HomeCrime Newsಚಿರತೆ ದಾಳಿಯಿಂದ ಮೃತಪಟ್ಟ ಯುವಕನ ಸಂಬಂಧಿಕರ ಅಹೋರಾತ್ರಿ ಪ್ರತಿಭಟನೆ: ಜನರ ಆಗ್ರಹಕ್ಕೆ ಮಣಿದು ಸಚಿವ...

ಚಿರತೆ ದಾಳಿಯಿಂದ ಮೃತಪಟ್ಟ ಯುವಕನ ಸಂಬಂಧಿಕರ ಅಹೋರಾತ್ರಿ ಪ್ರತಿಭಟನೆ: ಜನರ ಆಗ್ರಹಕ್ಕೆ ಮಣಿದು ಸಚಿವ ಆನಂದ್ ಸಿಂಗ್ ಭೇಟಿ

Spread the love

ಪ್ರಮುಖಾಂಶಗಳು

-ಶಾಸಕ ಪರಣ್ಣ ಮುನವಳ್ಳಿಗೆ ತಟ್ಟಿದ ಪ್ರತಿಭಟನೆ ಬಿಸಿ

-10 ಲಕ್ಷ ರೂಪಾಯಿ ಪರಿಹಾರ ಘೋಷಣೆ

-ಸುಮಾರು 8 ಗಂಟೆಗಳ ಕಾಲದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತಮೃತ ಯುವಕನ ಕುಟುಂಬಸ್ಥರಿಗೆ ಸಚಿವರ ಸಾಂತ್ವನ

ವಿಜಯಸಾಕ್ಷಿ ಸುದ್ದಿ, ಗಂಗಾವತಿ:
ಕುರಿ ಮೇಯಿಸಲು ತೆರಳಿದ್ದ ಕುರಿಗಾಹಿ ಮೇಲೆ ದಾಳಿ ನಡೆಸಿ ಕೊಂದಿದ್ದ ಚಿರತೆ ಸೆರೆಗೆ ಆಗ್ರಹಿಸಿ ಶುಕ್ರವಾರ ರಾತ್ರಿಯಿಂದಲೂ ಕರಿಯಮ್ಮನಗಡ್ಡಿಯಲ್ಲಿ ತೀವ್ರ ಪ್ರತಿಭಟನೆ ನಡೆಯಿತು. ಜನರ ಆಕ್ರೋಶದಿಂದ ಬೆಚ್ಚಿ ಬಿದ್ದ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಕೈಗೊಂಡಿತು. ಸುಮಾರು 8 ಗಂಟೆಗಳ ಕಾಲ ನಡೆದ ಪ್ರತಿಭಟನೆಯಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ಜಿಲ್ಲೆಯಲ್ಲಿ ಚಿರತೆ ದಾಳಿ ತಲ್ಲಣ ಮೂಡಿಸಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಇಬ್ಬರು ಜೀವ ತೊರೆದಿದ್ದಾರೆ. ಇಷ್ಟೆಲ್ಲ ಅವಘಡ ಸಂಭವಿಸಿದರೂ ಕೂಗಳತೆ ದೂರದಲ್ಲಿರುವ ಅರಣ್ಯ ಸಚಿವ ಆನಂದ್ ಸಿಂಗ್ ಭೇಟಿ ನೀಡಿರಲಿಲ್ಲ. ಹಾಗಾಗಿ ಸಚಿವರು ಸ್ಥಳಕ್ಕೆ ಬರಲೇಬೇಕೆಂದು ಬಿಗಿಪಟ್ಟು ಹಿಡಿದು ಸುತ್ತಮುತ್ತಲಿನ ಗ್ರಾಮಸ್ಥರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಸಚಿವರು ಬೆಳಗ್ಗೆ ಬರುವುದಾಗಿ ಭರವಸೆ ನೀಡಿದರೂ ಮಧ್ಯಾಹ್ನವಾದರೂ ಬರಲಿಲ್ಲ. ‌ಸಚಿವರು ಸ್ಥಳಕ್ಕೆ ಬರುವವರೆಗೆ ಶವಸಂಸ್ಕಾರ ಮಾಡದಿರಲು ಕುಟುಂಬಸ್ಥರು ನಿರ್ಧರಿಸಿದರು.

