ಬಡವರ ಬದುಕು ಹಸನಾಗಬೇಕು : ಎಚ್.ಕೆ. ಪಾಟೀಲ

0
Launch of various works costing Rs 5 crore
Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಬರೀ ಸಿಸಿ ರಸ್ತೆ, ಗಟಾರ ನಿರ್ಮಾಣ ಮಾಡಿದರೆ ಅಭಿವೃದ್ಧಿಯಲ್ಲ. ಜನ ನೆಮ್ಮದಿಯಿಂದ ಇರಬೇಕು, ಬಡವರ ಬದುಕು ಹಸನಾಗಬೇಕು, ಶಾಂತಿ-ನೆಮ್ಮದಿ ಹಾಗೂ ಪ್ರೀತಿಯಿಂದ ಕುಟುಂಬದಲ್ಲಿ ಇರಬೇಕು. ಇದು ಕಾಂಗ್ರೆಸ್ ಪಕ್ಷದ ಧ್ಯೇಯವಾಗಿದೆ ಎಂದು ಕಾನೂನು, ನ್ಯಾಯ ಹಾಗೂ ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.

Advertisement

ಅವರು ಶನಿವಾರ 2023-24ನೇ ಸಾಲಿನ ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿ ಯೋಜನೆಯಡಿ ಮಾಗಡಿ ಹಾಗೂ ಶಿರಹಟ್ಟಿ ಪಟ್ಟಣದ ಅಲ್ಪಸಂಖ್ಯಾತರ ಕಾಲೋನಿಯಲ್ಲಿ 5 ಕೋಟಿ ರೂ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ವಯಕ್ತಿಕ ಕುಟುಂಬಗಳ ನಿರ್ವಹಣೆ ಅಸಮಾಧಾನದಲ್ಲಿರಬಾರದು. ತಾಯಂದಿರು ಅಡಚಣೆಯಲ್ಲಿರಬಾರದು ಎನ್ನುವುದಕ್ಕಾಗಿ ನಮ್ಮ ಪಕ್ಷದ ವತಿಯಿಂದ ಬಡವರ ಬದುಕಿನ ಶ್ರೇಯೋಭಿವೃದ್ಧಿಗಾಗಿ ಸಿಎಂ ಸಿದ್ದರಾಮಯ್ಯ ಅವರು ಗೃಹಲಕ್ಷ್ಮೀ, ಗೃಹಜ್ಯೋತಿ, ಅನ್ನಭಾಗ್ಯ, ಯುವನಿಧಿಯೆಂಬ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ. ಪ್ರತಿ ಕುಟುಂಬಕ್ಕೆ ನಮ್ಮ ಸರಕಾರ 5 ಸಾವಿರ ರೂಗಳನ್ನು ಮಾಸಿಕವಾಗಿ ನೀಡುತ್ತಿದೆ. ಅಂದರೆ ವರ್ಷಕ್ಕೆ 60 ಸಾವಿರ ರೂಗಳನ್ನು ಕುಟುಂಬ ನಿರ್ವಹಣೆಗೆ ನೀಡುತ್ತಿದ್ದೇವೆ.

ಹೀಗೆ ರಾಜ್ಯದಲ್ಲಿ 1 ಕೋಟಿ ಕುಟುಂಬಗಳನ್ನು ಬಡತನ ರೇಖೆಯಿಂದ ಮೇಲೆತ್ತುವ ಕೆಲಸ ನಮ್ಮ ಸರಕಾರ ಮಾಡಿದೆ. ಪ್ರತಿ ಕುಟುಂಬದ ಯಜಮಾನಿಗೆ ಡಿಬಿಓಟಿ ಮೂಲಕ ನೇರವಾಗಿ ಅವರ ಖಾತೆಗೆ ಹಣ ಸಿಗುವಂತೆ ಮಾಡಿ ಮಧ್ಯವರ್ತಿಗಳು ನುಸುಳದಂತೆ, ಭ್ರಷ್ಟಾಚಾರ ಕಿತ್ತೊಗೆಯುವ ಕೆಲಸ ನಮ್ಮ ಸರಕಾರ ಮಾಡಿದೆ. ಇದು ನಮ್ಮ ಸರಕಾರದ ಸಾಧನೆ. ಬಡವರ ಸೇವೆ, ದೇಶ ಹಾಗೂ ರಾಜ್ಯದ ಅಭಿವೃದ್ಧಿಯೇ ನಮ್ಮ ಗುರಿ ಎಂದರು.

