ವಿಜಯಸಾಕ್ಷಿ ಸುದ್ದಿ, ಗದಗ : ಕಪ್ಪತ್ತಗಿರಿ ಫೌಂಡೇಷನ್ ವತಿಯಿಂದ ವಿಭಿನ್ನವಾದ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಜಿಲ್ಲೆಯಲ್ಲಿ ಹಲವು ವೇದಿಕೆಗಳಿಗೆ ಮಾದರಿಯಾಗಿದ್ದಾರೆ. ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ಅವರಲ್ಲಿರುವ ಸಮಾಜಸೇವಾ ಮನೋಭಾವನೆಯನ್ನು ನಾವೆಲ್ಲರೂ ಮೆಚ್ಚಿಕೊಳ್ಳಲೇಬೇಕು. ಕುಟುಂಬದ ಜವಾಬ್ದಾರಿಯ ನಡುವೆಯೂ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ರೀತಿ ಶ್ಲಾಘನೀಯ ಎಂದು ರೋಟರಿ ಕ್ಲಬ್ ಗದಗ ಜಿಲ್ಲೆಯ ಗವರ್ನರ್ ವಿ.ಕೆ. ಗುರುಮಠ ಮೆಚ್ಚುಗೆ ವ್ಯಕ್ತಪಡಿಸಿದರು.
ಕಪ್ಪತ್ತಗಿರಿ ಫೌಂಡೇಷನ್, ಸಾಹಿತ್ಯ ಸಾಂಸ್ಕೃತಿಕ ಕಲಾ ವೇದಿಕೆಯಿಂದ ದಸರಾ ಹಬ್ಬದ ಪ್ರಯುಕ್ತ ಹಮ್ಮಿಕೊಂಡಿದ್ದ ಕವಿಗೋಷ್ಠಿ, ವಿಶೇಷ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಓಂಕಾರೇಶ್ವರ ಹಿರೇಮಠದ ಷ.ಬ್ರ.ಶ್ರೀ.ಫಕ್ಕಿರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಕಪ್ಪತ್ತಗಿರಿ ಫೌಂಡೇಶನ್ ಸಮಾಜ ಸೇವೆಗಾಗಿ ತನ್ನ ಕೆಲಸವನ್ನು ಮುಂದುವರೆಸಿದೆ. ತಾವೆಲ್ಲರೂ ಅವರೊಂದಿಗೆ ಕೈ ಜೋಡಿಸಿ. ನಮ್ಮ ನಾಡು, ನುಡಿ, ಕನ್ನಡದ ಸೇವೆಯನ್ನು ಮಾಡಿ ನಮ್ಮ ಕರ್ನಾಟಕದಲ್ಲಿ ಕಪ್ಪತ್ತಗಿರಿ ಫೌಂಡೇಶನ್ ತನ್ನ ಛಾಪನ್ನು ಮೂಡಿಸಿದೆ. ಸಂಘಟನೆಯ ವ್ಯಾಪ್ತಿ ವಿಸ್ತಾರವಾಗಿ ಹಬ್ಬಲಿ ಎಂದು ಆಶೀರ್ವದಿಸಿದರು.
ವಕೀಲರಾದ ಎಮ್.ಎಮ್. ಹಿರೇಮಠ, ಈರಪ್ಪ ಮಾದರ, ಕೆ.ಎಸ್. ಬಾರಕೇರ, ರಾಜೇಶ್ವರಿ ಬಡ್ನಿ, ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಹಾದಿಮನಿ, ಸನ್ಮಾನ ಸ್ವೀಕರಿಸಿದ ಡಾ. ಬಿ.ಎಸ್. ರಾಠೋಡ, ಫೌಂಡೇಶನ್ನ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಇಟಗಿಮಠ ಮಾತನಾಡಿದರು. ಮರುಳು ಸಿದ್ದಪ್ಪ ದೊಡ್ಡಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗದಗ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಾದ ಭವಾನಿ ಪ್ರಹ್ಲಾದ್ ಹೊಸಳ್ಳಿ, ಅಭಿಷೇಕ ಮಲ್ಲಪ್ಪ ತಳವಾರರನ್ನು ಸನ್ಮಾನಿಸಲಾಯಿತು.
ಸೌಮ್ಯ ಹಿರೇಮಠ ಪ್ರಾರ್ಥಿಸಿದರು. ತೋಟಯ್ಯ ಗುಡ್ಡಿಮಠ ಸ್ವಾಗತಿಸಿದರು. ಮಹೇಶ ಕುಂದ್ರಾಳ ಹಿರೇಮಠ ಸಂಗೀತದೊಂದಿಗೆ ಸರ್ವರೂ ಭಾಗಿಯಾಗಿ ನಾಡಗೀತೆಯನ್ನು ಹಾಡಿದರು. ಎಸ್.ಕೆ. ಆಡಿನ ಕಾರ್ಯಕ್ರಮ ನಿರೂಪಿಸಿದರು. ಮಹಾಂತೇಶ ಬೇರಗಣ್ಣವರ ವಂದಿಸಿದರು.
ಮುಖ್ಯ ಅತಿಥಿಗಳಾದ ಶರದರಾವ್ ಹುಯಿಲಗೋಳ ಮಾತನಾಡಿ, ಚಂದ್ರಕಲಾ ಇಟಗಿಮಠ ಅವರು ಸಮಾಜಕ್ಕೆ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ವಿಶೇಷ ಕೊಡುಗೆ ಕೊಡಬೇಕೆನ್ನುವ ಆಶಯಯೊಂದಿಗೆ ಕಪ್ಪತ್ತಗಿರಿ ಫೌಂಡೇಷನ್ ಹುಟ್ಟುಹಾಕಿ, ಹತ್ತುಹಲವಾರು ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಸಾಧಕರನ್ನು ಗುರುತಿಸಿ-ಗೌರವಿಸುವ ಕಾಯಕ ಮಾಡುತ್ತಿದ್ದಾರೆ. ಇಂತಹ ಒಳ್ಳೆಯ ಕಾರ್ಯಕ್ಕೆ ನಾವೆಲ್ಲಾ ಸದಾ ಬೆಂಬಲಿಸುತ್ತೇವೆ ಎಂದರು.