ದುರಗಪ್ಪ ಹೊಸಮನಿ
ವಿಜಯಸಾಕ್ಷಿ ಸುದ್ದಿ, ಗದಗ
ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದಾಗಿ ನಗರದ ಹೃದಯ ಭಾಗದಲ್ಲಿ ಸಾರ್ವಜನಿಕ ಸೇವೆಗೆ ಸಿದ್ಧಗೊಂಡು ಸುಮಾರು ಒಂಬತ್ತು ತಿಂಗಳು ಕಳೆದರೂ, ಜಿಲ್ಲೆಯ ಜನರಿಗೆ ನವೀಕೃತ ಬಸ್ ನಿಲ್ದಾಣ ಬಳಕೆಗೆ ಮುಕ್ತವಾಗಿಲ್ಲ. ಇದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಗಂಡ-ಹೆಂಡತಿ ಜಗಳದ ನಡುವೆ ಕೂಸು ಬಡವಾದಿತು ಎಂಬಂತೆ ಜನಪ್ರತಿನಿಧಿಗಳ ಮುಸುಕಿನ ಗುದ್ದಾಟದಿಂದ ಜಿಲ್ಲೆಯ ಜನರು ರೋಸಿ ಹೋಗಿದ್ದಾರೆ.
ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ನಡುವೆ ಪ್ರತಿಷ್ಠೆಯ ಟ್ರೋಫಿಗಾಗಿ ತ್ರಿಕೋನ ಸರಣಿ ಏರ್ಪಟ್ಟಿದೆ.
ಡಿ.24 ರಂದು ಬಸ್ ನಿಲ್ದಾಣ ಉದ್ಘಾಟನೆಗೆಂದೇ ನಗರಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ ಉದ್ಘಾಟನೆ ಮಾಡದೇ, ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಟಿ ಮಾಡಿ ಬಂದ ಪುಟ್ಟ ಹೋದ ಪುಟ್ಟ ಎಂಬಂತೆ ವಾಪಸ್ ಹೋಗಿದ್ದಾರೆ.
ಸಾರಿಗೆ ಸಚಿವರು ಗದಗ ಜನತೆಯ ಬಹು ದಿನಗಳ ಬೇಡಿಕೆಯಾದ ನಿಲ್ದಾಣಕ್ಕೆ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಅವರ ಹೆಸರು ನಾಮಕರಣ ಮಾಡಬೇಕೆಂಬ ಬೇಡಿಕೆ ಈಡೇರಿಸಿದರೂ, ಬಸ್ ನಿಲ್ದಾಣ ಇಲ್ಲಿಯವರೆಗೂ ಲೋಕಾರ್ಪಣೆಗೊಂಡಿಲ್ಲ. ಉದ್ಘಾಟನೆಗಾಗಿ
ಜಿಲ್ಲಾ ಕಾಂಗ್ರೆಸ್, ಬಿಜೆಪಿ ಹಾಗೂ ಸಾರಿಗೆ ಸಚಿವರ ನಡುವೆ ಜಿದ್ದಾಜಿದ್ದಿ ನಡೆದಂತಿದೆ.
ಸುಮಾರು 5 ಕೋಟಿ ರೂ. ವೆಚ್ಚದಲ್ಲಿ 2018 ರ ಜನವರಿಯಿಂದ ಬಸ್ ನಿಲ್ದಾಣ ಕಾಮಗಾರಿ ಪ್ರಾರಂಭವಾಗಿದೆ. ಅಂದು ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಇಂದಿನ ಶಾಸಕ ಎಚ್.ಕೆ.ಪಾಟೀಲ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಹಾಗಾಗಿ ಉದ್ಘಾಟನೆಯನ್ನು ನಾವೇ ಮಾಡ್ತೀವಿ ಎಂದು ಕಾಂಗ್ರೆಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಇತ್ತ ಬಿಜೆಪಿ, ರಾಜ್ಯದಲ್ಲಿ ನಮ್ಮ ಸರ್ಕಾರವಿದ್ದು ನಾವೇ ಉದ್ಘಾಟನೆ ಮಾಡುತ್ತೇವೆ ಎಂದು ಹೇಳುತ್ತಿದ್ದಾರಂತೆ.
ಶಾಸಕ ಎಚ್.ಕೆ.ಪಾಟೀಲ್ ಅವರು ತರಾತುರಿಯಲ್ಲಿ ಜು.7 ತಾರೀಖಿಗೆ ಉದ್ಘಾಟನೆ ಮಾಡುತ್ತೇವೆ ಎಂದು ಸಿದ್ಧ ಮಾಡಿದ್ದರಂತೆ. ಇದಕ್ಕೆ ಜಿಲ್ಲಾ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಉದ್ಘಾಟನೆಯನ್ನು ಮುಂದೂಡಿದ್ದರಂತೆ. ಅಲ್ಲಿಂದ ಇಲ್ಲಿಯವರೆಗೂ ಲೋಕಾರ್ಪಣೆಗೊಳ್ಳದೇ ಉದ್ಘಾಟನಾ ಕಾರ್ಯ ನನೆಗುದಿಗೆ ಬಿದ್ದಿದೆ ಎಂದು ಹೇಳಲಾಗುತ್ತಿದೆ.
ಸ್ಥಳೀಯ ಶಾಸಕರಿಲ್ಲದ್ದಕ್ಕೆ ಉದ್ಘಾಟನೆ ರದ್ದು?
ನೂತನವಾಗಿ ನಿರ್ಮಾಣಗೊಂಡಿರುವ ಬಸ್ ನಿಲ್ದಾಣ ಡಿ.24 ರಂದು ಉದ್ಘಾಟನೆಯಾಗಲು ಸಿದ್ಧಗೊಂಡಿತ್ತಲ್ಲದೇ, ಉದ್ಘಾಟನೆಯ ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿತ್ತು. ಆದರೆ, ಸ್ಥಳೀಯ ಶಾಸಕ ಎಚ್.ಕೆ.ಪಾಟೀಲ್ ಅವರು ಜಿಲ್ಲೆಯಲ್ಲಿ ಇರದಿದ್ದಕ್ಕೆ ಲೋಕಾರ್ಪಣೆ ರದ್ದಾಗಿದೆ ಎನ್ನಲಾಗುತ್ತಿದೆ.
ನೂತನವಾಗಿರುವ ನಿರ್ಮಿಸಿರುವ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡುವ ಮೂಲಕ, ಸಾರ್ವಜನಿಕ ಸೇವೆಗೆ ಮುಕ್ತವಾಗಿಸಬೇಕು.
ಬಾಬು ಬಾಕಳೆ, ಕ್ರಾಂತಿ ಸೇನಾ ಹೋರಾಟಗಾರ, ಗದಗ.