ಬೆಂಗಳೂರು: ನನಗೆ ಬಿಜೆಪಿ ಪಕ್ಷದಲ್ಲಿ ಯಾರು ಬೆಂಬಲ ಕೊಡುತ್ತಿಲ್ಲ ಎಂದು ಚನ್ನಪಟ್ಟಣ ಟಿಕೆಟ್ ಆಕಾಂಕ್ಷಿ ಸಿಪಿ ಯೋಗೇಶ್ವರ್ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಯವರು ಅವರ ಕುಟುಂಬದವರಿಗೇ ಟಿಕೆಟ್ ಕೊಡಬೇಕು ಎಂದು ಆಸೆಯಿದೆ.
ತಾವು ರಾಜೀನಾಮೆ ಕೊಟ್ಟ ನಂತರದಿಂದಲೂ ನಿಖಿಲ್‌ಗೆ ನಿಲ್ಲಿಸಬೇಕು ಎಂದು ಅವರ ಮನಸಿನಲ್ಲಿದೆ. ಅದಕ್ಕಾಗಿ ಪ್ರಯತ್ನ ಮಾಡುತ್ತಿದ್ದಾರೆ. ಮನಸಲ್ಲಿ ಆ ಭಾವನೆ ಇರುವಾಗ ಏನು ಬಲವಂತ ಸಾಧ್ಯ? ಎಂದರು.
ಇನ್ನೂ ಜೆಡಿಎಸ್ ಚಿನ್ಹೆಯಲ್ಲಿ ನಿಲ್ಲಿ ಎಂದು ಅವರು ಮುಕ್ತವಾಗಿ ಹೇಳಿಲ್ಲ. ಅವರ ಪಕ್ಷದ ಮುಖಂಡರು ಬಂದಾಗ ಹೇಳಿದ್ದರೂ ಅಷ್ಟೇ. ನಾನು ನನ್ನ ತಾಲೂಕಿನ ಜನರ ಜೊತೆಗೂ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ಬಹಳ ಭಿನ್ನಾಭಿಪ್ರಾಯ ಬಂದಿದೆ. ಇಷ್ಟು ವರ್ಷ ವಿರೋಧ ಮಾಡಿಕೊಂಡು ಬಂದಿದ್ದೀರಿ, ಈಗ ಮೈತ್ರಿ ಆಗಿದೆ. ಈಗ ಅನಾವಶ್ಯಕವಾಗಿ ಜೆಡಿಎಸ್‌ಗೆ ಹೋಗುವುದು ಬೇಡ ಅಂತ ತಾಲೂಕಿನಲ್ಲಿ ಅಭಿಪ್ರಾಯ ಬಂದಿದೆ.
ಮೊದಲೇ ನನಗೆ ಪಕ್ಷಾಂತರಿ ಎಂದು ಕರೆಯುತ್ತಾರೆ. ಹಾಗಾಗಿ ಬಿಜೆಪಿಯಿಂದಲೇ ನಿಲ್ಲಿ ಎಂದು ಹೇಳುತ್ತಿದ್ದಾರೆ. ನಾನು ಬಿಜೆಪಿಯಿಂದಲೇ ನಿಲ್ಲಲು ನಿರ್ಧರಿಸಿದ್ದೇನೆ. ಆದರೆ ನನಗೆ ಯಾರೂ ಬೆಂಬಲ ಕೊಡುತ್ತಿಲ್ಲ ಎಂದು ಹೇಳಿದರು.


