ಚಿತ್ರದುರ್ಗ: ಬಿಜೆಪಿಯ ಸಿಹಿ ಸುಳ್ಳುಗಳನ್ನು ಜನರು ಬಹುಬೇಗ ನಂಬುತ್ತಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬಿಜೆಪಿ ಆಡಳಿತದ ವಿರುದ್ಧ ಅಲ್ಲಿನ ಜನರಿದ್ದರು. ಕೇಂದ್ರ ಸರ್ಕಾರದ ವಿರುದ್ಧವೂ ಹರಿಯಾಣ ಜನರಿದ್ದರು.
ಹರಿಯಾಣದಲ್ಲಿ ಗ್ಯಾರಂಟಿ ಘೋಷಣೆ ವಿಫಲ ಅಂತ ಅಲ್ಲ. ಬಿಜೆಪಿಯ ಸಿಹಿ ಸುಳ್ಳುಗಳನ್ನು ಜನರು ಬಹುಬೇಗ ನಂಬುತ್ತಾರೆ. ಜನ ನಂಬುವಂತೆ ಬಿಜೆಪಿಗರು ಸುಳ್ಳುಗಳನ್ನು ಹೇಳುತ್ತಾರೆ. ಲೋಕಸಭೆ ಚುನಾವಣೆಯಲ್ಲಿ ಇಲ್ಲೂ ನಂಬಿದ್ದರು ಎಂದರು.
ಐದು ವರ್ಷ ಸಿದ್ಧರಾಮಯ್ಯ ಸಿಎಂ ಆಗಿ ಇರುತ್ತಾರೆ. ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರಗೆ ಕನಸು ಬೀಳುತ್ತಿರುತ್ತವೆ ಎಂದು ವ್ಯಂಗ್ಯವಾಡಿದರು. ಜಾತಿ ಜನಗಣತಿ ಬಗ್ಗೆ ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು. ನ್ಯೂನತೆಗಳಿದ್ದರೆ ಸರಿಪಡಿಸಿ ಕ್ರಮ ಕೈಗೊಳ್ಳಲಾಗುವುದು. ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಈಗ ಅಪ್ರಸ್ತುತ. ಮುಂದೆ ದಲಿತರು ಸಿಎಂ, ಪಿಎಂ ಆಗಲಿ, ಬೇಡ ಎನ್ನಲು ಆಗಲ್ಲ ಎಂದು ತಿಳಿಸಿದರು.



