ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಆರೋಪಿ ನಟ ದರ್ಶನ್, ಪವಿತ್ರಾ ಹಾಗೂ ಇತರೆ ಕೆಲವರ ಜಾಮೀನು ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮತ್ತೊಮ್ಮೆ ಮುಂದೂಡಿದ್ದು, ಇಂದು ಮಧ್ಯಾಹ್ನ 12.30ಕ್ಕೆ ದರ್ಶನ್ ಬೇಲ್ ಅರ್ಜಿ ವಿಚಾರಣೆಗೆ ಬರಲಿದೆ. ಪ್ರಕರಣದ ಕೆಲ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ಮೊದಲಿಗೆ ನಡೆದು ವಕೀಲರು ವಾದಿಸಿದರು. ಬಳಿಕ ಪ್ರಕರಣದ ಎಸ್ಪಿಪಿ ಪ್ರಸನ್ನ ಕುಮಾರ್ ಅವರು ವಾದ ಸರಣಿ ಆರಂಭಿಸಿ,
ದರ್ಶನ್ ಹಾಗೂ ಪವಿತ್ರಾ ಪರ ವಕೀಲರು ಪ್ರಕರಣದ ತನಿಖೆ ಬಗ್ಗೆ ಎತ್ತಿದ್ದ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಲು ಪ್ರಾರಂಭಿಸಿದರು. ಎಸ್ಪಿಪಿ ಅವರ ವಾದ ಸರಣಿ ಸುದೀರ್ಘವಾಗಿ ನಡೆದಿದ್ದು, ಅಂತಿಮವಾಗಿ ನ್ಯಾಯಾಲಯದ ಸಮಯ ಮೀರಿದ ಕಾರಣ ಪ್ರಕರಣದ ವಿಚಾರಣೆಯನ್ನು ಇಂದು ಮಧ್ಯಾಹ್ನ 12:30ಕ್ಕೆ ಮುಂದೂಡಲಾಯ್ತು.
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ಸಂಕಷ್ಟ ಮುಗಿಯುವಂತೆ ಕಾಣುತ್ತಿಲ್ಲ. ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರೂ, ವಿಚಾರಣೆಯನ್ನು ಮುಂದೂಡಿಕೊಂಡೇ ಬರಲಾಗಿದೆ. ಇನ್ನು ದರ್ಶನ್ ಅವರು ಜಾಮೀನು ಸಿಗಬಹುದು ಎನ್ನುವ ಭರವಸೆಯಲ್ಲಿದ್ದಾರೆ ಎನ್ನಲಾಗಿದೆ. ಈ ಬಾರಿಯಾದರೂ ದಾಸನಿಗೆ ಬೇಲ್ ಸಿಗುತ್ತಾ ಎಂದು ಅಭಿಮಾನಿಗಳು ಕಾತುರದಿಂದ ಕಾಯ್ತಿದ್ದು, ದರ್ಶನ್ ಜಾಮೀನು ಭವಿಷ್ಯ ಏನಾಗಲಿದೆ ಎಂದು ಕಾದುನೋಡಬೇಕಿದೆ.