ಸುಂದರ ಸಮಾಜ ಕಟ್ಟುವತ್ತ ಸಾಗಬೇಕು : ಡಾ.ಮಲ್ಲಿಕಾರ್ಜುನ ಶ್ರೀಗಳು

0
Nanda Diparadhan and felicitation program
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಸತ್ಯ, ಧರ್ಮ, ನ್ಯಾಯ, ನೀತಿಗಳ ಗೆಲುವಿನ ಸಂಕೇತದ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಎಲ್ಲರೂ ಬದುಕಿನಲ್ಲಿ ಪರಸ್ಪರ ಪ್ರೀತಿ, ಸಹನೆ, ಆದರ್ಶ ಜೀವನ ಮೌಲ್ಯಗಳನ್ನು ಅಳವಡಿಸಿಕೊಂಡು ಸುಂದರ ಸಮಾಜ ಕಟ್ಟುವತ್ತ ಸಾಗಬೇಕಾಗಿದೆ ಎಂದು ಧಾರವಾಡ ಮುರಘಾಮಠದ ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ನುಡಿದರು.

Advertisement

ಅವರು ಪಟ್ಟಣದ ಲಿಂಬಯ್ಯಸ್ವಾಮಿಮಠದಲ್ಲಿ ನವರಾತ್ರಿ ನಿಮಿತ್ತ ನಡೆದ ನಂದಾ ದೀಪಾರಾಧನೆ ಮತ್ತು ಸನ್ಮಾನ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿ, ಸಮಾಜದಲ್ಲಿರುವ ಹಿರಿಯರ ಅನುಭವ ಸಮಾಜಕ್ಕೆ ಒಂದು ದಾರಿದೀಪವಿದ್ದಂತೆ. ಅದನ್ನು ಬಳಸಿಕೊಳ್ಳಬೇಕು. ಪಟ್ಟಣದಲ್ಲಿ ಲಿಂಬಯ್ಯಸ್ವಾಮಿಮಠ ಕಾಯಕ, ದಾಸೋಹ, ಅನುಭವ ಸಿದ್ಧಾಂತದ ಪರಂಪರೆ, ಆಚಾರ ತಳಹದಿಯ ಮೇಲೆ ನಿಂತು ಕೆಲಸ ಮಾಡುವ ಮಠವಾಗಿದೆ.

ಪ್ರತಿಷ್ಠಾನದಿಂದ ಹಮ್ಮಿಕೊಳ್ಳುವ ದೇಹದಾನ, ನೇತ್ರದಾನ ಕಾರ್ಯಕ್ರಮ ಸಮಾಜಕ್ಕೆ ಒಳ್ಳೆಯ ಸಂದೇಶವಾಗಿದೆ. ಇಂತಹ ಮಾದರಿ ಕಾರ್ಯಗಳು ಇನ್ನೊಬ್ಬರಿಗೆ ಮಾರ್ಗದರ್ಶನವಾಗಲಿ ಎಂದು ನುಡಿದರು.

ಲಿಂಬಯ್ಯಸ್ವಾಮಿ ಪ್ರತಿಭಾ ಪ್ರತಿಷ್ಠಾನದ ಅಧ್ಯಕ್ಷ ಶಿವಪ್ರಕಾಶ ಲಿಂಬಯ್ಯಸ್ವಾಮಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ಶ್ರೀಮಠದ ಪರಂಪರೆ, ಸಂಪ್ರದಾಯ ಮತ್ತು ಪ್ರತಿಷ್ಠಾನದ ಉದ್ದೇಶ ಮತ್ತು ನಮ್ಮ ಹಿರಿಯರು ಹಾಕಿಕೊಟ್ಟ ಸಮಾಜಮುಖಿ ಚಿಂತನೆಗಳನ್ನು ಮುಂದುವರೆಸಿಕೊಂಡು ಹೋಗುವದಾಗಿ ಹೇಳಿದರು.

ಅಗಡಿ ಇಂಜನಿಯರಿಂಗ್ ಕಾಲೇಜಿನ ಉಪನ್ಯಾಸಕ ಸೋಮಶೇಖರ ಕೆರಿಮನಿ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹಲವಾರು ವರ್ಷಗಳಿಂದ ಮೂಳೆ ಮುರಿತಕ್ಕೆ ಚಿಕಿತ್ಸೆ ನೀಡುವ ಕಾಯಕದಲ್ಲಿ ನಿಸ್ವಾರ್ಥ ಸೇವೆ ಮಾಡುತ್ತಿರುವ ಕೆಸರಳ್ಳಿಯ ಹಾಲಯ್ಯ ಕುಲಕರ್ಣಿ ಅವರಿಗೆ `ಕಾಯಕಜೀವಿ’, ಪಟ್ಟಣದ ಪ್ರತಿಮಾ ಮಹಾಂತಶೆಟ್ಟರ ಅವರಿಗೆ `ಆದರ್ಶ ಸಾತ್ವಿಕ ಜೀವಿ’ ಮತ್ತು ಫಕ್ಕೀರಪ್ಪ ಕಳ್ಳಿಮನಿ ಅವರಿಗೆ `ಸಮಾಜ ಜೀವಿ’ ಎಂಬ ಬಿರುದಾಂಕಿತದ ಗೌರವ ಪುರಸ್ಕಾರ ನೀಡಲಾಯಿತು.

