ಬಾವಿ ಮೇಲೊಂದು ಮೂರಂತಸ್ತಿನ ಕಟ್ಟಡ! ನಗರಸಭೆ ನೋಟಿಸ್‌ಗೆ ಕಿಮ್ಮತ್ತು ಕೊಡದ ಮಾಲೀಕರು

Vijayasakshi (Gadag News) :
  • ಕಟ್ಟಡ ಕುಸಿದು ಅವಘಡ ಸಂಭವಿಸಿದರೆ ಹೊಣೆ ಯಾರು?

ವಿಜಯಸಾಕ್ಷಿ ವಿಶೇಷ ಸುದ್ದಿ, ಗದಗ

ದುರಗಪ್ಪ ಹೊಸಮನಿ

ಗದಗ-ಬೆಟಗೇರಿ ನಗರದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮೂರು ಅಂತಸ್ಥಿನ ವಾಣಿಜ್ಯ ಕಟ್ಟಡ ನಿರ್ಮಿಸಲಾಗುತ್ತಿದ್ದು, ಬಹುತೇಕ ಕಟ್ಟಡ ಕಾಮಗಾರಿ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ನಗರದ ಪಾಲಾ ಬದಾಮಿ ರಸ್ತೆಯ ಪಕ್ಕದ ರಿಜಿಸ್ಟರ್ ಸರ್ವೆ ನಂಬರ್ 6706/75ಎ ದಿಂದ 22/2ಎ1 ನೇದ್ದರಲ್ಲಿ ಮೂರು ಅಂತಸ್ಥಿನ ವಾಣಿಜ್ಯ ಕಟ್ಟಡ ಕಟ್ಟಲಾಗುತ್ತಿದೆ. ದಲಿಚಂದ ಮೇಘರಾಜ ಕೋಠಾರಿ ಸೇರಿ 31 ಮಾಲೀಕರ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಿಸಲಾಗುತ್ತಿದೆ. ಕಟ್ಟಡ ನಿರ್ಮಾಣಕ್ಕೆ ನಗರಸಭೆ ಪೌರಾಯಕ್ತರು ಅಕ್ಟೋಬರ್ 2015ರಲ್ಲಿಯೇ ಅನುಮತಿ ನೀಡಿದ್ದಾರೆ.

ತೆರವಿಗೆ ಮನವಿ

ಸದ್ಯ ನಿರ್ಮಾಣವಾಗುತ್ತಿರುವ ವಾಣಿಜ್ಯ ಕಟ್ಟಡದ ಮೂಲ ಜಾಗೆಯಲ್ಲಿ ಬಾವಿಯೊಂದಿತ್ತು. ಆದರೆ, ಆ ಬಾವಿಯನ್ನು ಮುಚ್ಚಿ ಅದರ ಮೇಲೆ ಕಟ್ಟಡ ಕಟ್ಟಿದ್ದಾರೆ. ನಿಯಮ ಬಾಹಿರವಾಗಿ ಕಟ್ಟಿರುವ ಈ ಕಟ್ಟಡವನ್ನು ತೆರುವುಗೊಳಿಸುವಂತೆ ಹೋರಾಟಗಾರ ವೆಂಕನಗೌಡ ಗೋವಿಂದಗೌಡರ ನಗರಸಭೆ ಪೌರಾಯುಕ್ತರಿಗೆ ಮನವಿ ಮಾಡಿದ್ದಾರೆ.

ವಾಣಿಜ್ಯ ಕಟ್ಟಡವನ್ನು ಎರಡು ವರ್ಷಗಳಿಂದ ನಿರ್ಮಾಣ ಮಾಡಲಾಗುತ್ತಿದೆ. ಕಟ್ಟಡ ಕಟ್ಟುತ್ತಿರುವ ಸ್ಥಳದಲ್ಲಿ ಎರಡು ಬಾವಿಗಳಿದ್ದು, ಅವೆರಡೂ ಬಾವಿಗಳಲ್ಲಿ ನೀರು ತುಂಬಿತ್ತು. ಅದರಲ್ಲಿ ಸ್ಥಳೀಯರು ಈಜಾಡುತ್ತಿದ್ದರಲ್ಲದೆ, ಅದೇ ನೀರನ್ನು ಕುಡಿಯಲು ಬಳಸುತ್ತಿದ್ದರು. ಕಟ್ಟಡ ನಿರ್ಮಾಣ ಮಾಡಬೇಕೆಂದು ತೀರ್ಮಾನಿಸಿದ ಮೇಲೆ ಎರಡು ಬಾವಿಗಳನ್ನು ನೆಲಸಮಗೊಳಿಸಿ, ಮಣ್ಣು ತುಂಬಿ ಅವುಗಳ ಮೇಲೆಯೇ ಕಟ್ಟಡದ ಪಿಲ್ಲರ್‌ಗಳನ್ನು ನಿರ್ಮಿಸಿದ್ದಾರೆ. ಒಂದು ವೇಳೆ ಕಟ್ಟಡ ಕುಸಿದು ಅವಘಡ ಸಂಭವಿಸಿದರೆ ಯಾರು ಹೊಣೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಪಾರ್ಕಿಂಗ್ ಜಾಗದಲ್ಲೂ ಕಟ್ಟಡ

