ವಿಜಯಸಾಕ್ಷಿ ಸುದ್ದಿ, ಗದಗ : ಅಪೌಷ್ಟಿಕತೆ ನಿವಾರಿಸುವಲ್ಲಿ ಕೇಂದ್ರ ಸರ್ಕಾರ ಆಯೋಜಿಸಿರುವ ರಾಷ್ಟ್ರೀಯ ಪೋಷಣ್ ಅಭಿಯಾನ ಒಂದು ಮಹತ್ತರ ಕಾರ್ಯಕ್ರಮವಾಗಿದ್ದು, ಕಿಶೋರಿ, ಬಾಲಕಿಯರಿಂದ ಹಿಡಿದು ಗರ್ಭಿಣಿಯರು ಸೇರಿದಂತೆ ಮಹಿಳೆಯರು ಮತ್ತು ಮಕ್ಕಳನ್ನು ಅಪೌಷ್ಟಿಕತೆಯಿಂದ ಮುಕ್ತಗೊಳಿಸುವ ಕಾರ್ಯಕ್ರಮ ಇದಾಗಿದೆ ಎಂದು ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಭಾರತ ಸರ್ಕಾರದ ಕೇಂದ್ರ ಸಂವಹನ ಇಲಾಖೆ, ಧಾರವಾಡ ವಾರ್ತಾ ಮತ್ತು ಪ್ರಸಾರ ಸಚಿವಾಲಯ, ತಾಲೂಕು ಆಡಳಿತ, ತಾಲೂಕು ಪಂಚಾಯತ್, ಶಿಶು ಅಭಿವೃದ್ಧಿ ಯೋಜನೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಶಿರಹಟ್ಟಿ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ, ವಿವಿಧ ಶಾಲೆಗಳು ಹಾಗೂ ಗ್ರಾಮ ಪಂಚಾಯತ ಬೆಳ್ಳಟ್ಟಿ ಇವರ ಸಂಯುಕ್ತಾಶ್ರಯದಲ್ಲಿ ಗ್ರಾಮದ ಎಪಿಎಂಸಿ ಸಮುದಾಯ ಭವನದಲ್ಲಿ ಪೋಷಣ ಅಭಿಯಾನ, ಸ್ವಚ್ಛತೆಯೇ ಸೇವೆ, ಹೊಸ ಕ್ರಿಮಿನಲ್ ಕಾನೂನುಗಳು, ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ, ಪ್ರಧಾನ ಮಂತ್ರಿಯವರ ದೂರದೃಷ್ಟಿ-2017, ಏಕ್ ಭಾರತ- ಶ್ರೇಷ್ಠ ಭಾರತ ಹಾಗೂ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಈ ಯೋಜನೆಗೆ ಕೇಂದ್ರ ಸರ್ಕಾರ ಸಂಪೂರ್ಣ ಆರ್ಥಿಕ ಸಹಾಯ ನೀಡುತ್ತಿದ್ದು, ರಾಜ್ಯ ಸರ್ಕಾರಗಳ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೂಲಕ ದೇಶದ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ಆರೋಗ್ಯ ಬಗ್ಗೆ ಗಮನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ದೇಶದ ಪ್ರತಿಯೊಬ್ಬ ನಾಗರಿಕರ ಜೀವನ ಮಟ್ಟದ ಜೊತೆಗೆ ಆರೋಗ್ಯ, ಶಿಕ್ಷಣ, ನೈಮಲ್ಯ, ಸ್ವಚ್ಛತೆಗೆ ಹೆಚ್ಚು ಗಮನ ಹರಿಸಿ ದೇಶದ ಪ್ರತಿಯೊಬ್ಬರು ಅಭಿವೃದ್ಧಿ ಹೊಂದುವ ಉದ್ದೇಶ ಹೊಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೇಂದ್ರ ಸಂವಹನ ಇಲಾಖೆ, ಧಾರವಾಡದ ಕಾರ್ಯಕ್ರಮ ಸಂಯೋಜಕರಾದ ಮುರಳೀದರ ತುಕ್ಕಪ್ಪ ಕಾರಭಾರಿ, ಕೇಂದ್ರ ಸರ್ಕಾರ ಆರೋಗ್ಯ, ಶಿಕ್ಷಣ, ಸ್ವಚ್ಛತೆ ಜೊತೆಗೆ ಮಕ್ಕಳ ಮಹಿಳೆಯಲ್ಲಿರುವ ಅಪೌಷ್ಟಿಕತೆ ನಿವಾರಣೆ ದೃಷ್ಟಿಯಿಂದ ಪೋಷಣ ಅಭಿಯಾನ ಮೂಲಕ ಸದೃತ ಭಾರತ ನಿರ್ಮಿಸುವಲ್ಲಿ ಮುಂದಾಗಿದೆ. ಸಾರ್ವಜನಿಕರು ಎಲ್ಲಾ ಯೋಜನೆಗಳ ಸಮರ್ಪಕ ಮಾಹಿತಿ ಪಡೆದು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಶಿರಹಟ್ಟಿ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೃತ್ಯುಂಜಯ ಗುಡ್ಡದಾನ್ವೆರಿ ಪೋಷಣ ಮಾಸಾಚರಣೆ ಮತ್ತು ಇಲಾಖೆಯ ಇತರ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದ ಅಂಗವಾಗಿ ಆರೋಗ್ಯ ತಪಾಸಣಾ ಶಿಬಿರ, ಪೌಷ್ಠಿಕ ಆಹಾರ ಪ್ರಾತ್ಯಕ್ಷಿಕೆ, ಅನ್ನಪ್ರಾಶನ, ಉತ್ತಮ ಅಂಗನವಾಡಿ ಕಾರ್ಯಕರ್ತೆಯರಿಗೆ ಸನ್ಮಾನ, ವಿವಿಧ ಸ್ಪರ್ಧೆಗಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮತ್ತು ಗ್ರಾಮ ಪಂಚಾಯಿತಿ ಸದಸ್ಯರು, ಸಿಬ್ಬಂದಿ ಹಾಗೂ ಅಧಿಕಾರಿಗಳು ಸ್ವಚ್ಛತೆಯೇ ಸೇವೆ ಅಂಗವಾಗಿ ಸ್ವತಃ ಕಸ ತೆಗೆದು ಜಾಗೃತಿ ಮೂಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷ ರಮೇಶ ನಿರ್ವಾಣಶೆಟ್ಟರ ವಹಿಸಿದ್ದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷೆ ಗಂಗವ್ವ ತಳವಾರ, ಸದಸ್ಯರಾದ ಶಿವನಗೌಡ ಪಾಟೀಲ, ತಿಮ್ಮರಡ್ಡಿ ಮರಡ್ಡಿ, ನೇತ್ರಾ ಸಜ್ಜನ, ಮೋಹನಚಂದ ಜಿ, ಪರಶುರಾಮ ಮಲ್ಲಾಡದ ಹಾಗೂ ಸರ್ವ ಸದಸ್ಯರು, ಸ್ಥಳೀಯ ಮುಖಂಡರು, ಶಿರಹಟ್ಟಿ ತಹಸೀಲ್ದಾರ ಅನಿಲ ಬಡಿಗೇರ, ತಾ.ಪಂ ಇಒ ಎಸ್.ಎಸ್. ಕಲ್ಮನಿ, ರಾಧಾ ಜಿ, ಪಿಡಿಒ ಎಚ್.ಟಿ. ತಳವಾರ ಹಾಗೂ ಸಿಬ್ಬಂದಿ, ಅಂಗನವಾಡಿ ಮೇಲ್ವಿಚಾರಕಿಯರಾದ ಪಾರ್ವತಿ, ಅನ್ನಪೂರ್ಣ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಸಂಘದ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳು ಭಾಗವಹಿಸಿದ್ದರು. ಶಿಕ್ಷಕ ಗಿರೀಶ ಕೊಡಬಾಳ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಸದೃಢವಾದ ಮತ್ತು ಆರೋಗ್ಯವಂತ ಸಮಾಜ ಕಟ್ಟಬೇಕಾದರೆ ಗರ್ಭಿಣಿಯರು, ಬಾಣಂತಿಯರು ಪೌಷ್ಟಿಕ ಆಹಾರ ಬಳಸುವ ಮೂಲಕ ತಮ್ಮ ಮತ್ತು ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಿಳೆಯರು ಪೋಷಣ್ ಅಭಿಯಾನದಡಿ ದೊರೆಯುವ ಸವಲತ್ತುಗಳನ್ನು ಮತ್ತು ಆಯುಷ್ಮಾನ್ ಕಾರ್ಡ್ ಮಾಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು.
ಕಾರ್ಯಕ್ರಮಕ್ಕೂ ಮುನ್ನ ಗಣ್ಯರು ತಾಯಿ ಹೆಸರಲ್ಲಿ ಒಂದು ಸಸಿ ಅಭಿಯಾನದ ಅಂಗವಾಗಿ ಸಸಿ ನೆಟ್ಟರು. ಬೆಳ್ಳಟ್ಟಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಶಾಲೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಬ್ಯಾನರ್‌ಗಳ ಮೂಲಕ ಘೋಷಣೆ ಕೂಗುತ್ತಾ ಜನರಲ್ಲಿ ಜಾಗೃತಿ ಮಾಡಿಸಿದರು.