ವಿಜಯಸಾಕ್ಷಿ ಸುದ್ದಿ, ಗದಗ : ಸರ್ವೋಚ್ಚ ನ್ಯಾಯಾಲಯದ ಏಳು ನ್ಯಾಯಮೂರ್ತಿಗಳ ಪೂರ್ಣ ಪೀಠವು ಎಸ್.ಸಿ-ಎಸ್.ಟಿ. ಮೀಸಲಾತಿಯಲ್ಲಿ ಒಳಮೀಸಲಾತಿ ನೀಡುವುದು ರಾಜ್ಯ ಸರಕಾರಕ್ಕೆ ಹಕ್ಕಿದೆ ಎಂದು ತೀರ್ಪು ನೀಡಿದೆ. ಈ ತೀರ್ಪಿನಂತೆ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಪರಿಶಿಷ್ಟ ಜಾತಿ ಒಳಮೀಸಲಾತಿ ಹೋರಾಟ ಸಮಿತಿ ಗದಗ ವತಿಯಿಂದ ನಗರದ ಕಿತ್ತೂರ ಚನ್ನಮ್ಮ ವೃತ್ತದಿಂದ ಗದಗ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆಯ ಮೂಲಕ ತೆರಳಿ, ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಒಳ ಮೀಸಲಾತಿ ಹೋರಾಟ ಸಮಿತಿಯ ಸದಸ್ಯರಾದ ಮೋಹನ ಆಲಮೇಲಕರ ಮಾತನಾಡಿ, ಕರ್ನಾಟಕದಲ್ಲಿ ಮೂರು ದಶಕಗಳ ನಿರಂತ ಹೋರಾಟದ ಬಗ್ಗೆ ಪ್ರಸ್ತುತ ಸಕಾರವು ಕೇವಲ ಸಹಾನುಭೂತಿ ತೋರಿಸುತ್ತದೆಯಾದರೂ, ಇದು ಕ್ರಿಯಾತ್ಮಕ ರೂಪ ಪಡೆಯದಿದ್ದರೆ ಅಪ್ರಯೋಜಕವಾಗುತ್ತದೆ.
ಪರಿಶಿಷ್ಟ ಜಾತಿಗಳಲ್ಲಿ ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಅತಿ ಹಿಂದುಳಿದಿರುವ ಜಾತಿಗಳ ಅಭಿವೃದ್ಧಿಯ ಕಲ್ಯಾಣದ ಸದುದ್ದೇಶದಿಂದ ಆಯಾ ಜಾತಿಗಳಿಗೆ ಸೇರಿದವರಿಗೆ ಮೀಸಲಾತಿ ಸೌಲಭ್ಯ ತಲುಪಲು ಒಳಮೀಸಲಾತಿ ನೀಡುವ ಸಾಂವಿಧಾನಿಕ ಅಧಿಕಾರವು ಆಯಾ ರಾಜ್ಯಗಳಿಗಿದೆ ಎಂದು ಸರ್ವೋಚ್ಚ ನ್ಯಾಯಾಲಯದ ಪೀಠವು ಅಭಿಪ್ರಾಯಪಟ್ಟಿದೆ.
ಸಾಂವಿಧಾನಿಕ ಹಕ್ಕು ಸೌಲಭ್ಯಗಳನ್ನು ಮರೆಮಾಚಲು ಒಳಮೀಸಲಾತಿ ಜಾರಿಗೊಳಿಸುವ ಕಾನೂನಾತ್ಮಕ ಸನ್ನಿವೇಶಗಳಿಂದ ತಪ್ಪಿಸಿಕೊಳ್ಳಲು ಸದ್ಯ ಜಾತಿ ಜನಗಣತಿ ವರದಿ ಬಿಡುಗಡೆ ಚರ್ಚೆ ಮುನ್ನೆಲೆಗೆ ತಂದು ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧದ ಗೊಂದಲ ಸೃಷ್ಟಿಸುತ್ತಿರುವದು ಸಂವಿಧಾನಕ್ಕೆ ಅಪಚಾರ. ಈ ಜಾತಿ ಜನಗಣತಿ ವರದಿಗೂ ಎಸ್.ಸಿ ಒಳಮೀಸಲಾತಿ ವರ್ಗಿಕರಣಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದರು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್. ರಾಜ್ಯ ಮುಖಂಡರಾದ ಎಸ್.ಎನ್. ಬಳ್ಳಾರಿ, ಎಚ್.ಡಿ. ಪೂಜಾರ, ಸತೀಶ ಪಾಶಿ, ವಸಂತ ಜೋಗಣ್ಣವರ, ಅಶೋಕ ಕುಡತಿನ್ನಿ, ಚಂದ್ರಶೇಖರ ಹರಿಜನ, ಮೈಲಾರಪ್ಪ ಚಳ್ಳಮರದ, ಮಾರ್ತಂಡಪ್ಪ ಹಾದಿಮನಿ, ಲಕ್ಷö್ಮಣ ತಗಡಿನಮನಿ, ಮರಿಯಪ್ಪ ಸಿದ್ದಣ್ಣನವರ, ನಿಂಗಪ್ಪ ದೊಡ್ಡಮನಿ, ಮಲ್ಲಿಕ್ ಸಂಗಾಪೂರ, ವಿನಾಯಕ ಬಳ್ಳಾರಿ, ಕೃಷ್ಣಪ್ಪ ಪೂಜಾರ, ಬಸವರಾಜ ಮುಳ್ಳಾಳ ಮುಂತಾದವರು ಉಪಸ್ಥಿತರಿದ್ದರು.