ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಹುಲಕೋಟಿಯ ಐ.ಸಿ.ಎ.ಆರ್-ಕೆ.ಎಚ್. ಪಾಟೀಲ ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ವಿಶ್ವವಿದ್ಯಾಲಯ ಧಾರವಾಡ ಸಹಭಾಗಿತ್ವದಲ್ಲಿ, `ಉತ್ತಮ ಜೀವನ ಮತ್ತು ಉತ್ತಮ ಭವಿಷ್ಯಕ್ಕಾಗಿ ಆಹಾರದ ಹಕ್ಕು’ ಎಂಬ ಧ್ಯೇಯೋದ್ದೇಶದೊಂದಿಗೆ ವಿಶ್ವ ಆಹಾರ ದಿನಾಚರಣೆಯನ್ನು ಹುಲಕೋಟಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಪ್ರಾಧ್ಯಾಪಕ ಡಾ. ಆರ್.ವ್ಹಿ. ಹೆಗ್ಡೆ, ಪ್ರಸ್ತುತ ಆಹಾರ ಪದ್ಧತಿಯಲ್ಲಿ ನಾವು ಹಣ್ಣು ಮತ್ತು ತರಕಾರಿಗಳ ಸೇವನೆಗೆ ಹೆಚ್ಚು ಒತ್ತು ನೀಡಬೇಕು. ಆಹಾರವನ್ನು ವ್ಯರ್ಥ ಮಾಡದೇ ಅವಶ್ಯವಿದ್ದಷ್ಟು ಮಾತ್ರ ಸೇವಿಸಬೇಕು ಹಾಗೂ ಸುಸ್ಥಿರ ಆಹಾರ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಡಾ. ಸುಧಾ ವ್ಹಿ.ಮಂಕಣಿ ಮಾತನಾಡಿ, ಸಾಂಪ್ರದಾಯಕ ಆಹಾರ ಪದಾರ್ಥಗಳಾದ ಸಿರಿಧಾನ್ಯಗಳು, ಬೇಳೆಕಾಳುಗಳು ಹಾಗೂ ಹಸಿರು ತರಕಾರಿಗಳನ್ನು ದಿನನಿತ್ಯ ಸೇವಿಸಬೇಕು. ಅಪೌಷ್ಟಿಕ ಆಹಾರವನ್ನು ವರ್ಜಿಸಿ ಸಮತೋಲಿತ ಆಹಾರ ಸೇವನೆಯಿಂದ ಆರೋಗ್ಯ ಹಾಗೂ ಆಯಸ್ಸನ್ನು ವೃದ್ಧಿಸಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಎಸ್.ಬಿ.ಐ-ಎ.ಎಸ್.ಎಫ್-ರ್ಸೆಟಿ ನಿರ್ದೇಶಕರಾದ ಶಿವಕುಮಾರ, ಡಾ. ರಮ್ಯ, ಎನ್.ಎಚ್. ಭಂಡಿ, ಹೇಮಾವತಿ ಹಿರೇಗೌಡರ್, ಡಾ. ವಿನಾಯಕ ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು. ಕೃಷಿ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ಆಹಾರದ ಮಹತ್ವದ ಕುರಿತು ಕಿರುನಾಟಕವನ್ನು ಪ್ರದರ್ಶಿಸಿದರು. ದೀಪಾ ಸ್ವಾಗತಿಸಿದರು, ನಾಗಾಂಜಲಿ ಮತ್ತು ನಂದಿನಿ ನಿರೂಪಿಸಿದರು. ಜ್ಯೋತಿ ವಂದಿಸಿದರು. 75ಕ್ಕೂ ಹೆಚ್ಚು ವಿದ್ಯಾರ್ಥಿನಿಯರು, ಗ್ರಾಮೀಣ ಯುವಕರು ಹಾಗೂ ರೈತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕೃಷಿ ಉಪ ನಿರ್ದೇಶಕರಾದ ಸ್ಪೂರ್ತಿ ಜಿ.ಎಸ್. ಮಾತನಾಡಿ, ಪೌಷ್ಟಿಕ ಆಹಾರ ಸೇವನೆಯು ಉತ್ತಮ ಜೀವನಶೈಲಿ ಹಾಗೂ ಸ್ಪೂರ್ತಿದಾಯಕ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಸಹಕಾರಿಯಾಗುತ್ತದೆ. ನಿಯಮಿತ ವ್ಯಾಯಾಮ ಹಾಗೂ ಸಕಾರಾತ್ಮಕ ಮನೋಭಾವಗಳಿಂದ ಸಕ್ರಿಯ ಜೀವನ ನಡೆಸಬಹುದು ಎಂದು ನುಡಿದರು.