ಕೊನೆಗೂ ಕುಟುಂಬಸ್ಥರಿಗೆ ಸಾಂತ್ವನ ಹೇಳಲು ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಆಗಮಿಸಿದ ಅರಣ್ಯ ಸಚಿವ ಆನಂದಸಿಂಗ್ ಅವರಿಗೆ ಕರಿಯಮ್ಮಗಡ್ಡಿ, ವಿರೂಪಾಪೂರಗಡ್ಡಿ, ಸಾಣಾಪೂರ ಸುತ್ತಲಿನ ಗ್ರಾಮಸ್ಥರು ಮಹಿಳೆಯರು ಮುತ್ತಿಗೆ ಹಾಕಿ ಪ್ರತಿಭಟಿಸಿದ ಪ್ರಸಂಗ ಜರುಗಿತು.

ಕಳೆದ ಮೂರ್ನಾಲ್ಕು ತಿಂಗಳಿಂದ ಆನೆಗೊಂದಿ ಭಾಗದಲ್ಲಿ ಚಿರತೆಗಳು ಕರಡಿಗಳ ಹಾವಳಿ ಹೆಚ್ಚಾಗಿದೆ. ಈಗಾಗಲೇ ಚಿರತೆ ದಾಳಿಯಲ್ಲಿ ಇಬ್ಬರು ಯುವಕರು ಮೃತರಾಗಿದ್ದು ಹಲವರಿಗೆ ಗಾಯಗಳಾಗಿವೆ. ಕುರಿ ಆಡು ದನಗಳ ಮೇಲೆ ಚಿರತೆಗಳು ನಿರಂತರ ದಾಳಿ ನಡೆಸುತ್ತಿದ್ದು ಪಕ್ಕದಲ್ಲಿದ್ದರೂ ಅರಣ್ಯ ಸಚಿವರು ಆನೆಗೊಂದಿ ಭಾಗಕ್ಕೆ ಭೇಟಿ ನೀಡದೇ ನಿರ್ಲಕ್ಷ್ಯ ಮಾಡಲಾಗಿದೆ. ಆನೆಗೊಂದಿ ಸುತ್ತಲಿನ ಗುಡ್ಡಪ್ರದೇಶದಲ್ಲಿ ಜನರಿಗೆ ಅರಣ್ಯ ಇಲಾಖೆಯವರು ನಿರಂತರ ಕಿರುಕುಳ ನೀಡುತ್ತಿದ್ದಾರೆ. ಒಂದು ಕಡೆ ಪ್ರಾಣಿಗಳ ಕಾಟ ಇನ್ನೊಂದು ಕಡೆ ಅರಣ್ಯ ಇಲಾಖೆಯವರ ಕಾಟ ನಿರಂತರವಾಗಿದೆ ಎಂದು ಪ್ರತಿಭಟನಾನಿರತರು ಸಚಿವರಿಗೆ ದೂರಿದರು.

ಚಿರತೆ ಕರಡಿಗಳ ಬಗ್ಗೆ ಅರಣ್ಯ ಇಲಾಖೆಯವರಿಗೆ ಮೊಬೈಲ್ ಕರೆ ಮಾಡಿ ಮಾಹಿತಿ ನೀಡಿದರೂ ನಿರ್ಲಕ್ಷ್ಯ ಮಾಡುತ್ತಾರೆ. ಅಕ್ರಮ ಮರಳು ಗಣಿಗಾರಿಕೆ ಮಾಹಿತಿ ನೀಡಿದರೆ ಕ್ಷಣದಲ್ಲಿ ದಾಳಿ ಮಾಡುತ್ತಾರೆ. ಹಣಕ್ಕಾಗಿ ಜನರನ್ನು ಅರಣ್ಯ ಇಲಾಖೆಯವರು ಪೀಡಿಸುತ್ತಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ನಂತರ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಶ್ರೀನಾಥ ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ ಪ್ರತಿಭಟನಾ ನಿರತರನ್ನು ಸಮಾಧಾನ ಮಾಡಿದರು.
ನಂತರ ಸಚಿವ ಆನಂದ್ ಸಿಂಗ್ ಮೃತದೇಹವಿದ್ದ ಸ್ಥಳಕ್ಕೆ ನಡೆದುಕೊಂಡು ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಕುಟುಂಬಸ್ಥರ ಅಹವಾಲನ್ನು ಆಲಿಸಿದರು.