ಕಟ್ಟಡದ ಆವರಣದಲ್ಲಿ ವಾಹನಗಳಿಗಾಗಿ ನಿಲುಗಡೆ ವ್ಯವಸ್ಥೆ ಮಾಡದೆ ಪಾರ್ಕಿಂಗ್ ಜಾಗದಲ್ಲಿ ಕಟ್ಟಡ ಕಟ್ಟಿದ್ದಾರೆ. ಪಾಲಾ-ಬಾದಾಮಿ ಮುಖ್ಯ ರಸ್ತೆಯನ್ನೂ ಅತಿಕ್ರಮಣ ಮಾಡಿದ್ದಾರೆ ಎನ್ನಲಾಗುತ್ತಿದೆ. ಕಣ್ಣು ಮುಂದೆ ಇಷ್ಟೆಲ್ಲ ನಡೆಯುತ್ತಿದ್ದರೂ ಅಧಿಕಾರಿಗಳು ನೆಪಮಾತ್ರಕ್ಕೆ ನೋಟಿಸ್ ನೀಡಿ ಕೈ ಕಟ್ಟಿ ಕುಳಿತಿರುವುದು ವಿಪರ್ಯಾಸ. ಕಳೆದ ಸೆಪ್ಟಂಬರ್‌ನಲ್ಲಿಯೇ ನೀಡಿರುವ ಅಧಿಕಾರಿಗಳ ನೋಟಿಸ್‌ಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಾಗಿದೆ. ಮುಂದೊಂದು ದಿನ ಅಮಾಯಕ ಜನರ ಬಲಿ ತೆಗೆದುಕೊಳ್ಳಲು ಅಧಿಕಾರಿಗಳು ರಣ ಹದ್ದಿನಂತೆ ಕಾದು ಕುಳಿತಂತೆ ಕಾಣಿಸುತ್ತಿದೆ.

ಪ್ರಭಾವಿಗಳ ಕೈವಾಡ

ಕಟ್ಟಡ ನಿರ್ಮಾಣ ಮತ್ತು ಅನುಮತಿಯಲ್ಲಿ ಅಧಿಕಾರಿಗಳು, ಕೆಲ ಪ್ರಭಾವಿ ರಾಜಕಾರಣಿಗಳೂ ಮಾಲೀಕರ ಜೊತೆ ಸೇರಿ ಅಕ್ರಮವಾಗಿ ಕಟ್ಟಡ ನಿರ್ಮಿಸುತ್ತಿದ್ದಾರೆ ಎಂಬ ಆರೋಪಗಳಿವೆ.

ದುರಂತ ಸಂಭವಿಸುವ ಮುನ್ನ ಎಚ್ಚೆತ್ತುಕೊಳ್ಳಿ

ಭ್ರಷ್ಟ ಅಧಿಕಾರಗಳಿಂದಾಗಿ ಕಳೆದ ವರ್ಷ ಧಾರವಾಡದಲ್ಲೂ ಇದೇ ರೀತಿ ಅಕ್ರಮವಾಗಿ ಕಟ್ಟಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಸಂಬಂಧಿಯೊಬ್ಬರಿಗೆ ಸೇರಿದ್ದ ನಿರ್ಮಾಣ ಹಂತದ ಬಹುಮಹಡಿ ಕಟ್ಟಡ ಕುಸಿದು ಬಿದ್ದಿತ್ತು. ಈ ಕಟ್ಟಡ ದುರಂತದಲ್ಲಿ ಸಾಕಷ್ಟು ಸಾವುನೋವು ಸಂಭವಿಸಿದ್ದವು. ಸುಮಾರು 19 ಜನ ಅಮಾಯಕರು ಪ್ರಾಣ ತೆತ್ತಿದ್ದರು. ಅದೆಷ್ಟೋ ಜನರು ಗಂಭೀರ ಗಾಯಗೊಂಡು ಶಾಶ್ವತವಾಗಿ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.

ಸಂಬಂಧಿಸಿದ ಮಾಲೀಕರಿಗೆ ಎರಡು ನೋಟಿಸ್ ನೀಡಲಾಗಿದೆ. ಕಟ್ಟಡದ ಕುರಿತು ವ್ಯಾಪಕ ಪ್ರಚಾರವೂ ಆಗಿದ್ದು, ಜನರಲ್ಲೂ ಅಧಿಕಾರಿಗಳು ಏನು ಮಾಡ್ತಾರೆ ಎಂಬ ಕುತೂಹಲವೂ ಹೆಚ್ಚಿದೆ. ಹಾಗಾಗಿ ಹೇಳುವುದಕ್ಕಿಂತ ಕೆಲಸ ಮಾಡಿ ತೋರಿಸುವುದೇ ಲೇಸು. ಖಂಡಿತ ಕ್ರಮ ಕೈಗೊಳ್ಳುತ್ತೇನೆ.

ರಮೇಶ್ ಜಾಧವ್, ಪೌರಾಯುಕ್ತರು, ಗದಗ ಬೆಟಗೇರಿ ನಗರಸಭೆ.
ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.

Leave A Reply

Your email address will not be published.