ತೆಲುಗಿಗೆ ಸಾಕಷ್ಟು ಹಿಟ್ ಮೂವಿ ಕೊಟ್ಟಿದ್ದ ಖ್ಯಾತ ನಿರ್ಮಾಪಕ ಬುರುಗಪಲ್ಲಿ ಶಿವ ರಾಮ ಕೃಷ್ಣ ಅನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ನೂರಾರು ಕೋಟಿ ರೂಪಾಯಿ ಮೋಸ ಮಾಡಿದ ಆರೋಪಡದಿ ಅರೆಸ್ಟ್ ಮಾಡಲಾಗಿದೆ. ಎರಡು ದಶಕಗಳ ಕಾಲ ನಡೆದ ಪ್ರಕರಣದಲ್ಲಿ ಶಿವ ರಾಮ ಕೃಷ್ಣ ಅವರಿಗೆ ತೀವ್ರ ಹಿನ್ನಡೆ ಆಗಿದೆ.
ಸುಮಾರು 80 ಎಕರೆ ಜಮೀನನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ತನ್ನದು ಮಾಡಿಕೊಂಡಿದ್ದರು ಎಂಬ ಆರೋಪ ರಾಮ ಕೃಷ್ಣ ಅವರ ಮೇಲಿತ್ತು. ಹೈದರಾಬಾದ್ ಬಳಿಯಲ್ಲಿಯೇ ಈ 80 ಎಕರೆ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದು, ಜಮೀನಿನ ಈಗಿನ ಮೌಲ್ಯ ಸುಮಾರು 500 ಕೋಟಿಗೂ ಹೆಚ್ಚು ಎನ್ನಲಾಗುತ್ತದೆ. 2003 ರಲ್ಲಿಯೇ ಈ ಹಗರಣ ಬೆಳಕಿಗೆ ಬಂದು, ಆಗಿನ ಅವಿಭಜಿತ ಆಂಧ್ರ ಪ್ರದೇಶ ಸರ್ಕಾರ ಬುರುಗಪಲ್ಲಿ ಶಿವ ರಾಮ ಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿತ್ತು.
ಪುರಾತತ್ವ ಇಲಾಖೆಯ ಹಿರಿಯ ಸಹಾಯಕ ಕೊತ್ತಿ ಚಂದ್ರಶೇಖರ್ ಎಂಬುವರ ನೆರವು ಪಡೆದು ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದ ಬುರುಗಪಲ್ಲಿ ಶಿವ ರಾಮ ಕೃಷ್ಣ ಆ ನಂತರ ಬಿಲ್ಡರ್ ಮುರುಗ ಲಿಂಗಂ ಸಹಾಯ ಪಡೆದು ಅಲ್ಲಿ ನಿವೇಶನ ನಿರ್ಮಾಣ ಹಾಗೂ ಮಾರಾಟಕ್ಕೆ ಮುಂದಾಗಿದ್ದರು. ಬಿಲ್ಡರ್ ಮುರುಗ ಲಿಂಗಂ ಸಹ, ನಕಲಿ ದಾಖಲೆ ಸೃಷ್ಟಿಸಲು ಶಿವ ರಾಮ ಕೃಷ್ಣಗೆ ಸಹಾಯ ಮಾಡಿದ್ದರು. ಈಗ ಈ ಇಬ್ಬರನ್ನೂ ಸಹ ಬಂಧಿಸಲಾಗಿದೆ.