ಕೇವಲ ಅಲ್ಪಸಂಖ್ಯಾತರ ಕಾಲೋನಿಗಳಲ್ಲದೇ, ಎಸ್‌ಸಿ ಕಾಲೋನಿಗಳಲ್ಲಿ, ಹಿಂದುಳಿದ ವರ್ಗದವರ ಕಾಲೋನಿಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಕಾಮಗಾರಿಗಳು ಗುಣಮಟ್ಟದಿಂದ ಕೂಡಿರಬೇಕು, ಎಲ್ಲರೂ ಜೊತೆಗೂಡಿ ಪ್ರಾಮಾಣಿಕವಾಗಿ ಕೆಲಸವನ್ನು ಮಾಡಬೇಕು ಎಂದು ಸಚಿವರು ತಿಳಿಸಿದರು.

ಶಾಸಕ ಡಾ. ಚಂದ್ರು ಲಮಾಣಿ, ಮಾಜಿ ಶಾಸಕ ರಾಮಣ್ಣ ಲಮಾಣಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹುಮಾಯೂನ್ ಮಾಗಡಿ, ಪ.ಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಉಪಾಧ್ಯಕ್ಷೆ ನೀಲವ್ವ ಹುಬ್ಬಳ್ಳಿ, ಸ್ಥಾಯಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಶಿರಹಟ್ಟಿ, ಮಾಗಡಿ ಗ್ರಾ.ಪಂ ಅಧ್ಯಕ್ಷ ಮೈಲಾರೆಪ್ಪ ಹಾದಿಮನಿ, ಗುರುನಾಥ ದಾನಪ್ಪನವರ, ಪರಮೇಶ ಪರಬ, ದೇವಪ್ಪ ಲಮಾಣಿ, ಚಾಂದಸಾಬ ಮುಳಗುಂದ, ಬುಡನಶ್ಯಾ ಮಕಾನದಾರ, ತಿಪ್ಪಣ್ಣ ಸಂಶಿ, ಮಂಜುನಾಥ ಘಂಟಿ, ಅಜ್ಜು ಪಾಟೀಲ, ಮಾಬುಸಾಬ ಲಕ್ಷ್ಮೇಶ್ವರ, ಸೋಮನಗೌಡ ಮರಿಗೌಡ ಮುಂತಾದವರು ಉಪಸ್ಥಿತರಿದ್ದರು.

ದೇಶದಲ್ಲಿ ಸಮಾಜಗಳನ್ನು ವಿಂಗಡಿಸುವ ಕೆಲಸ ನಡೆಯುತ್ತಿದೆ. ಎಲ್ಲರಿಗೂ ಭಾತೃತ್ವ ಬೆಸೆಯುವಂತಹ ಶ್ರೀ ಜ.ಫಕೀರೇಶ್ವರರ ಮಠ ಇಡೀ ದೇಶಕ್ಕೆ ಮಾದರಿಯಾಗಿದ್ದು, ಸರ್ವ ಜನಾಂಗದ ಶಾಂತಿಯ ತೋಟ ಈ ಮಠವಾಗಿದೆ. ಇಲ್ಲಿ ಎಲ್ಲರೂ ಒಂದಾಗಿರುವುದು ಇಡೀ ದೇಶಕ್ಕೆ ಮಾದರಿ. ಶ್ರೀಮಠದ ಭಕ್ತರ ಅನುಕೂಲಕ್ಕಾಗಿ ಭರವಸೆಯಂತೆ ಈಗಾಗಲೇ 1 ಕೋಟಿ ರೂ.ಗಳನ್ನು ಅಭಿವೃದ್ಧಿ ಕೆಲಸಕ್ಕೆ ನೀಡಲಾಗಿದೆ ಎಂದು ಸಚಿವ ಎಚ್.ಕೆ. ಪಾಟೀಲ ಹೇಳಿದರು.

 


Spread the love

LEAVE A REPLY

Please enter your comment!
Please enter your name here