ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ನಡೆದ ಟಿ20 ಮಹಿಳಾ ವಿಶ್ವಕಪ್ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 6 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲನುಭವಿಸಿದ್ದ ಟೀಂ ಇಂಡಿಯಾ ತನ್ನ ಎರಡನೇ ಪಂದ್ಯದಲ್ಲಿ ಕಮ್ ಬ್ಯಾಕ್ ಮಾಡಿದ್ದು, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅಧಿಕ ಪಂದ್ಯಗಳನ್ನು ಗೆದ್ದ ತಂಡ ಎಂಬ ಹೆಗ್ಗಳಿಕೆ ಟೀಂ ಇಂಡಿಯಾ ಪಾತ್ರವಾಗಿದೆ.
ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಭಾರತಕ್ಕೆ ಸೆಮಿಫೈನಲ್ ಆಸೆ ಜೀವಂತವಾಗಿಟ್ಟುಕೊಳ್ಳಲು ಈ ಪಂದ್ಯದಲ್ಲಿ ಗೆಲ್ಲುವುದು ಅನಿವಾರ್ಯವಾಗಿತ್ತು.
ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲನೇ ಪಂದ್ಯದಲ್ಲಿ ಬೌಲಿಂಗ್‌ನಲ್ಲಿ ವಿಫಲವಾಗಿದ್ದ ಭಾರತ ಎರಡನೇ ಪಂದ್ಯದಲ್ಲಿ ಶಿಸ್ತಿನ ಬೌಲಿಂಗ್ ದಾಳಿ ನಡೆಸಿತು. ಪಾಕಿಸ್ತಾನ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 105 ರನ್ ಗಳಿಸಿತು. ಮುನೀಬ್ ಅಲಿ 17 ರನ್, ನಿದಾ ದರ್ 28 ರನ್, ಫಾತಿಮಾ ಸನಾ 13 ರನ್, ಸೈಯದ್ ಅರೂಬ್ ಶಾ 14 ರನ್ ಗಳಿಸಿದರು.
ಭಾರತ ಅತ್ಯುತ್ತಮ ಸ್ಪಿನ್ ದಾಳಿ ಸಂಘಟಿಸಿತು, ಅರುಂಧತಿ ರೆಡ್ಡಿ 4 ಓವರ್ ಗಳಲ್ಲಿ 19 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು. ಶ್ರೇಯಾಂಕಾ ಪಾಟೀಲ್ ಕೂಡ 4 ಓವರ್ ಗಳಲ್ಲಿ ಕೇವಲ 12 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ರೇಣುಕಾಸಿಂಗ್, ದೀಪ್ತಿ ಶರ್ಮಾ ಮತ್ತು ಆಶಾ ಶೋಭನಾ ತಲಾ ಒಂದು ವಿಕೆಟ್ ಪಡೆದರು.
106 ರನ್‌ಗಳ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 18.5 ಓವರ್ ಗಳಲ್ಲಿ 108 ರನ್ ಗಳಿಸುವ ಮೂಲಕ 6 ವಿಕೆಟ್‌ಗಳ ಸುಲಭ ಗೆಲುವು ಸಾಧಿಸಿತು. ಶಫಾಲಿ ವರ್ಮಾ 32 ರನ್ ಗಳಿಸಿದರೆ, ಜೆಮಿಮಾ ರೋಡ್ರಿಗಸ್ 23 ರನ್ ಗಳಿಸಿದರೆ, ನಾಯಕಿ ಹರ್ಮನ್‌ಪ್ರೀತ್ ಕೌರ್ 29 ರನ್ ಗಳಿಸಿದರು.
ಈ ಗೆಲುವಿನ ಮೂಲಕ ಭಾರತದ ಸೆಮಿಫೈನಲ್ ಆಸೆ ಜೀವಂತವಾಗಿದೆ. ಭಾರತ ಮುಂದಿನ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಆಸ್ಟ್ರೇಲಿಯಾ ವಿರುದ್ಧ ಸೆಣೆಸಲಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದರೆ, ಸೆಮಿಫೈನಲ್ ತಲುಪಲಿದೆ. ಮೊದಲನೇ ಪಂದ್ಯದಲ್ಲಿ 58 ರನ್‌ಗಳಿಂದ ಸೋತಿದ್ದರಿಂದ ರನ್ ರೇಟ್ ಮೇಲೆ ಪರಿಣಾಮ ಬೀರಿದ್ದು, ಮುಂದಿನ ಪಂದ್ಯಗಳಲ್ಲಿ ಗೆಲ್ಲುವ ಜೊತೆಗೆ, ರನ್ ರೇಟ್ ಬಗ್ಗೆ ಕೂಡ ಗಮನ ಹರಿಸಬೇಕಾಗಿದೆ.