ವಿಜಯಸಾಕ್ಷಿ ಸುದ್ದಿ, ರೋಣ : ಗದಗ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ರೋಣ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಅನುಷ್ಠಾನಗೊಂಡ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ಯಾವಗಲ್, ಬೆಳವಣಕಿ, ಮಲ್ಲಾಪೂರ, ಚಿಕ್ಕಮಣ್ಣೂರ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ನಿರ್ಮಿಸಲಾದ ಸಿಸಿ ರಸ್ತೆ ಹಾಗೂ ಚರಂಡಿ ಕಾಮಗಾರಿ, ಬದು ನಿರ್ವಹಣೆ ಕಾಮಗಾರಿ, ಗ್ರಂಥಾಲಯ, ದನದ ಕೊಟ್ಟಿಗೆ, ವೈಯಕ್ತಿಕ ಶೌಚಾಲಯ, ಘನತ್ಯಾಜ್ಯ ವಿಲೇವಾರಿ ಘಟಕ ಸೇರಿದಂತೆ ವಿವಿಧ ಕಾಮಗಾರಿಗಳನ್ನು ವೀಕ್ಷಣೆ ಮಾಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಕಾಮಗಾರಿ ಕಡತಗಳು ಹಾಗೂ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಅಳತೆಯ ಪ್ರಮಾಣವನ್ನು ಪರಿಶೀಲನೆ ನಡೆಸಿದರು.
ಯಾವಗಲ್ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಇಓ ಅವರು ಆರೋಗ್ಯ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು, ರಿಜಿಸ್ಟರ್ ಪರಿಶೀಲಿಸಿ ಮಾಹಿತಿ ಪಡೆದರು.
ಸೆಪ್ಟೆಂಬರ್ ತಿಂಗಳಲ್ಲಿ ಎಷ್ಟು ಜನರ ರಕ್ತ ತಪಾಸಣೆ ಮಾಡಿಸಲಾಗಿದೆ, ಅದರಲ್ಲಿ ಹೀಮೋಗ್ಲೋಬಿನ್ ಕೊರತೆ ಎಷ್ಟು ಮಕ್ಕಳಿಗೆ ಇದೆ ಎಂಬುದರ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯನ್ನು ಶುಚಿಯಾಗಿ ಇಡಲು ಸೂಚನೆ ನೀಡಿದ ಅವರು, ಆಸ್ಪತ್ರೆಯಲ್ಲಿ ಸರಿಯಾದ ರೀತಿಯಲ್ಲಿ ಕೆಲಸ ಮಾಡಲು ಅಲ್ಲಿನ ಸಿಬ್ಬಂದಿಗಳಿಗೆ ಎಚ್ಚರಿಕೆ ನೀಡಿದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇದುವರೆಗೂ ಸಹಜ ಹೆರಿಗೆಯಾಗಿಲ್ಲ. ನಾವು ಬೇರೆ ಊರಿಗೆ ಹೋಗಬೇಕಾಗುತ್ತದೆ ಎಂದು ಸಾರ್ವಜನಿಕರು ದೂರಿದರು. ಈ ಕುರಿತು ಸಿಬ್ಬಂದಿಗಳಿಂದ ಮಾಹಿತಿ ಪಡೆದ ಅವರು, ಕೇಂದ್ರದಲ್ಲಿ ಸಹಜ ಹೆರಿಗೆಯನ್ನು ಮಾಡಲು ಸೂಚನೆ ನೀಡಿದರು. ಸಹಜ ಹೆರಿಗೆಗೆ ಬೇಬಿ ವಾರ್ಮ್ ಹಾಗೂ 7 ಟ್ರೇಸ್ ನೀಡಲು ತಾಲೂಕು ಅಧಿಕಾರಿಗೆ ಸೂಚನೆ ನೀಡಿದರು.
