ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಅಕ್ಟೋಬರ್ 26ರಂದು ನಡೆಯುವ ಕಡ್ಡಾಯ ಕನ್ನಡ ಭಾಷೆ ಪರೀಕ್ಷೆ ಮತ್ತು ಗ್ರಾಮ ಆಡಳಿತ ಅಧಿಕಾರಿ ಹುದ್ದೆಗೆ ಅಕ್ಟೋಬರ್ 27ರಂದು ಜರುಗುವ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಈ ಕೆಳಗಿನಂತೆ ವಸ್ತ್ರಸಂಹಿತೆ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದ್ದಾರೆ.
ಪುರುಷ ಅಭ್ಯರ್ಥಿಗಳ ವಸ್ತ್ರ ಸಂಹಿತೆ: ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಶರ್ಟ್ಗಳನ್ನು ಅನುಮತಿಸಲಾಗುವುದಿಲ್ಲವಾದ್ದರಿಂದ ಪುರುಷ ಅಭ್ಯರ್ಥಿಗಳು ಅರ್ಧ ತೊಳಿನ ಶರ್ಟ್ಗಳನ್ನು ಧರಿಸಬೇಕು.
ಸಾಧ್ಯವಾದಷ್ಟು ಕಾಲರ್ ರಹಿತ ಶರ್ಟ್ ಧರಿಸಲು ಆದ್ಯತೆ ನೀಡುವುದು. ಪ್ಯಾಂಟ್ ಮತ್ತು ಸರಳ ಪ್ಯಾಂಟ್ (ಜೇಬುಗಳು ಇಲ್ಲದಿರುವ /ಕಮ್ಮಿ ಜೇಬುಗಳಿರುವ) ಪುರುಷ ಅಭ್ಯರ್ಥಿಗಳಿಗೆ ಆದ್ಯತೆಯ ಡ್ರೆಸ್ ಕೋಡ್ ಆಗಿದೆ.
ಕುರ್ತಾ, ಪೈಜಾಮ, ಜೀನ್ಸ್ ಪ್ಯಾಂಟ್ ಅನುಮತಿಸುವುದಿಲ್ಲ. ಪುರುಷ ಅಭ್ಯರ್ಥಿಗಳು ಧರಿಸುವ ಬಟ್ಟೆಗಳು ಹಗುರವಾಗಿರಬೇಕು. ಅಂದರೆ ಜಿಪ್ ಪಾಕೆಟ್‌ಗಳು, ಪಾಕೆಟ್‌ಗಳು, ದೊಡ್ಡ ಬಟನ್‌ಗಳು ಮತ್ತು ವಿಸ್ತಾರವಾದ ಕಸೂತಿ ಇರುವ ಬಟ್ಟೆಗಳು ಇರಬಾರದು. ಪರೀಕ್ಷಾ ಹಾಲ್ ಒಳಗೆ ಶೂಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಅಭ್ಯರ್ಥಿಗಳು ಸ್ಯಾಂಡಲ್ ಅಥವಾ ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ. ಅಭ್ಯರ್ಥಿಗಳು ಕುತ್ತಿಗೆಯ ಸುತ್ತ ಯಾವುದೇ ಲೋಹದ ಆಭರಣಗಳನ್ನು ಧರಿಸುವುದು ಅಥವಾ ಕಿವಿಯೋಲೆಗಳು, ಉಂಗುರಗಳು ಮತ್ತು ಕಡಗಗಳನ್ನು ಧರಿಸುವುದು ನಿಷೇಧಿಸಲಾಗಿದೆ.
