ಮಂಡ್ಯ:- ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಗೆ ದಾಖಲಾಗಿದ್ದ ಉಪ ತಹಸೀಲ್ದಾರ ಚಿಕಿತ್ಸೆ ಫಲಿಸದೇ ದುರ್ಮರಣ ಹೊಂದಿದ ಘಟನೆ ಜಿಲ್ಲೆಯ ಮಳವಳ್ಳಿ ಪಟ್ಟಣದಲ್ಲಿ ಜರುಗಿದೆ.
Advertisement
55 ವರ್ಷದ ಸುನೀಲ್ ಮೃತ ವ್ಯಕ್ತಿ. ಮಳವಳ್ಳಿ ತಾಲೂಕಿನ ಹಲಗೂರಿನಲ್ಲಿ ಉಪ ತಹಸೀಲ್ದಾರ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಅ.19ರಂದು ರಾತ್ರಿ 9:30ಕ್ಕೆ ಕೊಳ್ಳೇಗಾಲ ರಸ್ತೆಯ ಸಾರ್ವಜನಿಕ ಆಸ್ಪತ್ರೆಯ ಬಳಿ ರಸ್ತೆ ದಾಟುತ್ತಿದ್ದಾಗ ಬೈಕ್ ಡಿಕ್ಕಿ ಹೊಡೆದಿತ್ತು.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.