ವಿಜಯಸಾಕ್ಷಿ ಸುದ್ದಿ, ಗದಗ : ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ, ಪುರಾಣ ಪ್ರಾರಂಭೋತ್ಸವದ ಸಂದರ್ಭದ ಘಟಸ್ಥಾಪನೆಯು ಧಾರ್ಮಿಕವಾಗಿ ಅಷ್ಟೇ ಅಲ್ಲ, ಸೃಷ್ಟಿಯಲ್ಲಿ ಕೃಷಿಗೂ ಸಹ ದಿಕ್ಸೂಚಿಯಾಗಿದೆ ಎಂದು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಕೆ.ಎಂ. ಮೈತ್ರಿ ಅಭಿಪ್ರಾಯಪಟ್ಟರು.
ಅವರು ಗದುಗಿನ ಅಡವೀಂದ್ರಸ್ವಾಮಿ ಮಠದಲ್ಲಿ ದಸರಾ ಮಹೋತ್ಸವದ ಪುರಾಣ ಪ್ರವಚನ, ಅನ್ನಪೂರ್ಣೆಶ್ವರಿ ದೇವಿ ಜಾತ್ರಾ ಮಹೋತ್ಸವ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದರು.
ಘಟಸ್ಥಾಪನೆಗೆ ಹಾಕಿದ ನವಧಾನ್ಯಗಳಲ್ಲಿ ಯಾವ ಬಗೆಯ ಧಾನ್ಯ ಹೆಚ್ಚು ಫಲವತ್ತಾಗಿ ವಿಸ್ತರಿಸಿಕೊಂಡಿದೆಯೋ ಆ ವರ್ಷ ಆ ಧಾನ್ಯದ ಬೆಳೆ ಉತ್ತಮ ಫಸಲು ನೀಡಬಲ್ಲದು ಎಂದು ನಂಬಿರುವ ರೈತರು, ಈ ಸಂಕೇತವನ್ನು ಬಳಸಿಕೊಂಡು ಕೃಷಿ ಮಾಡುವರು ಎಂದು ನೈಸರ್ಗಿಕ, ವೈಜ್ಞಾನಿಕ ಕಾರಣ ನೀಡಿದರು.
ಹಿಂದಿನ ಕಾಲದಲ್ಲಿ ಋಷಿಗಳು, ಪೂರ್ವಜರು ಕಂಡುಕೊಂಡ ಸಿದ್ಧಿ ಸಾಧನಗಳ ನಿಯಮ- ಪದ್ಧತಿಗಳನ್ನು ಅಲ್ಲಗಳೆಯುವಂತಿಲ್ಲ. ನಂಬಿಕೆ ಶೃದ್ಧೆಯಿಂದ ಮಾಡುವ ಕಾಯಕವು ನಿಶ್ಚಿತವಾಗಿ ಫಲ ನೀಡುವದು. ಅಂತಹ ಫಲವನ್ನು ಪಡೆಯುವಲ್ಲಿ ಭಕ್ತರೆಲ್ಲರೂ ಧರ್ಮ, ದೇವರಲ್ಲಿ ನಂಬಿಕೆ ಶೃದ್ಧೆ ಇಟ್ಟು ಮುನ್ನಡೆದರೆ ಒಳಿತಾಗುವದು ಎಂದರು.
ಅಡವೀಂದ್ರ ಸ್ವಾಮಿ ಮಠದ ಧಾರ್ಮಿಕ ಕಾರ್ಯಕ್ರಮಗಳು, ಶಿವಾನುಭವ, ಪುರಾಣ ಪ್ರವಚನ, ಅನ್ನಪೂರ್ಣೆಶ್ವರಿ ಜಾತ್ರಾ ಮಹೋತ್ಸವವು ಜನಸಮುದಾಯದಲ್ಲಿ ಜಾಗ್ರತಿ ಮೂಡಿಸಿಕೊಂಡು ಬಂದಿವೆ ಎಂದರು.
ಸಮ್ಮುಖ ವಹಿಸಿದ್ದ ಶ್ರೀಮಠದ ಧರ್ಮದರ್ಶಿ ಮಹೇಶ್ಚರ ಸ್ವಾಮೀಜಿ ಹೊಸಳ್ಳಿಮಠ ಅವರು ಸಂದರ್ಭೋಚಿತವಾಗಿ ಮಾತನಾಡಿದರು. ಉಸಿರು ಫೌಂಡೇಶನ್ ಅಧ್ಯಕ್ಷ ಶರಣ ಪಾಟೀಲ, ರೇಣುಕಾ ಪಾಟೀಲ ಅತಿಥಿಯಾಗಿ ಆಗಮಿಸಿದ್ದರು.
