ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮುತ್ತಿಗೆ

0
Slum Board office siege
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಗದಗ-ಬೆಟಗೇರಿ ಅವಳಿ ನಗರದ ವಿವಿಧ ಸ್ಲಂ ಪ್ರದೇಶಗಳಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಡಿಯಲ್ಲಿ ಮಂಜೂರಾಗಿರುವ 863 ಮನೆಗಳ ನಿರ್ಮಾಣ ಕಾರ್ಯವನ್ನು ನಡೆಸಲಾಗುತ್ತಿದ್ದು, ಸ್ಲಂ ಬೋರ್ಡ್ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಲ್ಲದೆ, ಯಾವುದೇ ಮನೆಗಳನ್ನು ಪೂರ್ಣ ಪ್ರಮಾಣದಲ್ಲಿ ನಿರ್ಮಾಣ ಮಾಡದೇ ಸರ್ಕಾರಕ್ಕೆ ಸುಳ್ಳು ದಾಖಲೆಗಳನ್ನು ಸಲ್ಲಿಸಿ ಭಾರೀ ಭ್ರಷ್ಟಾಚಾರ ನಡೆಸಿದ್ದಾರೆಂದು ಆರೋಪಿಸಿ ಗದಗ ಜಿಲ್ಲಾ ಸ್ಲಂ ಸಮಿತಿ ನೇತೃತ್ವದಲ್ಲಿ ನೂರಾರು ಸ್ಲಂ ನಿವಾಸಿಗಳು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

Advertisement

ಗದಗ ಜಿಲ್ಲಾ ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಮಾತನಾಡಿ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಗುತ್ತಿಗೆದಾರರು ಸರ್ಕಾರದ ಆದೇಶವನ್ನು ಗಾಳಿ ತೂರಿ ರಾಜ ಕಾಲುವೆ ಹಾಗೂ ಕೆರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸುತ್ತಿದ್ದಾರೆ. ಕೂಲಿ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿರುವ ಕೊಳಗೇರಿ ಪ್ರದೇಶದಲ್ಲಿ ಜನರಿಂದ ಲಕ್ಷಾಂತರ ಹಣವನ್ನು ಪಡೆದುಕೊಂಡು ಸರ್ಕಾರದ ಮನೆಗಳನ್ನು ನಿರ್ಮಿಸಿಕೊಡುತ್ತಿರುವ ಗುತ್ತಿಗೆದಾರರ ಕ್ರಮವನ್ನು ಸ್ಲಂ ಸಮಿತಿ ಖಂಡಿಸುತ್ತದೆ. ಇದರ ಬಗ್ಗೆ ಅನೇಕ ಬಾರಿ ಸ್ಲಂ ಬೋರ್ಡ್ ಅಧಿಕಾರಿಗಳ ಗಮನಕ್ಕೆ ತಂದರೂ ಕ್ರಮ ಕೈಗೊಂಡಿಲ್ಲ.

ಈ ಹಿಂದೆ ಗದಗ-ಬೆಟಗೇರಿ ಅವಳಿ ನಗರದಲ್ಲಿ ಮತ್ತು ಗದಗ ಜಿಲ್ಲೆಯ ಅನೇಕ ತಾಲೂಕು ಕೇಂದ್ರದ ಸ್ಲಂ ಪ್ರದೇಶದಲ್ಲಿ ವಸತಿ ಮತ್ತು ಅಭಿವೃದ್ಧಿ ಅನುದಾನದಲ್ಲಿ ಭಾರೀ ಭ್ರಷ್ಟಾಚಾರವನ್ನು ನಡೆಸಿರುವ ಗುತ್ತಿಗೆದಾರನಿಗೆ ಮತ್ತೆ ಗದಗ-ಬೆಟಗೇರಿ ನಗರದಲ್ಲಿಯ ೮೬೩ ಮನೆಗಳನ್ನು ನಿರ್ಮಿಸಲು ಜವಾಬ್ದಾರಿ ನೀಡಿದ್ದರಿಂದ ಸ್ಲಂ ಜನರಿಗೆ ವಸತಿ ಯೋಜನೆಯಿಂದ ವಂಚನೆಯಾಗುತ್ತಿದೆ ಎಂದು ಆರೋಪಿಸಿದರು.