ಮಹಿಳಾ ಅಭ್ಯರ್ಥಿಗಳ ವಸ್ತ್ರ ಸಂಹಿತೆ: ಮಹಿಳಾ ಅಭ್ಯರ್ಥಿಗಳು ವಿಸ್ತಾರವಾದ ಕಸೂತಿ, ಹೂಗಳು, ಬೂಚ್‌ಗಳು ಅಥವಾ ಬಟನ್‌ಗಳನ್ನು ಹೊಂದಿರುವ ಬಟ್ಟೆಗಳನ್ನು ಧರಿಸುವುದನ್ನು ನಿಷೇಧಿಸಲಾಗಿದೆ. ಪರೀಕ್ಷೆಯ ದಿನದಂದು ಪೂರ್ಣ ತೋಳಿನ ಬಟ್ಟೆಗಳನ್ನು/ಜೀನ್ಸ್ ಪ್ಯಾಂಟ್ ಧರಿಸಬಾರದು. ಅದರ ಬದಲಾಗಿ ಅರ್ಧ ತೋಳಿನ ಬಟ್ಟೆಗಳನ್ನು ಅವರಿಗೆ ಮುಜುಗುರವಾಗದಂತೆ ಮತ್ತು ಉಲ್ಲೇಖಿಸಿರುವ ನಿಯಮದಂತೆ ಧರಿಸುವಂತೆ ನಿರ್ದೇಶಿಸಲಾಗಿದೆ. ಎತ್ತರವಾದ ಹಿಮ್ಮಡಿಯ ಶೂಗಳನ್ನು /ಚಪ್ಪಲಿಗಳನ್ನು ಮತ್ತು ದಪ್ಪವಾದ ಅಡಿ ಭಾಗ ಹೊಂದಿರುವ ಶೂಗಳನ್ನಾಗಲಿ, ಚಪ್ಪಲಿಗಳನ್ನಾಗಲಿ ಧರಿಸಬಾರದು. ಮಹಿಳಾ ಅಭ್ಯರ್ಥಿಗಳು ಯಾವುದೇ ರೀತಿಯ ಲೋಹದ ಆಭರಣಗಳನ್ನು ಧರಿಸುವುದನ್ನು ನಿಷೇಧಿಸಿದೆ (ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ)
ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ತಿಳಿಸಿರುವ ವಸ್ತç ಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು.
ಪ್ರಾಧಿಕಾರವು ನಿಗದಿಪಡಿಸಿರುವ ಸೂಚನೆಗಳನ್ನು ಸಂಬಂಧಪಟ್ಟವರು ಪರೀಕ್ಷಾ ಕೇಂದ್ರದಲ್ಲಿ ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಡ್ರೆಸ್‌ಕೋಡ್ ಅನ್ನು ಅನುಸರಿಸುವುದರ ಜೊತೆಗೆ ಪರೀಕ್ಷಾ ಕೇಂದ್ರಕ್ಕೆ ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್‌ಗಳು, ಪೆನ್‌ಡ್ರೈವ್‌ಗಳು, ಇಯರ್ ಫೋನ್‌ಗಳು, ಮೈಕ್ರೋ ಫೋನ್‌ಗಳು, ಬ್ಲೂಟೂಥ್ ಸಾಧನಗಳು ಮತ್ತು ಕೈ ಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ. ತಿನ್ನಬಹುದಾದ ಪದಾರ್ಥಗಳನ್ನು ಪರೀಕ್ಷಾ ಕೊಠಡಿಯೊಳಗೆ ತರುವುದನ್ನು ಹಾಗೂ ತಿನ್ನುವುದನ್ನು ನಿಷೇಧಿಸಲಾಗಿದೆ. ಕುಡಿಯುವ ನೀರಿನ ಬಾಟಲಿಗೂ ಸಹ ಅನುಮತಿ ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿಯೇ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಪೆನ್ಸಿಲ್, ಪೇಪರ್, ಎರೇಸರ್, ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ. ತಲೆಯ ಮೇಲೆ ಟೋಪಿ/ಹ್ಯಾಟ್ ಧರಿಸಬಾರದು. ಯಾವುದೇ ರೀತಿಯ ಮಾಸ್ಕ್ನ್ನು ಧರಿಸುವಂತಿಲ್ಲ.