ಪೊಲೀಸ್ ಇಲಾಖೆ ನೊಂದವರ ಧ್ವನಿ : ಬಸವರಾಜ

0
Police Martyrs Day Program
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಸಮಾಜದ ಒಳಿತಿಗಾಗಿ ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯುವುದು, ನೊಂದವರ ಧ್ವನಿಯಾಗಿ ಪೊಲೀಸ್ ಇಲಾಖೆಯ ಸೇವೆ ಅಪಾರವಾಗಿದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶ ಬಸವರಾಜ ಹೇಳಿದರು.

Advertisement

ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸೋಮವಾರ ಗದಗ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ ಪೊಲೀಸರ ನೆನಪಿಗಾಗಿ ಏರ್ಪಡಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.

ಪೊಲೀಸ್ ಇಲಾಖೆಯು ಎರಡು ವಿಭಾಗದಲ್ಲಿ ನೋಡುವುದಾದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ತಡೆ ಮಾಡುವ ಕಾರ್ಯದಲ್ಲಿ ವಿಶ್ರಾಂತಿ ಇಲ್ಲದೇ ನಿರಂತರ ಶ್ರಮ ವಹಿಸಿ ಕೆಲಸ ನಿರ್ವಹಿಸುತ್ತದೆ. ಇಂತಹ ಕಾರ್ಯದಿಂದಾಗಿಯೇ ಪೊಲೀಸರ ತ್ಯಾಗ, ಬಲಿದಾನ, ಸಾಹಸ ಸ್ಮರಣೀಯವಾದುದು ಎಂದರು.

ಸಾರ್ವಜನಿಕರು ಅಪರಾಧ ನಡೆದಾಗ ಪೊಲೀಸ್ ಇಲಾಖೆಯೊಂದಿಗೆ ಸಹಕಾರ ನೀಡಿ ಅಪರಾಧಿಗಳಿಗೆ ತಕ್ಕ ಶಿಕ್ಷೆ ಕೊಡಿಸಲು ಸೂಕ್ತ ಸಹಕಾರ ನೀಡಬೇಕು. ಅಲ್ಲದೇ ಭಯೋತ್ಪಾದನೆಯಂತಹ ಕೃತ್ಯಗಳು ನಡೆದಾಗ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಅಮಾಯಕರ ಜೀವಹಾನಿ ತಪ್ಪಿಸಲು ಸಾರ್ವಜನಿಕರು ಪೊಲೀಸ್ ಇಲಾಖೆಯೊಂದಿಗೆ ನಿರಂತರವಾಗಿ ಇರಬೇಕು. ಅಲ್ಲದೇ ಅಪರಾಧಕ್ಕೆ ಸಾಕ್ಷ್ಯಾಧಾರಗಳ ಕೊರತೆಯಾಗದಂತೆ ಸಾರ್ವಜನಿಕರು ತಮ್ಮ ಜವಾಬ್ದಾರಿಯನ್ನು ನಿರ್ವಹಿಸಬೇಕು. ಕರ್ತವ್ಯ ಪ್ರಜ್ಞೆ, ದಕ್ಷತೆಗೆ ಹೆಸರುವಾಸಿಯಾದ ಪೊಲೀಸರಿಗೆ ಇನ್ನಷ್ಟು ಬಲ ತುಂಬುವ ಕಾರ್ಯ ಸಾರ್ವಜನಿಕ ವಲಯದಿಂದ ಆಗಲಿ ಎಂದರು.