ಜ. ಪಂಚಾಚಾರ್ಯ ವೇದ ಆಗಮ ಸಂಸ್ಕೃತ ಪಾಠ ಶಾಲೆಯ ವಟುಗಳಿಂದ ವೇದಘೋಷ ಜರುಗಿತು. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಅವರು ಪುರಾಣ ಪ್ರವಚನ ಜರುಗಿತು. ಚನ್ನಬಸಯ್ಯ ಶಾಸ್ತ್ರೀ ಹೇಮಗಿರಿಮಠ ಪುರಾಣ ಪಠಣ ಮಾಡಿದರು. ಸುಕ್ರುಸಾಬ ಮುಲ್ಲಾ, ಜಗನ್ನಾಥ ಕಲಬುರ್ಗಿ, ಗುರುನಾಥ ಸುತಾರ, ಎಸ್.ಬಿ.ಭಜಂತ್ರಿ ಅವರಿಂದ ಸಂಗೀತ ಜರುಗಿತು.
ಶರಣಯ್ಯಸ್ವಾಮಿ ಶಿವಪ್ಪಯ್ಯನಮಠ ಸ್ವಾಗತಿಸಿದರು. ಪ್ರಸಾದ ಸೇವೆಯನ್ನು ಎ.ಎಂ. ವಿರಕ್ತಮಠ, ರಾಕೇಶ ದಾಸರಿ, ಎಸ್.ಎಸ್. ಸಜ್ಜನರ, ಶೋಭಾ ದಶವಂತ, ರೇಖಾ ಜಿರಾಳ, ಪಿ.ಟಿ. ನಾರಾಯಣಪೂರ, ಸಿದ್ಧಲಿಂಗಪ್ಪ ಕೋಟಿ, ಅತಿಶ್ ಖಂಡಪ್ಪಗೌಡ್ರ ವಹಿಸಿಸಿದ್ದರು. ಯು.ಆರ್. ಭೂಸನೂರಮಠ ನಿರೂಪಿಸಿದರು. ಆರ್.ಎಫ್. ಅಗಸಿಮನಿ ವಂದಿಸಿದರು. ಕಾರ್ಯಕ್ರಮದಲ್ಲಿ ಜಾತ್ರಾ ಮಹೋತ್ಸವದ ಪದಾಧಿಕಾರಿಗಳು, ಸದಸ್ಯರು, ಭಕ್ತಾಧಿಗಳು ಪಾಲ್ಗೊಂಡಿದ್ದರು.
9 ದಿನಗಳ ನವರಾತ್ರಿ, ದಸರಾ ಹಬ್ಬವು ಘಟಸ್ಥಾಪನೆಯಿಂದ ಪ್ರಾರಂಭವಾಗುತ್ತದೆ. ಮಣ್ಣಿನ ಮಡಿಕೆಯಲ್ಲಿ ಹುತ್ತದ ಮಣ್ಣಿನಲ್ಲಿ ನವಧಾನ್ಯಗಳನ್ನು ಹಾಕಿ ನೀರುಣಿಸಿ 9ನೇ ಬನ್ನಿ ಹಬ್ಬದ ದಿನ ಯಾವ ಕಾಳು ಉತ್ತಮ ಫಲ ನೀಡುತ್ತದೆ ಎಂಬುದನ್ನು ಗಮನಿಸಿ ಪ್ರಸಕ್ತ ವರ್ಷದಲ್ಲಿ ಅಂತಹ ಬೆಳೆ ಬಿತ್ತನೆ ಮಾಡಿದರೆ ಉತ್ತಮ ಫಸಲು ಬರುತ್ತದೆ ಎಂಬುದು ರೈತಾಪಿ ಜನರಲ್ಲಿರುವ ಅಚಲವಾದ ವಿಶ್ವಾಸ, ಅದು ಇಂದಿಗೂ ಮುಂದುವರೆದಿದೆ ಎಂದು ಡಾ. ಕೆ.ಎಂ. ಮೈತ್ರಿ ಹೇಳಿದರು.