ಬಳಿಕ ಗ್ರಾಮದ ಗ್ರಂಥಾಲಯಕ್ಕೆ ಭೇಟಿ ನೀಡಿ, ಬೆಳವಣಕಿ ಹಾಗೂ ಯಾವಗಲ್ ಗ್ರಾಮದಲ್ಲಿ ಸಿಸಿ ರಸ್ತೆ ನಿರ್ಮಾಣದ ಅಳತೆ ಹಾಗೂ ಗ್ರಾಮದಲ್ಲಿ ನಿರ್ಮಾಣವಾದ ಉದ್ಯಾನವನ ಬದು ನಿರ್ವಹಣೆ ಕಾಮಗಾರಿಗಳ ಪರಿಶೀಲನೆ ನಡೆಸಿದರು.
ರೋಣ ತಾಲೂಕಿನ ಮಲ್ಲಾಪೂರ ಗ್ರಾ.ಪಂನ ಸರಕಾರಿ ಪ್ರೌಢಶಾಲೆಗೂ ದಿಢೀರ್ ಭೇಟಿ ನೀಡಿದ ಸಿಇಓ ಭರತ ಎಸ್, ಮಕ್ಕಳ ಜೊತೆಗೂಡಿ ಕೆಳಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿದು ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟ ಪರಿಶೀಲಿಸಿದರು. ಉಟ ಮಾಡುತ್ತ ವಿದ್ಯಾರ್ಥಿಗಳೊಂದಿಗೆ ಕೆಲ ಹೊತ್ತು ಪ್ರಶ್ನೋತ್ತರ ನಡೆಸಿದ ಅವರು, ಮೂಲಭೂತ ಸೌಕರ್ಯ ಹಾಗೂ ಊಟದ ಗುಣಮಟ್ಟ, ಇನ್ನಿತರ ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು. ಶಾಲೆಯಲ್ಲಿ ಬೋಧನಾ ಗುಣಮಟ್ಟ, ಶೌಚಾಲಯ, ಸ್ವಚ್ಛ ಕುಡಿಯುವ ನೀರಿನ ಸೌಲಭ್ಯ, ಅಡುಗೆ ಕೋಣೆಗಳಿಗೆ ಭೇಟಿ ನೀಡಿ ಸ್ವಚ್ಛತೆಯನ್ನು ಅವಲೋಕಿಸಿದರು.
ಈ ಸಂದರ್ಭದಲ್ಲಿ ರೋಣ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾ ಹಕಾರಿ, ಸಹಾಯಕ ನಿರ್ದೇಶಕರಾದ (ಗ್ರಾ.ಉ) ಚಂದ್ರಶೇಖರ ಬಿ.ಕಂದಕೂರ, ಎಲ್ಲಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ವಿವಿಧ ಗ್ರಾಮ ಪಂಚಾಯಿತಿಗಳ ಚುನಾಯಿತ ಜನಪ್ರತಿನಿಧಿಗಳು, ತಾಲೂಕು ಮಟ್ಟದ ಅಧಿಕಾರಿಗಳು, TC, TIEC, TA, BFT ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಹಾಜರಿದ್ದರು.
ಮಲ್ಲಾಪೂರ ಗ್ರಾಮದ ವಿವಿಧ ಕಾಮಗಾರಿಗಳ ವೀಕ್ಷಣೆ ಬಳಿಕ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿ ಶಾಲೆಯಲ್ಲಿರುವ ಮಕ್ಕಳ ಸಂಖ್ಯೆ ಬಗ್ಗೆ ಮಾಹಿತಿ ಪಡೆದರು. ಮಕ್ಕಳ ಸಂಖ್ಯೆ ಕಡಿಮೆ ಆಗಲು ಕಾರಣವನ್ನು ಮಕ್ಕಳಿಂದ ಕೇಳಿ ಪಡೆದರು. ಮಕ್ಕಳಿಗೆ ತಮ್ಮ ಪರಿಚಯ ಮಾಡಿಕೊಂಡು ಪ್ರತ್ಯೇಕವಾಗಿ 15 ನಿಮಿಷಗಳ ಕಾಲ ಶಾಲಾ ಕೊಠಡಿಯಲ್ಲಿ ಮಕ್ಕಳೊಂದಿಗೆ ಸಂವಾದ ನಡೆಸಿದರು.