ಸರಕಾರ ನಂಬುಗೆ ಕಳೆದುಕೊಳ್ಳದಿರಲಿ : ಬಸವರಾಜ ಹೊರಟ್ಟಿ

0
Chairman Basavaraj Horatti's letter to the Chief Minister regarding the protection of Kappattagudda
Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ/ಗದಗ : ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಿಸಿಕೊಳ್ಳುವ ಕಪ್ಪತ್ತಗುಡ್ಡ ತನ್ನ ಒಡಲಲ್ಲಿ ಸಾವಿರಾರು ಔಷಧೀಯ ಗುಣವುಳ್ಳ ಸಸ್ಯ ಸಂಪತ್ತನ್ನು ಹೊಂದಿದ ನಾಡಿನ ಏಕೈಕ ಅಪರೂಪದ ತಾಣವಾಗಿದೆ. ಇದನ್ನು ಸಂರಕ್ಷಿಸಿಕೊಂಡು ಹೋಗುವ ದೊಡ್ಡ ಹೊಣೆಗಾರಿಕೆ, ಕಾಳಜಿ ನಮ್ಮೆಲ್ಲರ ಮೇಲಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿಯವರು ಅಭಿಪ್ರಾಯಪಟ್ಟಿದ್ದಾರೆ.

Advertisement

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ಕಪ್ಪತ್ತಗುಡ್ಡ ಸಂರಕ್ಷಣೆಗಾಗಿ ದಶಕಗಳಿಂದ ಜನಪರ ಹೋರಾಟಗಾರರು, ಮಠಾಧೀಶರು ಹೋರಾಟ ಮಾಡುವ ಮೂಲಕ ಕಪ್ಪತ್ತಗುಡ್ಡದಲ್ಲಿ ಗಣಿಗಾರಿಕೆ ನಡೆಯದಂತೆ ಒತ್ತಾಯಿಸುತ್ತಾ ಬಂದಿದ್ದಾರೆ. ಆದಾಗ್ಯೂ ಗಣಿಗಾರಿಕೆಗಾಗಿ ಉದ್ಯಮಿಗಳು ತಮ್ಮ ಪ್ರಯತ್ನವನ್ನು ಬಿಟ್ಟಿಲ್ಲ. ಈ ಕುರಿತು 28 ಪ್ರಸ್ತಾವನೆಗಳು ಸರಕಾರದ ಮುಂದೆ ಬಂದಿದ್ದವು. ಈ ವಿಷಯಗಳ ಕುರಿತು ಕಳೆದ 15 ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ವನ್ಯಜೀವಿ ಧಾಮ ಎಂದು ಘೋಷಿತವಾಗಿರುವ ಕಪ್ಪತ್ತಗುಡ್ಡದಿಂದ 10 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಆರಂಭಿಸಲು ಬಂದ ಪ್ರಸ್ತಾವನೆಗಳನ್ನು ಪರಿಶೀಲಿಸಲು ನಡೆದ ಸಭೆಯಲ್ಲಿ ಮುಂದೂಡಿರುವುದು ಸ್ವಾಗತಾರ್ಹ.

ಆದರೆ ಸಂಪೂರ್ಣ ಈ ಪ್ರಸ್ತಾವನೆಗಳನ್ನು ತಿರಸ್ಕರಿಸಿ ಈ ಭಾಗದಲ್ಲಿ ಯಾವುದೇ ಗಣಿಗಾರಿಕೆಯನ್ನು ಹಾಗೂ ಇತರೆ ಉದ್ಯಮಗಳನ್ನು ಆರಂಭಿಸಲು ಅನುಮತಿ ನೀಡುವುದಿಲ್ಲವೆಂದು ಆದೇಶ ಹೊರಡಿಸಬೇಕಾಗಿತ್ತು. ಕೇವಲ ಪ್ರಸ್ತಾವನೆಗಳನ್ನು ಮುಂದೂಡಿರುವುದರಿಂದ ಉತ್ತರ ಕರ್ನಾಟಕ ಜನರಿಗೆ ಹಾಗೂ ಪರಿಸರ ಸಂರಕ್ಷಣೆಯ ಪರ ಹೋರಾಟಗಾರರಿಗೆ ಸಂಶಯ ಮೂಡುವುದರ ಜೊತೆಗೆ ಸರಕಾರದ ಮೇಲೆ ನಂಬಿಕೆ ಇಲ್ಲದಂತಹ ವಾತಾವರಣ ಮೂಡಿದ್ದು ವಿಷಾದನೀಯ.

ಕಪ್ಪತ್ತಗುಡ್ಡವನ್ನು ಸೂಕ್ಷ್ಮವಲಯ ವ್ಯಾಪ್ತಿಯಂದು ಸದಾ ಸರಕಾರ ಹೇಳಿಕೊಂಡು ಬಂದಿದೆ ಈ ಕುರಿತು ಆ ಪ್ರದೇಶದಲ್ಲಿ ಯಾವುದೇ ಗಣಿಗಾರಿಕೆ ನಡೆಸದಂತೆ ಸ್ಪಷ್ಟ ಆದೇಶ ನೀಡಬೇಕು. ಕೇವಲ ಪ್ರಸ್ತಾವನೆಗಳನ್ನು ಮಂದೂಡುವುದರಿಂದ ಜನಸಾಮಾನ್ಯರಲ್ಲಿ ಆತಂಕಗಳು, ಸಂಶಯಗಳು ಮೂಡುವುದು ಸಹಜ. ಇದಕ್ಕೆಲ್ಲ ಪೂರ್ಣವಿರಾಮ ನೀಡಬೇಕಿದೆ. ಕಪ್ಪತ್ತಗುಡ್ಡವು ಜೀವ ವೈವಿಧ್ಯ ಹಾಗೂ ಸಸ್ಯವೈವಿಧ್ಯಗಳ ಪ್ರದೇಶವಾಗಿದ್ದು, ಸಾವಿರಾರು ವನಸ್ಪತಿ ಸಸ್ಯಗಳ ಆಗರವಾಗಿರುವ ಈ ಪ್ರದೇಶವು ನಾಡಿನ ಅಮೂಲ್ಯ ಆಸ್ತಿಯಾಗಿದೆ. ಈ ಸಸ್ಯಸಂಪತ್ತು ಹೊಂದಿದ ಕಪ್ಪತ್ತಗುಡ್ಡವನ್ನು ಕಳ್ಳಕಾಕರಿಂದ ದೂರವಿಟ್ಟು ಕಪ್ಪತ್ತಗುಡ್ಡ ಸಂರಕ್ಷಿಸಲು ಮುಖ್ಯಮಂತ್ರಿಗಳು ದಿಟ್ಟ ಕ್ರಮ ಕೈಗೊಳ್ಳಬೇಕೆಂದು ಸಭಾಪತಿ ಬಸವರಾಜ ಹೊರಟ್ಟಿಯವರು ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ಈ ