ವಿಜಯಸಾಕ್ಷಿ ಸುದ್ದಿ, ಗದಗ : ಅಕ್ಟೋಬರ್ 2ರಿಂದ ಒಂದು ತಿಂಗಳ ಕಾಲ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಮಟ್ಟದಲ್ಲಿ `ಉದ್ಯೋಗ ಖಾತರಿ ನಡಿಗೆ ಸಬಲತೆಯೆಡೆಗೆ’ ಅಭಿಯಾನದಲ್ಲಿ ಕಾಮಗಾರಿಗಳ ಬೇಡಿಕೆ ಪಡೆಯಲು ವೇದಿಕೆ ಕಲ್ಪಿಸುವಂತ ವಿಶೇಷ ಚಟುವಟಿಕೆಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಓ ಭರತ್ ಎಸ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಗ್ರಾ.ಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಪ್ರತಿ ಮನೆಗೆ ಭೇಟಿ ನೀಡಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಕುರಿತು ಜಾಗೃತಿ ಮೂಡಿಸಿ ಬೇಡಿಕೆ ಸ್ವೀಕರಿಸಲಾಗುವುದು.
ಕಾಮಗಾರಿಗಳ ಬೇಡಿಕೆಯ ಅರ್ಜಿಗಳನ್ನು ಸ್ವೀಕರಿಸಲು ಜಾಗೃತಿ ವಾಹನದಲ್ಲಿ ಯೋಜನೆಯ ಸಮಗ್ರ ಮಾಹಿತಿ ಒಳಗೊಂಡ ಜಿಂಗಲ್ಸ್ಗಳಿಂದ ಅರಿವು ಮೂಡಿಸಿ ಕ್ರಿಯಾ ಯೋಜನೆ ಸಿದ್ಧಪಡಿಸುವಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆ ಬಗ್ಗೆ ತಿಳಿಸಲಾಗುತ್ತಿದ್ದು, ಈ ಮೂಲಕ ಗ್ರಾಮದ ರೈತರಿಂದ ವೈಯಕ್ತಿಕ ಬೇಡಿಕೆಗಳನ್ನು ಸಂಗ್ರಹಿಸಲು ಬೇಡಿಕೆ ಪೆಟ್ಟಿಗೆಯನ್ನು ಗ್ರಾಮ ಪಂಚಾಯಿತಿಯಲ್ಲಿಟ್ಟು ಪ್ರತಿದಿನ ಸ್ವೀಕೃತವಾದ ಬೇಡಿಕೆಗಳನ್ನು ಪರಿಶೀಲಿಸಿ ಕಾಮಗಾರಿಗಳ ಪಟ್ಟಿಗೆ ಸೇರ್ಪಡೆ ಮಾಡಲು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಆಯುಕ್ತಾಲಯದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ 2025-26ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸಲು ವೇಳಾಪಟ್ಟಿಯಂತೆ ಕಾಲಮಿತಿಯೊಳಗೆ ಸದರಿ ಪಕ್ರಿಯೆಯನ್ನು ಪೂರ್ಣಗೊಳಿಸುವಂತೆ ಎಲ್ಲಾ ಗ್ರಾ.ಪಂಗಳಿಗೆ ಸೂಚಿಸಿದೆ.
ಯೋಜನೆಯ ಪ್ರಮುಖಾಂಶಗಳು
ಪ್ರತಿ ಕುಟುಂಬಕ್ಕೆ 100 ದಿನಗಳ ಕೆಲಸ ಖಾತರಿ, ಗಂಡು ಹೆಣ್ಣಿಗೆ ಸಮಾನ ಕೂಲಿಯಾಗಿ ಪ್ರತಿ ದಿನಕ್ಕೆ 349 ರೂ. ಪಾವತಿ, ಕಾಮಗಾರಿ ಪ್ರಮಾಣದಲ್ಲಿ ಹಿರಿಯ ನಾಗರಿಕರಿಗೆ ಮತ್ತು ವಿಶೇಷ ಚೇತನರಿಗೆ ಶೇ.50ರಷ್ಟು ರಿಯಾಯಿತಿ, ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ನಿರ್ವಹಿಸುವ ಕೆಲಸಕ್ಕೆ ಅಥವಾ ಕೂಲಿ ಕಾರ್ಮಿಕರಿಗೆ ಹೆಚ್ಚುವರಿಯಾಗಿ ಶೇ.10ರಷ್ಟು ರಿಯಾಯತಿ, ಮಹಾತ್ಮ ಗಾಂಧಿ ನರೇಗಾದಡಿ ನೋಂದಾಯಿತ ಕುಟುಂಬವು ತಮ್ಮ ಜೀವಿತಾವಧಿಯಲ್ಲಿ 5 ಲಕ್ಷ ರೂಗಳ ಮಿತಿಯೊಳಗೆ ಬೇಕಾದ ವೈಯಕ್ತಿಕ ಕಾಮಗಾರಿಗಳನ್ನು ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಜಿ.ಪಂ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ ತಿಳಿಸಿ, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.