ಆವಾಸ್ ಯೋಜನೆಡಿಯಲ್ಲಿ ನಡೆಸಲಾಗುತ್ತಿರುವ ಕಾಮಗಾರಿಯನ್ನು ನಿಲ್ಲಿಸಬೇಕು, ಕಳಪೆ ಕಾಮಗಾರಿ ಹಾಗೂ ಸರ್ಕಾರದ ಅನುದಾನದ ದುರ್ಬಳಕ್ಕೆ ಮಾಡಿಕೊಂಡಿರುವ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಬೇಕು, ಪರವಾನಿಗೆ ಇಲ್ಲದೇ ಮನೆಗಳನ್ನು ನಿರ್ಮಿಸುತ್ತಿರುವ ಮಾಫಿಯಾಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ತಕ್ಷಣ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸ್ಲಂ ಪ್ರದೇಶಗಳ ಸಮಸ್ಯಗಳು ಮತ್ತು ವಸತಿ ಯೋಜನೆಯ ಕುರಿತು ಸ್ಲಂ ಸಮಿತಿ ಮುಖಂಡರ ಜೊತೆಗೆ ಕುಂದು-ಕೊರತೆಗಳ ಸಭೆಯನ್ನು ಕರೆಯಲು ಕ್ರಮಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.

ಸ್ಲಂ ಸಮಿತಿಯ ಪದಾಧಿಕಾರಿಗಳಾದ ಅಶೋಕ ಕುಸಬಿ, ಪರವೀನಬಾನು ಹವಾಲ್ದಾರ, ಮೆಹರುನಿಸಾ ಢಾಲಾಯತ, ಇಬ್ರಾಹಿಂ ಮುಲ್ಲಾ, ಮೌಲಾಸಾಬ ಗಚ್ಚಿ, ದುರ್ಗಪ್ಪ ಮಣ್ಣವಡ್ಡರ, ಮೆಹರುನಿಸಾ ಡಂಬಳ, ಮೈಮುನ ಬೈರಕದಾರ, ಆಯೀಷಾ ಉಮಚಗಿ, ಆರೀಫ ಕಾಗದಗಾರ, ಪ್ರೇಮಾ ಮಣವಡ್ಡರ, ಸುಶೀಲಮ್ಮ ಗೊಂದಾರ, ಮೆಹಬೂಬಸಾಬ ಬಳ್ಳಾರಿ, ಸಾಕ್ರುಬಾಯಿ ಗೋಸಾವಿ, ಖಾಜೇಸಾಬ ಇಸ್ಮಾಯಿಲನವರ, ಮಕ್ತುಮಸಾಬ ಮುಲ್ಲಾನವರ, ಈರಮ್ಮ ಬೇವಿನಮರದ, ನಾಗರಾಜ ಮಣವಡ್ಡರ, ದಾದು ಗೋಸಾವಿ, ಖಾಜೇಸಾಬ ಬಳ್ಳಾರಿ, ಮಲೇಶಪ್ಪ ಕಲಾಲ, ಚಂದ್ರಪ್ಪ ಲಕ್ಕುಂಡಿ, ನಜೀರಅಹ್ಮದ ಹಾವಗಾರ, ಶರಣಪ್ಪ ಬಿಂಕದಕಟ್ಟಿ ಮುಂತಾದವರಿದ್ದರು.

ವಸತಿ ಯೋಜನೆಯಲ್ಲಿ ಸ್ಲಂ ಬೋರ್ಡ್ ಅಧಿಕಾರಿಗಳು ಮತ್ತು ಗುತ್ತಿಗೆದಾರರು ನಡೆಸುತ್ತಿರುವ ಕಳಪೆ ಕಾಮಗಾರಿ ಮತ್ತು ಭ್ರಷ್ಟಾಚಾರ, ಸ್ಲಂ ನಿವಾಸಿಗಳಿಗೆ ಸುಳ್ಳು ಹೇಳಿ ಸ್ಲಂ ಬೋರ್ಡ್ ಅಧಿಕಾರಿಗಳು ಲಕ್ಷಾಂತರ ಹಣವನ್ನು ಪಡೆದುಕೊಂಡು ಮೋಸ ಮಾಡಿರುವ ಕುರಿತು ಸ್ಲಂ ಸಮಿತಿಯ ನಿಯೋಗದೊಂದಿಗೆ ತೆರಳಿ ಮುಖ್ಯಮಂತ್ರಿಗಳಿಗೆ, ವಸತಿ ಇಲಾಖೆ ಸಚಿವರಿಗೆ ಹಾಗೂ ಸ್ಲಂ ಬೋರ್ಡ್ ಅಧ್ಯಕ್ಷರ ಗಮನಕ್ಕೆ ತರಲಾಗುವುದೆಂದು ಸ್ಲಂ ಸಮಿತಿ ಅಧ್ಯಕ್ಷ ಇಮ್ತಿಯಾಜ ಆರ್.ಮಾನ್ವಿ ಇದೇ ಸಂದರ್ಭದಲ್ಲಿ ಹೇಳಿದರು.


Spread the love

LEAVE A REPLY

Please enter your comment!
Please enter your name here