ಈ ಸಂದರ್ಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ಮಾಜಿ ಎಂಎಲ್ಸಿ ಎಚ್.ಆರ್.ಶ್ರೀನಾಥ, ಜಿಲ್ಲಾಧಿಕಾರಿ ಸುರಳ್ಕರ್ ವಿಕಾಸ ಕಿಶೋರ, ಎಸ್ಪಿ ಟಿ.ಶ್ರೀಧರ, ಡಿಎಫ್‍ಐ ಹರ್ಷಾಭಾನು, ಎಸಿ ನಾರಾಯಣರೆಡ್ಡಿ ಕನಕರೆಡ್ಡಿ, ತಹಸೀಲ್ದಾರ್ ಎಂ.ರೇಣುಕಾ, ಡಿಎಸ್‍ಪಿ ರುದ್ರೇಶ ಉಜ್ಜನಕೊಪ್ಪ,ತಾ.ಪಂ.ಸದಸ್ಯ ವೈ.ರಮೇಶ, ಗ್ರಾ.ಪಂ.ಸದಸ್ಯರಾದ ಕೆ.ನಾಗೇಶ, ರಘುವರ್ಮಾ, ಅಶೋಕ ಸೇರಿ ಗ್ರಾಮಸ್ಥರಿದ್ದರು.

ಆನೆಗೊಂದಿ ಭಾಗದಲ್ಲಿ ಚಿರತೆಗಳ ಸಂಖ್ಯೆ ಹೆಚ್ಚಳವಾಗಿದ್ದು ರಾಜ್ಯದ ವಿವಿಧೆಡೆ ಇತ್ತೀಚೆಗೆ ಜನ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ ಆನೆಗೊಂದಿ ಸುತ್ತಲಿನ ಪ್ರದೇಶದಲ್ಲಿ ಇಬ್ಬರು ಯುವಕರು ಚಿರತೆ ದಾಳಿಯಲ್ಲಿ ಮೃತರಾಗಿದ್ದಾರೆ. ಇವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 7.5 ಲಕ್ಷ ಹಾಗೂ ತಾವು ವೈಯಕ್ತಿಕವಾಗಿ 2.5 ಲಕ್ಷ ರೂ.ಒಟ್ಟು 10 ಲಕ್ಷ ರೂ.ಗಳನ್ನು ವಿತರಿಸಲಾಗುತ್ತದೆ ಎಂದು ಸಚಿವ ಆನಂದ್ ಸಿಂಗ್ ಘೋಷಿಸಿದರು.

ಈಗಾಗಲೇ ಚಿರತೆಯನ್ನು ಶೂಟೌಟ್ ಮಾಡಲು ಸರಕಾರ ಕಾನೂನು ತಜ್ಞರು ವನ್ಯಜೀವಿ ಸಂರಕ್ಷಣಾ ಕಾರ್ಯಕರ್ತರ ಜತೆ ಚರ್ಚೆ ನಡೆಸಿದ್ದು ಸೋಮವಾರ ಸಂಜೆಯೊಳಗೆ ಶೂಟೌಟ್ ಮಾಡಲು ಆದೇಶ ನೀಡುವ ಸಂದರ್ಭವಿದ್ದು ಜನರ ಜೀವ ಸಂರಕ್ಷಣೆ ಮಾಡಲು ಅಗತ್ಯ ಕ್ರಮ ಜರುಗಿಸಲಾಗುತ್ತದೆ. ಈಗಾಗಲೇ ಶಾಸಕ ಪರಣ್ಣ ಮುನವಳ್ಳಿ ಜತೆ ಚರ್ಚೆ ಮಾಡಿದ್ದು ಮೃತ ರಾಘವೇಂದ್ರ ಕುಟುಂಬದವರಿಗೆ ಸ್ಥಳೀಯವಾಗಿ ನೌಕರಿ ಕೊಡಿಸುವ ಕುರಿತು ಚಿಂತನೆ ಮಾಡಲಾಗಿದೆ ಎಂದು ಸಚಿವ ಆನಂದ್ ಸಿಂಗ್ ತಿಳಿಸಿದರು.


ಚಿರತೆಧಾಮ ಮಾಡುವ ಉದ್ದೇಶ ಇಲ್ಲ

ಆನೆಗೊಂದಿ ಭಾಗದಲ್ಲಿ ಚಿರತೆ ಧಾಮ ಮಾಡುವ ಯಾವುದೇ ಉದ್ದೇಶ ಸರಕಾರದ ಮುಂದೆ ಇಲ್ಲ. ಏಳುಗುಡ್ಡ ಪ್ರದೇಶದಲ್ಲಿ ಅಕ್ರಮ ಕಲ್ಲು ಗಣಿಕಾರಿಕೆ ಸ್ಪೋಟದಿಂದ ಚಿರತೆಗಳು, ಕರಡಿಗಳು ಅಂಜನಾದ್ರಿ ಬೆಟ್ಟದ ಸುತ್ತ ವಲಸೆ ಬಂದಿರಬಹುದು. ಆದ್ದರಿಂದ ಕೂಡಲೇ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.


ಆನಂದಸಿಂಗ್ ಅರಣ್ಯ ಸಚಿವರು

Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!