ಪೊಲೀಸರ ನಿರಂತರ ಒತ್ತಡದ ಕೆಲಸಕ್ಕೆ ಅವರ ಕುಟುಂಬ ನೀಡುವ ನೈತಿಕ ಬೆಂಬಲ ಸ್ಮರಣೀಯವಾಗಿದೆ. ನಿರಂತರ ಕಾರ್ಯನಿರ್ವಹಣೆಯಲ್ಲಿ ಪೊಲೀಸರು ಸದಾಸಿದ್ಧ ಎಂಬ ಸಂದೇಶವನ್ನು ಹಲವಾರು ಸಂದರ್ಭದಲ್ಲಿ ಸಾಬೀತುಪಡಿಸಿದ್ದಾರೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾತನಾಡಿ, ಭಾರತ-ಚೀನಾ ಗಡಿಯಲ್ಲಿ ಚೀನಾ ಸೇನೆಯಿಂದ 21-10-1959ರಂದು ನಡೆದ ದಾಳಿಯಲ್ಲಿ ಹತ್ತಕ್ಕೂ ಅಧಿಕ ಭಾರತೀಯ ಪೊಲೀಸರು ಹುತಾತ್ಮರಾದರು. ಇದರ ನೆನಪಿಗಾಗಿ ಹಾಗೂ ದೇಶದ ಆಂತರಿಕ ಭದ್ರತೆಗಾಗಿ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಪ್ರತಿ ವರ್ಷ ಆಚರಿಸಲಾಗುತ್ತಿದೆ. ದೇಶದಲ್ಲಿ 216 ಪೊಲೀಸ್ ಅಧಿಕಾರಿ ಸಿಬ್ಬಂದಿಗಳು 2024ರಲ್ಲಿ ತಮ್ಮ ಪ್ರಾಣತ್ಯಾಗ ಮಾಡಿ ಹುತಾತ್ಮರಾಗಿದ್ದು, ಇದರಲ್ಲಿ ಗದಗ ಜಿಲ್ಲೆಯ ಮೂರು ಪೊಲೀಸರು ಸೇರಿದ್ದಾರೆ ಎಂದರು.

Police Martyrs Day Program

ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭರತ್ ಎಸ್ ಅವರು ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ನರಗುಂದ ಡಿಎಸ್‌ಪಿ ಪ್ರಭುಗೌಡ ತೀರದಳ್ಳಿ, ಡಿಎಆರ್‌ಡಿ ಎಸ್ಪಿ ವಿದ್ಯಾನಂದ ನಾಯಕ, ಸಿಇಎನ್ ಘಟಕದ ಡಿಎಸ್‌ಪಿ ಮಹಾಂತೇಶ ಸಜ್ಜನರ ಹುತಾತ್ಮರಿಗೆ ಪುಷ್ಪ ನಮನ ಸಲ್ಲಿಸಿದರು.

ಗದಗ ಬೆಟಗೇರಿ ನಗರಾಬಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರ್‌ಸಾಬ ಬಬರ್ಜಿ, ಗಣ್ಯರಾದ ಎಸ್.ಎನ್. ಬಳ್ಳಾರಿ, ರಾಮಣ್ಣ ಫಲದೊಡ್ಡಿ, ಚಿನ್ಮಯ ಹೆಗಡೆ, ಗಣೇಶ ಬ್ಯಾಳಿ, ಬಾಷಾಸಾಬ ಮಲ್ಲಸಮುದ್ರ, ಚಂದ್ರಕಾಂತ ಚವ್ಹಾಣ, ಪೊಲೀಸ್ ಇಲಾಖೆಯ ಪ್ರಭಾರ ಸಹಾಯಕ ಆಡಳಿತಾಧಿಕಾರಿ ಮಲ್ಲನಗೌಡ ಕೆ.ಎಚ್., ಬೆಟಗೇರಿ ಸಿಪಿಐ ಡಿ.ಬಿ. ಸಿಂಧೆ, ಗದಗ ಗ್ರಾಮೀಣ ಪಿಎಸ್‌ಐ ಎಲ್.ಕೆ. ಜೂಲಕಟ್ಟಿ, ಮಹಿಳಾ ಪಿಎಸ್‌ಐ ಶಕುಂತಲಾ, ಬಿ.ಎಸ್. ಬಾರಕೇರ, ಸಿ.ಎಸ್. ಜಕ್ಕನಗೌಡ್ರ, ಎನ್.ಬಿ. ಭಂಗಿ, ಎಸ್.ಎಸ್. ಹೂಲಿ, ಹುತಾತ್ಮ ಪೊಲೀಸರಿಗೆ ಪುಷ್ಪಗುಚ್ಛ ಅರ್ಪಿಸುವ ಮೂಲಕ ಗೌರವ ಸಮರ್ಪಿಸಿದರು.

