ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ರಾಜ್ಯ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿರುವ, ಬಡವರ ಪರವಾಗಿರುವ ಈ ಇಂದಿರಾ ಕ್ಯಾಂಟೀನ್ ಕಾಮಗಾರಿಯನ್ನು ಆದಷ್ಟು ಶೀಘ್ರವಾಗಿ, ಗುಣಮಟ್ಟದಿಂದ ಪೂರ್ಣಗೊಳಿಸಬೇಕು ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸೂಚನೆ ನೀಡಿದರು.
ಅವರು ರವಿವಾರ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಕಾಮಗಾರಿಯನ್ನು ವೀಕ್ಷಿಸಿ ಮಾತನಾಡಿದರು.
ಇಂದಿರಾ ಕ್ಯಾಂಟಿನಿನಲ್ಲಿನ ಇಂದಿರಾಗಾಂಧಿ ಚಿತ್ರ ಸರಿಯಾಗಿ ಜನರಿಗೆ ಕಾಣುವಂತೆ ಸ್ಪಷ್ಟವಾಗಿ ಮೂಡಿಬರಬೇಕು. ಈ ಕ್ಯಾಂಟಿನ್ ಎಲ್ಲರನ್ನೂ ಆಕರ್ಷಿಸುವಂತೆ ಇರಬೇಕು. ಸರಿಯಾಗಿ ನಿರ್ವಹಣೆ ಮಾಡಬೇಕು. ಈ ಯೋಜನೆ ಎಲ್ಲರೂ ತಲುಪುವಂತೆ ಮಾಡಬೇಕು ಎಂದು ಸ್ಥಳದಲ್ಲಿದ್ದ ಪುರಸಭೆಯ ಮುಖ್ಯಾಧಿಕಾರಿ ಮಹೇಶ ಹಡಪದ ಅವರಿಗೆ ಸೂಚಿಸಿದರು.
ಮುಖ್ಯಾಧಿಕಾರಿ ಮಹೇಶ ಹಡಪದ ಕಾಮಗಾರಿಯ ಕುರಿತು ಸಚಿವರಿಗೆ ಮಾಹಿತಿ ನೀಡಿ, ಇಂದಿರಾ ಕ್ಯಾಂಟಿನ್‌ಗೆ ಸಂಬಂಧಿಸಿದಂತೆ ಕಾಮಗಾರಿ ಶೇ. 90ರಷ್ಟು ಪೂರ್ಣಗೊಂಡಿದೆ. ನೆಲಕ್ಕೆ ಕಾಂಕ್ರಿಟ್ ಹಾಕುವುದು, ಗೋಡೆಗಳನ್ನು ನಿರ್ಮಿಸುವುದು ಎಲ್ಲಾ ಮುಗಿಸಿದ್ದೇವೆ. ಉಳಿಕೆ ಕೆಲಸವನ್ನು ಶೀಘ್ರವೇ ಮಾಡಿ ಆದಷ್ಟು ಬೇಗ ಜನರ ಉಪಯೋಗಕ್ಕೆ ಸಮರ್ಪಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪುರಸಭೆಯ ಸದಸ್ಯ ಪ್ರವೀಣ ಬಾಳಿಕಾಯಿ, ಮಹೇಶ ಹೊಗೆಸೊಪ್ಪಿನ ಮಾತನಾಡಿ, ಲಕ್ಷ್ಮೇಶ್ವರದಲ್ಲಿ ಕುಡಿಯುವ ನೀರಿನ ಸಮಸ್ಯೆಯಿದ್ದು, ಈ ಬಗ್ಗೆ ಪರಿಹಾರ ಒದಗಿಸಬೇಕು ಎಂದು ಮನವಿ ಮಾಡಿದರು. ಅಮೃತ ಯೋಜನೆ ಕುಡಿಯುವ ನೀರಿಗೆ ಇಡಲಾಗಿರುವ ಹಣವನ್ನು ವಿನಿಯೋಗಿಸಿ ಆದಷ್ಟು ಶೀಘ್ರವೇ ಕಾಮಗಾರಿ ಪ್ರಾರಂಭಿಸಿ ಸಂಬಂಧಪಟ್ಟವರಿಗೆ ನಿರ್ದೇಶಿಸಬೇಕು ಎಂದರು. ಇದಕ್ಕೆ ಪುರಸಭೆ ಅಧ್ಯಕ್ಷ ಯಲ್ಲವ್ವ ದುರಗಣ್ಣನವರ, ಉಪಾಧ್ಯಕ್ಷ ಫಿರ್ದೋಷ ಅಡೂರ ಹಾಗೂ ಹಿರಿಯ ಸದಸ್ಯರು ದನಿಗೂಡಿಸಿದರು.
ಈ ವೇಳೆ ಮಾಜಿ ಶಾಸಕರಾದ ಜಿ.ಎಸ್. ಗಡ್ಡದೇವರಮಠ, ರಾಮಣ್ಣ ಲಮಾಣಿ, ಪುರಸಭೆ ಸದಸ್ಯರಾದ ಬಸವರಾಜ ಓದುನವರ, ಮುಸ್ತಾಕ್ ಅಹ್ಮದ ಶಿರಹಟ್ಟಿ, ಸಿಕಂದರ್ ಕಣಕೆ, ಪುರಸಭೆ ಆರೋಗ್ಯ ನಿರೀಕ್ಷಕ ಮಂಜುನಾಥ ಮುದಗಲ್, ಮುಖಂಡರಾದ ಗುರುನಾಥ ದಾನಪ್ಪನವರ, ಚನ್ನಪ್ಪ ಜಗಲಿ, ರಫೀಕ ಕಲಬುರ್ಗಿ, ದೀಪಕ್ ಲಮಾಣಿ, ಪಕ್ಕೀರೇಶ ನಂದೆಣ್ಣನವರ, ದಾದಪೀರ ಮುಚ್ಚಾಲೆ, ಅಣ್ಣಪ್ಪ ರಾಮಗೆರಿ, ತಿಪ್ಪಣ್ಣ ಸಂಶಿ, ಸಿದ್ದು ದುರಗಣ್ಣವರ ಸೇರಿದಂತೆ ಮುಂತಾದವರು ಇದ್ದರು.



