ಗದಗ ಐಎಂಎ ರಾಜ್ಯದ ಗಮನ ಸೆಳೆದಿದೆ : ಡಾ.ವೈ.ಸಿ.ಯೋಗಾನಂದ ರೆಡ್ಡಿ

0
Inauguration ceremony of new office bearers of Gadag Indian Medical Association
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ವೈದ್ಯಕೀಯ ಸಂಸ್ಥೆಯ ರಾಜ್ಯ ಘಟಕಕ್ಕೆ ಹಾಗೂ ವೈದ್ಯಕೀಯ ಕ್ಷೇತ್ರದ ಉನ್ನತಿಗೆ ಗದಗ ಜಿಲ್ಲೆಯ ಕೊಡುಗೆ ಅನುಪಮವಾಗಿದೆ ಎಂದು ಕರ್ನಾಟಕ ಮೆಡಿಕಲ್ ಕೌನ್ಸಿಲ್‌ನ ಗೌರವ ಅಧ್ಯಕ್ಷ ಡಾ. ವೈ.ಸಿ.ಯೋಗಾನಂದ ರೆಡ್ಡಿ ಅಭಿಪ್ರಾಯಪಟ್ಟರು.
ಅವರು ಶುಕ್ರವಾರ ಗದುಗಿನ ಪೊಲೀಸ್ ಭವನದಲ್ಲಿ ಜರುಗಿದ ಗದಗ ಭಾರತೀಯ ವೈದ್ಯಕೀಯ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಗಳಾಗಿ ಅಧಿಕಾರ ಹಸ್ತಾಂತರಿಸಿ ಮಾತನಾಡಿದರು.
ಅಖಿಲ ಭಾರತ ಮಟ್ಟದಲ್ಲಿ ಸಹಕಾರಿ ಆಂದೋಲನವನ್ನು ಹುಟ್ಟು ಹಾಕಿದ್ದು ಗದುಗಿನ ಪುಣ್ಯಭೂಮಿ. ಮುದ್ರಣ ಕಾಶೀ ಎಂದೇ ಹೆಸರಾದ ಗದುಗಿನಲ್ಲಿ ವೈದ್ಯರ ಸಂಘ 1976ರಲ್ಲಿ ಆರಂಭಗೊಂಡಿದ್ದು, ಹಲವಾರು ರಚನಾತ್ಮ ಕಾರ್ಯಗಳಿಂದಾಗಿ ರಾಜ್ಯದ ಗಮನ ಸೆಳೆದಿದೆ. ಗದಗ ಐಎಂಎನಲ್ಲಿ ಚರ್ಚೆಯ ರೂಪುರೇಷೆಗಳು, ಗಂಭೀರ ವಿಷಯಗಳು ಫಲಪ್ರದಗೊಂಡಿವೆ. ಹೋರಾಟದ ಮಾರ್ಗ-ಬೇಡಿಕೆಗಳಿಗೆ, ವೈದ್ಯಕೀಯ ಕಾನೂನು ತಿದ್ದುಪಡಿ ತರಲು ಚಿಂತನೆಗಳಿಗೆ ವೇದಿಕೆಯಾದದ್ದು ಗದುಗಿನ ಐಎಂಎ ಶಾಖೆಯ ವೇದಿಕೆ ಎಂಬುದು ಗಮನಾರ್ಹ. ಗದುಗಿನ ಅನುಭವಿ ಘಟಾನುಘಟಿ ವೈದ್ಯರುಗಳ ಮೂಲಕ ರಾಜ್ಯ ಐಎಂಎಗೆ ಸಾಕಷ್ಟು ಬಲ ಬಂದಿದೆ ಎಂದರು.
ಹಾಗೆಯೇ ಗದುಗಿನ ಮಹಿಳಾ ವೈದ್ಯರು ರಾಜ್ಯ, ರಾಷ್ಟç ಮಟ್ಟದ ಸಮ್ಮೇಳನ, ಬೃಹತ್ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಂಡಿಸಿದ ಪ್ರಬುದ್ಧ ವಿಷಯಗಳು ಹಿರಿಯ ತಜ್ಞ ವೈದ್ಯರ ಗಮನ ಸೆಳೆದಿವೆ. ರಾಜ್ಯದಲ್ಲಿ ಬೆರಳೆಣಿಕೆಯ ಕ್ರಿಯಾಶೀಲ ಐಎಂಎ ಶಾಖೆಗಳಲ್ಲಿ ಗದಗ ಮುಂಚೂಣಿಯಲ್ಲಿದೆ. ಹಿರಿಯರ ಮಾರ್ಗದರ್ಶನದಲ್ಲಿ ಕಿರಿಯ ವೈದ್ಯರ ತಂಡ ಹಿರಿದಾದ ಸಾಧನೆ ಮಾಡಲಿ. ಯುವ ವೈದ್ಯರು ತಮ್ಮ ವೈದ್ಯಕೀಯ ವೃತ್ತಿಯಲ್ಲಿ ಮನುಷ್ಯತ್ವ, ಮಾನವೀಯತೆ ಹಾಗೂ ವಿನಮ್ರತೆಯಿಂದ ರೋಗಿಗಳ ಸೇವೆ ಮಾಡಲಿ. ಧನಾತ್ಮಕ ಸೇವೆ ಇರಲಿ, ವಿನಃ ಧನ (ಹಣ) ಗಳಿಕೆಯೇ ಮುಖ್ಯವಾಗಬಾರದು. ಉತ್ಕೃಷ್ಠ ಸೇವೆಯಿಂದ ಖ್ಯಾತಿ-ಹಣ ಎರಡೂ ತಾನಾಗಿಯೇ ಬರುವದು ಎಂದರು.
ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಐಎಂಎ ನಿಯೋಜಿತ ಅಧ್ಯಕ್ಷ ಡಾ. ವ್ಹಿ.ವ್ಹಿ. ಚಿನಿವಾಲರ ಮಾತನಾಡಿ, ರಾಜ್ಯ ಐಎಂಎ ಸಂಘಟನೆಯ ಬಲವರ್ಧನೆಗೆ ಗದುಗಿನ ಸಹಕಾರವನ್ನು ಮರೆಯುವಂತಿಲ್ಲ. ಗದಗ ಜಿಲ್ಲೆಯವರಾದ ಡಾ. ಎನ್.ಎಚ್. ಗೋಡಬೋಲೆ, ಡಾ. ಆರ್.ಆರ್. ಜೋಷಿ, ಡಾ. ಬಿ.ಎಂ. ಆಲೂರ, ಡಾ. ಆರ್.ಎಸ್. ಬಳ್ಳಾರಿ, ಡಾ. ಜಿ.ಬಿ. ಬಿಡಿನಹಾಳ, ಡಾ. ಅನ್ನದಾನಿ ಮೇಟಿ, ಡಾ. ಎಚ್.ಬಿ. ಲಕ್ಕೋಳ ಇವರು ರಾಜ್ಯ ಶಾಖೆಯ ಅಧ್ಯಕ್ಷರಾಗಿ ಸಾಕಷ್ಟು ಸುಧಾರಣೆ ತಂದಿದ್ದಾರೆ. ಹಾಗೆಯೇ ಗದಗ ಶಾಖೆಗೆ ಉತ್ತಮ ಮಾರ್ಗದರ್ಶನ ನೀಡಿ ಉತ್ಕೃಷ್ಠತೆಯನ್ನು ಹೆಚ್ಚಿಸಿದ ಹೆಗ್ಗಳಿಕೆ ಗದುಗಿಗೆ ಸಲ್ಲುವದು ಎಂದರು.
ನೂತನ ಅಧ್ಯಕ್ಷ ಡಾ. ಪವನ ಪಾಟೀಲ ತಮ್ಮ ಅಧಿಕಾರದ ಅವಧಿಯಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯ ಯೋಜನೆಗಳನ್ನು ವಿವರಿಸಿ, ಸರ್ವರ ಸಹಕಾರ ಕೋರಿದರು. ವೇದಿಕೆಯ ಮೇಲೆ ಗದಗ ಐಎಂಎ ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುಪಮಾ ಪವನ ಪಾಟೀಲ, ಕಾರ್ಯದರ್ಶಿ ಡಾ. ಶಿಲ್ಪಾ ಪ್ರಕಾಶ ಕುಷ್ಟಗಿ (ಧಡೂತಿ), ನಿಕಟಪೂರ್ವ ಅಧ್ಯಕ್ಷೆ ಡಾ. ಸೋನಿಯಾ ಕರೂರ, ನಿಕಟಪೂರ್ವ ಕಾರ್ಯದರ್ಶಿ ಡಾ. ರಾಧಿಕಾ ಬಳ್ಳಾರಿ ಉಪಸ್ಥಿತರಿದ್ದರು.
ನಿಕಟಪೂರ್ವ ಕಾರ್ಯದರ್ಶಿ ಡಾ.ಚಂದ್ರಶೇಖರ ಬಳ್ಳಾರಿ ಐಎಂಎ ಪ್ರಾರ್ಥನೆ ಮಾಡಿ ವರದಿ ವಾಚಿಸಿದರು. ಖಜಾಂಚಿ ಡಾ. ಭೀಮಸಿಂಗ್ ಸಮೂರೇಕರ ಅವರಿಂದ ಧ್ವಜ ವಂದನೆ ಜರುಗಿತು. ನಿಕಟಪೂರ್ವ ಅಧ್ಯಕ್ಷ ಡಾ. ಜಿ.ಎಸ್. ಪಲ್ಲೇದ ಸ್ವಾಗತಿಸಿದರು. ಡಾ. ಶಶಿಧರ ರೇಶ್ಮೆ, ಡಾ. ಜಿ.ಬಿ. ಬಿಡಿನಹಾಳ ಪರಿಚಯಿಸಿದರು. ಕಾರ್ಯದರ್ಶಿ ಡಾ. ತುಕಾರಾಮ ಸೋರಿ ನಿರೂಪಿಸಿ ವಂದಿಸಿದರು. ಸಮಾರಂಭದಲ್ಲಿ ಐಎಂಎ ಹಿರಿಯ-ಕಿರಿಯ ವೈದ್ಯರುಗಳು ಪಾಲ್ಗೊಂಡಿದ್ದರು.
ಗದಗ ಐಎಂಎ ಕಳೆದ ವರ್ಷದ ತಂಡ ಒಳ್ಳೆಯ ಕೆಲಸ ಮಾಡಿದೆ. ಅದೇ ರೀತಿಯಾಗಿ ಈ ವರ್ಷದ ತಂಡವೂ ಸಹ ಉತ್ತಮ ಕೆಲಸ ಮಾಡಲಿ ಎಂದರಲ್ಲದೆ, ವೈದ್ಯರು ಐಎಂಎ ಸದಸ್ಯರಾಗುವ ಮೂಲಕ ಸಂಘದ ಹಾಗೂ ಹಲವು ಯೋಜನೆಗಳ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಜೊತೆಗೆ ಕುಟುಂಬದ ಭದ್ರತೆಗೆ ಇರುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಡಾ. ವೈ.ಸಿ.ಯೋಗಾನಂದ ರೆಡ್ಡಿ ಕರೆ ನೀಡಿದರು.

Spread the love
Advertisement

LEAVE A REPLY

Please enter your comment!
Please enter your name here