ನಗರೀಕರಣದಿಂದ ಜನಪದ ಸಂಸ್ಕೃತಿ ನಾಶ : ಪ್ರೊ. ಚಂದ್ರಶೇಖರ ವಸ್ತ್ರದ

0
Sahitya Koota program ``Okkaligana Ulakdani-Nelada Song''
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜನಪದ ಸಂಸ್ಕೃತಿಯ ಮೂಲ ಬೇರು ರೈತನಲ್ಲಿದೆ. ಉತ್ತಿ ಬಿತ್ತಿ ಬೆಳೆಯುವ ಎಲ್ಲ ಸಂದರ್ಭಗಳಲ್ಲಿ ರೂಪುಗೊಂಡ ಸಾಹಿತ್ಯ ಜನಪದವಾಗಿದೆ. ಮಣ್ಣಿನ ವಾಸನೆ ಈ ಸಾಹಿತ್ಯದಲ್ಲಿದೆ. ಆದರೆ ಇಂದು ನಗರೀಕರಣದ ಪ್ರಭಾವದಿಂದ ಜನಪದ ಸಂಸ್ಕೃತಿ ಕಣ್ಮರೆಯಾಗುತ್ತಿದೆ ಎಂದು ಪ್ರೊ. ಚಂದ್ರಶೇಖರ ವಸ್ತ್ರದ ಅಭಿಪ್ರಾಯಪಟ್ಟರು.

Advertisement

ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ನಿರಂತರ ಪ್ರಕಾಶನ ಗದಗ, ತುಷಾರ ಪ್ರಕಾಶನ ಕೊಪ್ಪಳ ಇವುಗಳ ಸಹಯೋಗದಲ್ಲಿ ಅರಹುಣಸಿಯ ರಮೇಶ ಕುರಿಯವರ ತೋಟದಲ್ಲಿ ಜರುಗಿದ ಸಾಹಿತ್ಯ ಕೂಟ `ಒಕ್ಕಲಿಗನ ಒಳದನಿ-ನೆಲದ ಹಾಡು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಹಳ್ಳಿ ಜೀವನದ ಬಾಲ್ಯವನ್ನು ತಮ್ಮ ಕವಿತೆಯಲ್ಲಿ ಪ್ರಸ್ತಾಪಿಸಿ, ಒಳಗೊಳ್ಳುವಿಕೆಯ ಸಂಸ್ಕೃತಿ ಪ್ರಬಲವಾಗಿದ್ದನ್ನು ನೆನಪಿಸಿಕೊಂಡರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೈಸೂರ ತೋಟಗಾರಿಕೆವಿಶ್ವವಿದ್ಯಾಲಯದ ಪ್ರಾಧ್ಯಾಪಕ ಆರ್ ಸಿದ್ದಪ್ಪ, ನಿವೃತ್ತ ಹಿರಿಯ ತೋಟಗಾರಿಕೆ ನಿರ್ದೇಶಕ ಸುರೇಶ ಕುಂಬಾರ ಗದಗ, ಕೃಷಿ ವಿ.ವಿ. ಪ್ರಾಧ್ಯಾಪಕ ಎಸ್.ಎಲ್. ಪಾಟೀಲ, ಬೆಳವಟಗಿ ಕೃಷಿ ವಿ.ವಿ. ಪ್ರಾಧ್ಯಾಪಕ ಸಿ.ಎಂ. ರಫಿ ಮಾತನಾಡಿ, ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ರೈತರು ಕಾಲಕ್ಕೆ ತಕ್ಕಂತೆ ಒಕ್ಕಲುತನದಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕು. ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಹಿನ್ನೆಲೆಯಲ್ಲಿ ಸಾವಯವ ಕೃಷಿಯಡೆಗೆ ಮುಖ ಮಾಡಬೇಕು. ನಮಗೆ ಬೇಕಾದ ತರಕಾರಿ, ಹಣ್ಣ ಹಂಪಲಗಳನ್ನು ನಾವೇ ಬೆಳೆದುಕೊಳ್ಳುವ ದಿಸೆಯಲ್ಲಿ ಪ್ರಯತ್ನಿಸಬೇಕು. ಸರಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಕೃಷಿಯಲ್ಲಿ ಖುಷಿ ಕಾಣಬೇಕೆಂದರು.

ವೇದಿಕೆ ಮೇಲೆ ಡಾ. ಜಿ.ಬಿ. ಪಾಟೀಲ, ನಿವೃತ್ತ ಕೃಷಿ ಅಧಿಕಾರಿ ವಿ.ಎಸ್.ಮ್ಯಾಗೇರಿ, ರೈತ ಸಂಘದ ಜಿಲ್ಲಾಧ್ಯಕ್ಷ ಮುತ್ತನಗೌಡ ಚೌಡರಡ್ಡಿ, ಗ್ರಾ.ಪಂ ಸದಸ್ಯ ನಾಗರಾಜ ಗುದ್ನೆಪ್ಪನವರ, ವಿ.ಕೆ. ಪಾಟೀಲ, ರೋಣ ತಾಲೂಕಾ ಕಸಾಪ ಅಧ್ಯಕ್ಷ ರಮಾಕಾಂತ ಕಮತಗಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳದಲ್ಲಿ 2024ನೇ ಸಾಲಿನ ಶ್ರೇಷ್ಠ ಕೃಷಿಕ ಮಹಿಳೆ ಪ್ರಶಸ್ತಿ ಪುರಸ್ಕೃತರಾದ ಶಿಲ್ಪಾ ರಮೇಶಕುರಿ (ಮ್ಯಾಗೇರಿ) ದಂಪತಿಗಳನ್ನು ಸನ್ಮಾನಿಸಲಾಯಿತು.

ಕವಿ ಎ.ಎಸ್. ಮಕಾನದಾರ ಆಶಯ ನುಡಿಗಳನ್ನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಶರಣಪ್ಪ ವಡಿಗೇರಿ ರೈತಗೀತೆ ಹಾಡಿದರು. ರಮೇಶ ಕುರಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೈತರು, ಪರಿಷತ್ತಿನ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮದು ಮಣ್ಣಿನ ಸಂಸ್ಕೃತಿ. ಹಬ್ಬಗಳು, ಆಚಾರಗಳು ಎಲ್ಲವೂ ಮಣ್ಣಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಕೃಷಿ ಚಟುವಟಿಕೆಗಳಲ್ಲಿ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಇಂದಿನ ಯುವಕರಿಗೆ ಪರಿಚಯಿಸುವ ಮತ್ತು ಸಂವಾದ ಏರ್ಪಡಿಸುವ ಕಾರ್ಯವನ್ನು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮಾಡುವದು ಇಂದಿನ ತುರ್ತು ಅಗತ್ಯವಾಗಿದೆ. ರೈತರಿಗೆ ಪ್ರೇರಣೆ ಮತ್ತು ಪ್ರೋತ್ಸಾಹವನ್ನು ನೀಡುವ ಹಿನ್ನೆಲೆಯಲ್ಲಿ ಕಸಾಪ ಇಂದಿನ ಕಾರ್ಯಕ್ರಮಗಳಿಗೆ ಅಣಿಯಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here