ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆ ಮತದಾನವು ಗದಗ ಜಿಲ್ಲೆಯ ಮುಂಡರಗಿ, ನರಗುಂದ, ರೋಣ ಹಾಗೂ ಗಜೇಂದ್ರಗಡ ತಾಲೂಕುಗಳ ಗ್ರಾಮ ಪಂಚಾಯತಿಗಳಲ್ಲಿ ಒಟ್ಟು 850 ಸ್ಥಾನಗಳಿಗೆ ಭಾನುವಾರ ನಡೆದ ಮತದಾನವು ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದಲ್ಲಿ ನಡೆದ ಗಲಾಟೆ ಹೊರತುಪಡಿಸಿ ಜಿಲ್ಲೆಯಲ್ಲಿ ಶಾಂತಿಯುತವಾಗಿತ್ತು. ಬಹುತೇಕ ಎಲ್ಲಾ ಮತಗಟ್ಟೆಗಳಲ್ಲಿ ಬೆಳಗಿನಿಂದಲೇ ಬಿರುಸಿನ ಮತದಾನ ಆರಂಭವಾಗಿತ್ತು.
ರೋಣ ತಾಲ್ಲೂಕಿನ ಗ್ರಾಮಗಳ ಮತಗಟ್ಟೆಗಳಲ್ಲಿ ಮಹಿಳೆಯರು ಮತ್ತು ಪುರುಷರು ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದು ಕಂಡುಬಂದಿತು. ಗುಜಮಾಗಡಿ, ಚಿಕ್ಕಮಣ್ಣೂರ, ಬೆಳವಣಿಕೆ, ಕರಮುಡಿ, ಮೆಣಸಗಿ ಸೇರಿದಂತೆ ಹಲವು ಮತಗಟ್ಟೆಗಳಲ್ಲಿ ಪುರುಷರು ಮತ್ತು ಮಹಿಳೆಯರು ಪ್ರತ್ಯೇಕ ಸಾಲಿನಲ್ಲಿ ನಿಂತು ಹಕ್ಕು ಚಲಾಯಿಸಿದರು. ಹೀಗೆ ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಮತದಾನ ಮಾಡಲು ಗುರುತಿನ ಚೀಟಿಯೊಂದಿಗೆ ಸರದಿ ಸಾಲಿನಲ್ಲಿ ನಿಂತು ಮತಗಟ್ಟೆಗೆ ತೆರಳಿ ಮತದಾನ ಮಾಡಿದ್ದು ವಿಶೇಷವಾಗಿತ್ತು.
ರೋಣ ತಾಲ್ಲೂಕಿನ ಹಲವು ಮತಗಟ್ಟೆಗಳಲ್ಲಿ ತಮ್ಮ ಮಕ್ಕಳು, ಮೊಮ್ಮಕ್ಕಳ ಸಹಾಯದೊಂದಿಗೆ ಹಿರಿಯರು ಮತಗಟ್ಟೆಗೆ ಆಗಮಿಸಿ ಮತ ಹಕ್ಕು ಚಲಾಯಿಸಿದ್ದು ಕಂಡುಬಂದಿತು. ಹಲವು ಮತಗಟ್ಟೆಗಳಲ್ಲಿ ಬೆಳಗಿನ ವೇಳೆಯಲ್ಲಿ ಬಿರುಸಿನಿಂದ ಮತದಾನ ನಡೆಯಿತು. ಗ್ರಾಮಗಳ ಪ್ರತಿ ಮತದಾರರು ಮಾಸ್ಕ್ ಧರಿಸುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮತಗಟ್ಟೆಗೆ ತೆರಳಿ ಮತ ಚಲಾಯಿಸಿದ್ದು ಕಂಡುಬಂದಿತು.
ಹಲವು ಕಡೆಗಳಲ್ಲಿ ಹೊಸ ಮತದಾರರು ಹುರುಪಿನಿಂದ ಮತ ಚಲಾಯಿಸಿದ್ದು ಕಂಡುಬಂದಿತು. ಹಲವು ಗ್ರಾಮಗಳ ಮತಗಟ್ಟೆಗಳಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆಗೆ ತೆರಳಿ ಹಕ್ಕು ಚಲಾಯಿಸಿದ್ದು ವಿಶೇಷ ಎನಿಸಿತು.
