ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ತಾಲೂಕಿನಾದ್ಯಂತ ಸುಮಾರು 15 ದಿನಗಳಿಂದ ಸುರಿಯುತ್ತಿರುವ ಮಳೆ ರೈತರಿಗೆ ಶಾಪವಾಗಿ ಪರಿಣಮಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಮಾಹಿತಿಯ ಪ್ರಕಾರ ಒಂದು ವಾರದಲ್ಲಿ ಈವರೆಗೆ 111 ಮಿಮೀ ಮಳೆಯಾಗಿದೆ.
ಸತತವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಅದರಲ್ಲೂ ಶಿಗ್ಲಿ-ಒಡೆಯರಮಲ್ಲಾಪುರ, ಲಕ್ಷ್ಮೇಶ್ವರ-ದೊಡ್ಡೂರು ನಡುವಿನ ಎರಡೂ ದೊಡ್ಡ ಹಳ್ಳಗಳು ತುಂಬಿ ಹರಿದಿದೆ.
ಸೋಮವಾರ ಬೆಳಿಗ್ಗೆ ಶಿಗ್ಲಿ, ಒಡೆಯರಮಲ್ಲಾಪುರ ಭಾಗದಲ್ಲಿ ದೊಡ್ಡ ಮಳೆ ಸುರಿದ ಪರಿಣಾಮ ಹಳ್ಳ ಭರ್ತಿಯಾಗಿ ನೀರು ರಸ್ತೆಯ ಮೇಲೆ ಹರಿಯಿತು. ಇದರಿಂದ ಕೆಲ ಗಂಟೆ ಶಿಗ್ಲಿ ಮತ್ತು ಒಡೆಯರಮಲ್ಲಾಪುರ ನಡುವೆ ಸಂಪರ್ಕ ಬಂದ್ ಆಗಿತ್ತು.
ಗೋವಿನಜೋಳ ಹಾಗೂ ಹತ್ತಿ ಬೆಳೆ ಗಿಡದಲ್ಲಿಯೇ ಮೊಳಕೆ ಬರುತ್ತಿದ್ದು, ಕೈಗೆ ಬಂದ ತುತ್ತು ರೈತರ ಬಾಯಿಗೆ ಬರದ ಪರಿಸ್ಥಿತಿ ನಿರ್ಮಾಣವಾಗಿದೆ. ಸತತ ಬೀಳುತ್ತಿರುವ ಜಿಟಿಜಿಟಿ ಮಳೆಗೆ ಮಣ್ಣಿನ ಮನೆಗಳು ಸೋರಲಾರಂಭಿಸಿವೆ. ಮನೆಗಳನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಪರದಾಡುತ್ತಿದ್ದಾರೆ. ಮನೆಗಳು ಸೋರುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಪ್ಲಾಸ್ಟಿಕ್ ಹೊದಿಕೆಗಳನ್ನು ಹಾಕಲು ಪರದಾಡುತ್ತಿದ್ದಾರೆ.
ಪಟ್ಟಣದಲ್ಲಿ ರವಿವಾರ ಮದ್ಯರಾತ್ರಿ 2 ಗಂಟೆಯಿಂದ ಗುಡುಗು, ಮಿಂಚು ಸಮೇತ ಪ್ರಾರಂಭವಾದ ಮಳೆ ಮುಂಜಾನೆಯವರೆಗೂ ಸುರಿದಿದ್ದು, ನಂತರ ಒಂದೆರಡು ಗಂಟೆಗಳ ಕಾಲ ಬಿಡುವು ನೀಡಿ ಮತ್ತೆ ಮದ್ಯಾಹ್ನದಿಂದ ಜಿಟಿಜಿಟಿ ಮಳೆ ಪ್ರಾರಂಭವಾಗಿ ರಾತ್ರಿಯವರೆಗೂ ನಿಲ್ಲದಂತಾಗಿದೆ. ಮಳೆ ಹೀಗೆ ಮುಂದುವರೆದರೆ ರೈತರಿಗೆ ಉಳಿದ ಪೈರು ದಕ್ಕದಂತಾಗುತ್ತದೆ ಎಂದು ರಾಮಗಿರಿಯ ರೈತ ಸೋಮಣ್ಣ ಬೆಟಗೇರಿ ಆತಂಕ ವ್ಯಕ್ತಪಡಿಸಿದರು.