾನಗೌಡ್ರ ಪಾಟೀಲ, ಹರ್ಷವರ್ಧನ್ ದೊಡ್ಡಮೇಟಿ. ಪ್ರಕಾಶ ವಾಲಿ, ಶಾಂತಮ್ಮ ಮೇಟಿ, ಸುಶೀಲಮ್ಮ ಮಸಲವಾಡ, ನೀಲಾಂಬಿಕೆ ಮೇಟಿ, ಲಕ್ಷ್ಮಮ್ಮ ನಾಲ್ವಾಡದ, ಶರಣಮ್ಮ ವಾಲಿ, ಚನ್ನಬಸವ್ವ ಮಡಿವಾಳರ, ನಿರ್ಮಲಾ ಯಾಳಗಿ, ಈರಮ್ಮ ವಾಲಿ, ಭೀಮವ್ವ ಕರೇಕುಲದ, ನಂದಾ ಮೆಣಸಗಿ, ಈರವ್ವ ನರೇಗಲ್ಲ, ಪೂರ್ಣಿಮಾ ಆದಿ, ಶಿವಲೀಲಾ ಜೋಗಿ, ಗೀತಾ ಮಂಗಳಗುಡ್ಡ, ಸರೋಜವ್ವ ಜೋಗಿ, ರತ್ನಾ ಹೂಗಾರ ಸೇರಿದಂತೆ ಇತರರಿದ್ದರು. ದ್ಯಾಮಣ್ಣ ಬಡಿಗೇರ, ಈರಣ್ಣ ಕಮ್ಮಾರ ಸಂಗೀತ ಸೇವೆ ನೀಡಿದರು.
ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಶ್ಯಾಶೆಟ್ಟಿ, ಶರಣಮ್ಮ ಅಂಗಡಿ ಬಸವಣ್ಣನವರ ವಚನ, ಜೋಗುಳ ಪದ, ಸೋಬಾನೆ ಪದಗಳನ್ನು ಹಾಡಿದರು. ಮನೆಯಿಂದಲೇ ಅಕ್ಕಡಿಕಾಳುಗಳಿಂದ ತಯಾರಿಸಿದ್ದ ಗುಗ್ಗರಿಯನ್ನು ಪ್ರಸಾದ ರೂಪದಲ್ಲಿ ಹಂಚಲಾಯಿತು. ಈ ವೇಳೆ ಮದುವೆ ಆಗದವರಿಗೆ ಕಂಕಣ ಕಟ್ಟುವುದು, ಸಂತಾನ ಭಾಗ್ಯ ಇಲ್ಲದವರಿಗೆ ಉಡಿ ತುಂಬುವ ಕಾರ್ಯವು ನಡೆಯಿತು.