ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಕೋವಿಡ್-19 ಮಾರಕ ವೈರಸ್ ಇನ್ನೂ ಅಂತ್ಯ ಕಂಡಿಲ್ಲ. ಹಾಗಾಗಿ ಈ ನಾಡಿನ ಭಕ್ತಿ ಸಾಗರ ಒಂದೆಡೆ ಸೇರುವುದು ಸರಿಯಲ್ಲ. ಕೊಪ್ಪಳದ ಗವಿಸಿದ್ಧೇಶ್ವರ ಜಾತ್ರೆ ನಡೆಯುವುದು ಬೇಡ. ಸಂಪ್ರದಾಯಕ್ಕೆ ಚ್ಯುತಿ ಬಾರದಂತೆ ಸಂಕ್ಷಿಪ್ತವಾಗಿ ನಡೆಯಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಕುಷ್ಟಗಿ ಶಾಸಕ ಅಮರೇಗೌಡ ಭಯ್ಯಾಪುರ ಹೇಳಿದರು.
ಕೊಪ್ಪಳದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಗವಿಮಠದದ ಜಾತ್ರೆ ಅತೀ ದೊಡ್ಡ ಜಾತ್ರೆ. ಲಕ್ಷಾಂತರ ಜನ ಸೇರುತ್ತಾರೆ. ಆದರೆ ಈಗ ಸಂದರ್ಭ ಸರಿಯಿಲ್ಲ. ಜಿಲ್ಲಾಧಿಕಾರಿಗಳ ನಿಲುವನ್ನು ನಾನು ಬೆಂಬಲಿಸುತ್ತೇನೆ. ಜಾತ್ರೆ ವಿಜೃಂಭಣೆಯಿಂದ ಮಾಡುವ ಬದಲು ಸಾಂಕೇತಿಕವಾಗಿ ಮಾಡುವಂತಾಗಲಿ ಈ ಕುರಿತು ನಾನು ಶ್ರೀಗಳಲ್ಲಿ ಮನವಿ ಮಾಡುತ್ತೇನೆ ಎಂದು ಹೇಳಿದರು.
ಹಣವಿದ್ದವನು ಬಿಜೆಪಿಯಲ್ಲಿ ಸೋತರೂ ಮಂತ್ರಿಯಾಗ್ತಾನೆ. ಎಂಟಿಬಿ ಸೋತಿದ್ದರೂ ಅವರನ್ನು ಮಂತ್ರಿಯನ್ನಾಗಿಸಲು ಬಿಜೆಪಿ ಮುಖಂಡರು ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಹಣವಿದ್ದವರು ಬಿಜೆಪಿಯಲ್ಲಿ ಆನೆ ಇದ್ದಂತೆ. ಆನೆಗೆ ಸತ್ತರೂ ಬೆಲೆಯೇ ಎಂದು ಅವರು ವ್ಯಂಗ್ಯವಾಡಿದರು.
ಗವಿಮಠ ಜಾತ್ರೆ ಬೇಡ: ಬಯ್ಯಾಪುರ
Advertisement