ಗದಗ:- ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಗೆ ರೈತರ ಬೆಳೆಗಳು ಹಾನಿ ಆಗಿದ್ದು, ನೂರಾರು ಎಕರೆಯಲ್ಲಿ ಬೆಳೆದ ಈರುಳ್ಳಿ ಸಂಪೂರ್ಣ ನೀರು ಪಾಲಾಗಿದೆ.
ಗದಗ ಜಿಲ್ಲೆಯ ಅಡರಕಟ್ಟಿ ಗ್ರಾಮದಲ್ಲಿ ಬೆಳೆದ ಬೆಳೆ ನಾಶವಾದ ಹಿನ್ನೆಲೆ, ರೈತರ ಗೋಳಾಟ ಮುಗಿಲು ಮುಟ್ಟಿದೆ. ಗದಗ ಜಿಲ್ಲೆಯಲ್ಲೇ ಅತೀ ಹೆಚ್ಚು ಈರುಳ್ಳಿ ಬೆಳೆಯುವ ಗ್ರಾಮ ಇದಾಗಿದೆ.
ನಿರಂತರವಾಗಿ ಮಳೆ ಸುರಿದ ಕಾರಣದಿಂದಾಗಿ ನೀರು ಜಮೀನಿನಲ್ಲೇ ನಿಂತು ನೂರಾರು ಎಕರೆ ಈರುಳ್ಳಿ ಕೊಳೆತು ಹೋಗಿದೆ. ಇದರಿಂದ ರೈತರು ಗೋಳಾಟ ಅನುಭವಿಸುವಂತಾಗಿದೆ.
https://youtu.be/t3Y_d0B05B8?si=3dbEcq_SVgU3cpN4
ಆರಂಭದಲ್ಲಿ ಚೆನ್ನಾಗಿ ಮಳೆಯಾಗಿದ್ರಿಂದ ಭರ್ಜರಿಯಾಗಿ ಈರುಳ್ಳಿ ಬೆಳೆದಿತ್ತು. ಹೀಗಾಗಿ ಒಂದು ಎಕರೆಗೆ 100 ಚೀಲ ಈರುಳ್ಳಿ ನಿರೀಕ್ಷೆಯಲ್ಲಿ ರೈತರಿದ್ದರು. ಈ ಬಾರಿ ಕ್ವಿಂಟಾಲ್ ಈರುಳ್ಳಿಗೆ 4-5 ಸಾವಿರ ರೇಟ್ ಇದ್ದು, ಫುಲ್ ಖುಷಿಯಲಿದ್ದ ರೈತರಿಗೆ ಮಳೆರಾಯನ ಬರೆ ಬಿದ್ದಿದೆ.
ಈರುಳ್ಳಿ ಮಾರಾಟ ಮಾಡಿದ್ರೆ ಲಕ್ಷಾಂತರ ಹಣ ಬರುತ್ತೆ. ಇದರಿಂದ ಮನೆ ಕಟ್ಟಿಸಬಹುದು ಎಂಬ ಕನಸು ಕಂಡಿದ್ದ ರೈತ ಪ್ರಶಾಂತ್ ಗೆ ಭಾರೀ ನಿರಾಸೆ ಆಗಿದೆ. ಸಾಲ ಮುಕ್ತರಾಗಬೇಕು ಎಂದುಕೊಂಡಿದ್ದ ರೈತರು ಮತ್ತೆ ಸಾಲದ ಸುಳಿಯಲ್ಲಿ ಸಿಲುಕುವಂತಾಗಿದೆ.
ಬೀಜ, ಗೊಬ್ಬರ ತಂದು ಸಾಲ ತೀರಿಸೋದು ತುಂಬ ಕಷ್ಟ ಎಂದು ರೈತರು ಹೇಳುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸರ್ಕಾರ ನೆರವಾಗಬೇಕು ಅಂತ ಒತ್ತಾಯ ಮಾಡಲಾಗಿದೆ. ಇನ್ನೂ ಬೆಳೆ ಹಾನಿಯಾದ ಜಮೀನುಗಳಿಗೆ ಭೇಟಿ ನೀಡದ ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶ ಹೊರ ಹಾಕಿದ್ದಾರೆ.