ವಿಜಯಸಾಕ್ಷಿ ಸುದ್ದಿ, ಗದಗ : ಕಿತ್ತೂರು ಉತ್ಸವದ ಪ್ರಯುಕ್ತ ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯ ಜ್ಯೋತಿ ಯಾತ್ರೆಯು ಶನಿವಾರ ಗದಗ ನಗರ ತಲುಪಿತು. ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ವಿಜಯ ಜ್ಯೋತಿಗೆ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಸ್ವಾಗತಿಸಿ, ಪೂಜೆ ಸಲ್ಲಿಸಿದರು.
ಕಿತ್ತೂರ ಚೆನ್ನಮ್ಮಾ ವಿಜಯ ಜ್ಯೋತಿಗೆ ಸಚಿವರು ಸ್ವಾಗತಿಸಿ, ರಥದಲ್ಲಿದ್ದ ರಾಣಿ ಚೆನ್ನಮ್ಮ ಪುತ್ಥಳಿಗೆ ಪುಷ್ಪಹಾರ ಅರ್ಪಿಸಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ನಗರದ ಪ್ರವಾಸಿ ಮಂದಿರದಿಂದ ವೀರಜ್ಯೋತಿ ಮೆರವಣಿಗೆಯು ಆರಂಭವಾಗಿ ಮುಳಗುಂದ ನಾಕಾ, ಎಸಿ ಕಚೇರಿ ಮೂಲಕ ಕಲಾ ತಂಡಗಳೊಂದಿಗೆ ಸಾಗಿ, ಕಿತ್ತೂರ ಚನ್ನಮ್ಮ ವೃತ್ತ ತಲುಪಿತು.
ಬೆಳಗಾವಿ ಜಿಲ್ಲೆ ಕಿತ್ತೂರಿನಲ್ಲಿ ಅ.23ರಿಂದ 25ರವರೆಗೆ ನಡೆಯಲಿರುವ ಕಿತ್ತೂರು ಉತ್ಸವ ಪ್ರಯುಕ್ತ ರಾಜ್ಯದಾದ್ಯಂತ ಸಂಚರಿಸುವ ಈ ವಿಜಯ ಜ್ಯೋತಿ ಯಾತ್ರೆ ಹಾವೇರಿ ಜಿಲ್ಲೆಯಿಂದ ಗದಗ ಜಿಲ್ಲೆಗೆ ತಲುಪಿದ್ದು, ಲಕ್ಕುಂಡಿ, ಬನ್ನಿಕೊಪ್ಪ ಮಾರ್ಗವಾಗಿ ಜಿಲ್ಲೆಯಿಂದ ಕೊಪ್ಪಳ ಜಿಲ್ಲೆಗೆ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ವಿ.ಪ ಸದಸ್ಯ ಎಸ್.ವಿ. ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್ ಸಾಬ್ ಬಬರ್ಜಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ತಾಲೂಕಾಧ್ಯಕ್ಷ ಅಶೋಕ ಮಂದಾಲಿ, ಸಿದ್ದಪ್ಪ ಪಲ್ಲೇದ, ಎಮ್.ಎಸ್. ಕರಿಗೌಡರ್, ಶರಣು ಪಾಟೀಲ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಕನ್ನಡ-ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ, ವಾರ್ತಾಧಿಕಾರಿ ವಸಂತ ಮಡ್ಲೂರ, ತಹಸೀಲ್ದಾರ ಶ್ರೀನಿವಾಸಮೂರ್ತಿ ಮತ್ತಿತರರು ಹಾಜರಿದ್ದರು.