ಈ ವೇಳೆ ಪುರಸಭೆ ಅಧ್ಯಕ್ಷೆ ಯಲ್ಲಮ್ಮ ದುರಗಣ್ಣವರ, ಉಪಾಧ್ಯಕ್ಷ ಪಿರ್ದೋಸ್ ಆಡೂರ, ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ನಾಗರಾಜ ಶಿಗ್ಲಿ ಅವರನ್ನು ಸನ್ಮಾನಿಸಲಾಯಿತು. ಹರ್ಲಾಪುರದ ಸಾಂಬಯ್ಯ ಹಿರೇಮಠ ಹಾಗೂ ಸಂಗಡಿಗರು ಜಾನಪದ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಸಭೆಯ ಅಧ್ಯಕ್ಷತೆಯನ್ನು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ವಹಿಸಿ ಮಾತನಾಡಿದರು. ಪ್ರತಿಷ್ಠಾನದ ಧರ್ಮದರ್ಶಿಗಳಾದ ಆನಂದ ಗಡ್ಡದೇವರಮಠ, ಚಿದಾನಂದ ಲಿಂಬಯ್ಯಸ್ವಾಮಿಮಠ, ಸುಭಾಸ ಓದುನವರ, ದಿಲೀಪ ನಾಯರ, ಈಶ್ವರ ಮೆಡ್ಲೇರಿ, ನಿಂಗಪ್ಪ ಬನ್ನಿ ಸೇರಿ ಪ್ರತಿಷ್ಠಾನದ ಧರ್ಮದರ್ಶಿಗಳು, ಹಿರಿಯರು ಉಪಸ್ಥಿತರಿದ್ದರು.

ಮಹೇಶ ಲಿಂಬಯ್ಯಸ್ವಾಮಿಮಠ ಸ್ವಾಗತಿಸಿದರು. ಸೌಭಾಗ್ಯ ಕವಲೂರಮಠ, ಸುಲಕ್ಷಣಾ ಶ್ವೇತಾ, ದಿವ್ಯಾ, ವೇದಾಂತ ಲಿಂಬಯ್ಯಸ್ವಾಮಿಮಠ ನಿರ್ವಹಿಸಿಸಿದರು.

ನವರಾತ್ರಿ ಹಬ್ಬದ ಪವಿತ್ರ ಕಾಲದಲ್ಲಿ ಕೈಗೊಳ್ಳುವ ಧರ್ಮ ಕಾರ್ಯದಿಂದ ಮನುಷ್ಯನಲ್ಲಿನ ಅಜ್ಞಾನ, ಅಂಧಕಾರ, ದುರ್ಗುಣಗಳು ನಾಶವಾಗಿ ಸಾತ್ವಿಕ ಸದ್ಗುಣಗಳೊಂದಿಗೆ ದೈವತ್ವ ಪ್ರಾಪ್ತವಾಗುತ್ತದೆ. ಸಮಾಜದ ತೆರೆಮರೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಸುಪ್ತಚೇತನ ಶ್ರೀಮಠದಿಂದ ಗೌರವಿಸುವ ಕಾರ್ಯ ಶ್ಲಾಘನೀಯ. ಹಠಯೋಗ, ಶಿವಯೋಗದಿಂದ ಕಟ್ಟಿದ ಮಠದಲ್ಲಿ ಶರಣ ಸಂಸ್ಕೃತಿಯನ್ನು ಹುಟ್ಟು ಹಾಕಿ ಲಿಂಗೈಕ್ಯರಾದ ಲಿಂಬಯ್ಯಸ್ವಾಮಿಮಠದ ಸಹೋದರರು ಹಾಕಿಕೊಟ್ಟ ಸಮಾಜಮುಖಿ ಕಾರ್ಯ ಮುಂದುವರೆಯಲಿ ಎಂದು ಡಾ.ಮಲ್ಲಿಕಾರ್ಜುನ ಮಹಾಸ್ವಾಮಿಗಳು ಆಶಿಸಿದರು.

 


Spread the love

LEAVE A REPLY

Please enter your comment!
Please enter your name here