ಬೆಂಗಳೂರು: ಯಾರೂ ಕಿಂಗ್ ಮೇಕರ್ ಆಗಲು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾರ್ಟಿ ಹೈಕಮಾಂಡ್ ತೀರ್ಮಾನವೇ ಅಂತಿಮ. ಯಾರೊಬ್ಬರ ವೈಯುಕ್ತಿಕ ತೀರ್ಮಾನ ಅಲ್ಲ. ಯಾರೂ ಕಿಂಗ್ ಮೇಕರ್ ಆಗಲು ಕಾಂಗ್ರೆಸ್ ನಲ್ಲಿ ಸಾಧ್ಯವಿಲ್ಲ. ಸಿದ್ದರಾಮಯ್ಯ ಮುಂದೆಯೂ ಸಿಎಂ ಆಗಿಯೇ ಇರುತ್ತಾರೆ. ಪಕ್ಷದಲ್ಲಿ ಯಾವ ಮುಸುಕಿನ ಗುದ್ದಾಟವೂ ಇಲ್ಲ. ಸರ್ಕಾರ ಆರಂಭಗೊಂಡ ದಿನದಿಂದ ಬಿಜೆಪಿಯವರು ಸರ್ಕಾರ ಬೀಳುತ್ತದೆ ಎನ್ನುತ್ತಿದ್ದಾರೆ. ಇದೆಲ್ಲ ರಾಜಕೀಯದಲ್ಲಿ ಸ್ವಾಭಾವಿಕ ಎಂದು ಹೇಳಿದರು.
ರಹಸ್ಯ ಸಭೆಗಳ ಬಗ್ಗೆ ಹೈಕಮಾಂಡ್‌ಗೆ ವರದಿ ರವಾನೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಪರವಾಗಿ ನಾವು ನಿಂತಿದ್ದೇವೆ. ಪಕ್ಷಕ್ಕೆ ಪ್ರತಿ ದಿನ 12 ಗಂಟೆ ಸಮಯ ನೀಡುತ್ತಿದ್ದೇವೆ. ಕೆಲವರು ತೆರೆಮರೆಯಲ್ಲಿ ಪಕ್ಷಕ್ಕೆ ದುಡಿಯುತ್ತಿರುತ್ತಾರೆ. ಕೆಲವರು ಹೈಲೈಟ್ ಆಗುತ್ತಾರೆ, ಕೆಲವರು ಹೈಲೈಟ್ ಆಗೋದಿಲ್ಲ. ವಿಮಾನನಿಲ್ದಾಣ ರಸ್ತೆಯಲ್ಲಿ ಪೋಸ್ಟರ್ ಬ್ಯಾನರ್ ಹಾಕಿಕೊಳ್ಳುವವರು ಹೈಲೈಟ್ ಆಗುತ್ತಾರೆ. ಹಳ್ಳಿಯಲ್ಲಿ ಸ್ವಂತ ದುಡ್ಡಿನಿಂದ ಪಕ್ಷ ಕಟ್ಟುವವರು ಗೊತ್ತೇ ಆಗುವುದಿಲ್ಲ. ನಾವೆಲ್ಲ ಸಭೆ ಸೇರಿದ ಕಾರಣಕ್ಕೆ ಹೆದರಬೇಕಾಗಿಲ್ಲ. ಎಲ್ಲವನ್ನೂ ಹೈಕಮಾಂಡ್ ಗಮನಿಸುತ್ತದೆ ಎಂದು ಹೇಳಿದರು.