ಬೆಂಗಳೂರು: ವಿದ್ಯುತ್ ತಂತಿ ತುಂಡಾಗಿ ಬಿದ್ದು ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಚಿಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜಮ್ಮ (55) ಮೃತ ದುರ್ದೈವಿಯಾಗಿದ್ದು, ಮಂಜಮ್ಮ ಹಾಗೂ ಮತ್ತಿಬ್ಬರು ಮಹಿಳೆಯರು ಸೇರಿ ರಸ್ತೆ ಬದಿ ನಿಂತು ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಹೈಟೆನ್ಷನ್ ವೈರ್ ಮಂಜಮ್ಮ ಮೇಲೆ ಬಿದ್ದಿದೆ. ಅಷ್ಟೇ ಏಕಾಏಕಿ ಬೆಂಕಿ ಕಿಡಿ ಹೊತ್ತುಕೊಂಡಿದ್ದು, ಕ್ಷಣಾರ್ಧದಲ್ಲೇ ಕರೆಂಟ್ ಶಾಕ್ ಹೊಡೆದಿದೆ.
ಈ ವೇಳೆ ಮಂಜಮ್ಮ ಕೆಳಗೆ ಬಿದ್ದಿದ್ದು, ಬೆಂಕಿಯು ಹೊತ್ತಿ ಉರಿದಿದೆ. ಜತೆಗೆ ಇದ್ದ ಮಹಿಳೆಯು ಮಂಜಮ್ಮರ ರಕ್ಷಣೆಗೆ ಮುಂದಾಗಿದ್ದಾರೆ. ಆದರೆ ಅವರಿಗೂ ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಅಕ್ಕ-ಪಕ್ಕದ ಜನರು ಓಡಿ ಬಂದಿದ್ದು, ಮಹಿಳೆಯನ್ನು ಎಳೆದುಕೊಂಡು ರಕ್ಷಿಸಿದ್ದಾರೆ. ಇನ್ನು ಈ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿದ್ದಾರೆ. ಘಟನೆ ಸಂಬಂಧ ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.