ಎಲ್ಲಾ ಮತಗಟ್ಟೆಗಳಲ್ಲಿ ಥರ್ಮಲ್ ಸ್ಕ್ಯಾನರ್ ಮೂಲಕ ಮತದಾರರನ್ನು ತಪಾಸಣೆ ಮಾಡಿ ಮತಗಟ್ಟೆಗೆ ಕಳುಹಿಸುತ್ತಿದ್ದ ದೃಶ್ಯ ಕಂಡುಬಂದಿತು. ಜತೆಗೆ ಸ್ಯಾನಿಟೇಜರ್ ವ್ಯವಸ್ಥೆ ಮಾಡಲಾಗಿತ್ತು, ಹಾಗೆಯೇ 4 ರಿಂದ 5 ಗಂಟೆ ಅವಧಿಯಲ್ಲಿ ಕೋವಿಡ್-19 ಶಂಕಿತರಿಗೆ ಮತಹಕ್ಕು ಚಲಾಯಿಸಲು ಅವಕಾಶ ನೀಡಲಾಗಿತ್ತು.
ಮತದಾನದ ವಿವರ
ಎರಡನೇ ಹಂತದ ಗ್ರಾಮ ಪಂಚಾಯತಿ ಚುನಾವಣೆಯ ಸಮಯವಾರು ಒಟ್ಟಾರೆ ಮತದಾನದ ವಿವರ ಇಂತಿದೆ; ಮುಂಜಾನೆ 9 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 8.22 ನರಗುಂದ ಶೇ 8.29, ರೋಣ ಶೇ. 6.62 ಹಾಗೂ ಗಜೇಂದ್ರಗಡ ಶೇ. 7.74 ಒಟ್ಟು ಶೇ. 7.69 ರಷ್ಟು ಮತದಾನವಾಗಿತ್ತು.
ಮುಂಜಾನೆ 11 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 24.23 ನರಗುಂದ ಶೇ 24.59, ರೋಣ ಶೇ. 20.16 ಹಾಗೂ ಗಜೇಂದ್ರಗಡ ಶೇ. 25.46 ಒಟ್ಟು ಶೇ. 23.53 ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 1 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 44.50 ನರಗುಂದ ಶೇ 46.96, ರೋಣ ಶೇ. 42.02 ಹಾಗೂ ಗಜೇಂದ್ರಗಡ ಶೇ. 44.91 ಒಟ್ಟು ಶೇ. 44.51 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 3 ಗಂಟೆಯವರೆಗೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನಲ್ಲಿ ಶೇ. 64.88 ನರಗುಂದ ಶೇ 66.45, ರೋಣ ಶೇ. 60.71 ಹಾಗೂ ಗಜೇಂದ್ರಗಡ ಶೇ. 62.29 ಒಟ್ಟು ಶೇ. 63.48 ರಷ್ಟು ಮತದಾನವಾಗಿತ್ತು. ಸಂಜೆ 5 ಗಂಟೆಯವರೆಗೆ ಅಂತಿಮವಾಗಿ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಶೇ. 82.13 ನರಗುಂದ ಶೇ 83.64, ರೋಣ ಶೇ. 77.41 ಹಾಗೂ ಗಜೇಂದ್ರಗಡ ಶೇ. 78.51 ಒಟ್ಟು ಶೇ. 80.32 ರಷ್ಟು ಮತದಾನವಾಗಿದೆ.
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಹಾಗೂ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ ಕೆ ಅವರು ರೋಣ ತಾಲ್ಲೂಕಿನ ಗುಜಮಾಗಡಿ, ಡ.ಸ.ಹಡಗಲಿ, ಸವಡಿ, ನರಗುಂದ ತಾಲ್ಲೂಕಿನ ಹದ್ಲಿ, ಕಲಕೇರಿ ಗ್ರಾಮಗಳ ಮತಗಟ್ಟೆಗಳಿಗೆ ಬೇಟಿ ನೀಡಿ ಮತದಾನ ಪ್ರಕ್ರಿಯೆ ವೀಕ್ಷಿಸಿದರು.