ಪತ್ರಿಕಾ ಮಾಧ್ಯಮದ ಪರವಾಗಿ ವಾರ್ತಾಧಿಕಾರಿ ವಸಂತ ಮಡ್ಲೂರ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ರಾಜು ಹೆಬ್ಬಳ್ಳಿ, ರಾಮು ವಗ್ಗಿ, ಗಣೇಶ ಪೈ ಗೌರವ ಸಮರ್ಪಿಸಿದರು. ಗದಗ ಜಿಲ್ಲೆಯ ಹುತಾತ್ಮ ಪೊಲೀಸರ ಧರ್ಮಪತ್ನಿ ಭಾರತಿ ಗಾಳರೆಡ್ಡಿ, ದೀಪಾ ವಿಠಲಾಪುರ, ರೇಣುಕಾ ಡಂಬಳ ಪುಷ್ಪ ನಮನ ಸಲ್ಲಿಸಿದರು.

ಪರೇಡ್ ಕಮಾಂಡರ್ ಶಂಕರಗೌಡ ಚೌಧರಿ ಶಿಸ್ತುಬದ್ಧ ಪೊಲೀಸ್ ಪರೇಡ್ ನಡೆಸಿಕೊಟ್ಟರು. ಎನ್.ಪಿ. ಭಟ್ ಕಾರ್ಯಕ್ರಮ ನಿರ್ವಹಿಸಿದರು.

ಜಿಲ್ಲೆಯ ಡಿಎಆರ್ ಗದಗ ವಿಭಾಗದ ಬಸವರಾಜ ಪ.ವಿಠಲಾಪುರ, ಗದಗ ಮಹಿಳಾ ಪೊಲೀಸ್ ಠಾಣೆಯ ಆನಂದ ಟಿ.ಗಾಳರಡ್ಡಿ, ಗಜೇಂದ್ರಗಡ ಪೊಲೀಸ್ ಠಾಣೆಯ ರಮೇಶ ಸಿದ್ಧಪ್ಪ ಡಂಬಳ ಅವರುಗಳು ಕರ್ತವ್ಯ ಪಾಲನೆಯಲ್ಲಿ ಪ್ರಾಣಾರ್ಪಣೆ ಮಾಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಈ ಸಂದರ್ಭದಲ್ಲಿ ಸ್ಮರಿಸಿದರು.

ಪೊಲೀಸ್ ಇಲ್ಲದ ಸಮಾಜವನ್ನು ಕಲ್ಪಿಸಿಕೊಳ್ಳುವುದು ಅಸಾಧ್ಯ. ಅನ್ಯಾಯ, ಸುಲಿಗೆ ತಡೆದು ಸಮಾಜದಲ್ಲಿ ಶಾಂತಿ-ಸುವ್ಯವಸ್ಥೆ ನೆಲೆ ನಿಲ್ಲಲು ಪೊಲೀಸ್ ಇಲಾಖೆಯ ಶ್ರಮ ಅಪರಮಿತ. ಭಯೋತ್ಪಾದನೆ ನಿರ್ಮೂಲನೆಗೆ ಪ್ರಾಣತ್ಯಾಗಕ್ಕೂ ಪೊಲೀಸರು ಸಿದ್ಧ. ಇದಕ್ಕೆ ಉದಾಹರಣೆ ಸಂಸತ್ ಭವನದ ಮೇಲಿನ ಧಾಳಿ ಹಾಗೂ ಮುಂಬೈನ ತಾಜ್ ಹೋಟೆಲ್ ಮೇಲಿನ ದಾಳಿಗಳು ಸಾಕ್ಷಿಯಾಗಿವೆ.
– ಬಸವರಾಜ.
ಜಿಲ್ಲಾ ಸತ್ರ ನ್ಯಾಯಾಧೀಶರು.


Spread the love

LEAVE A REPLY

Please enter your comment!
Please enter your name here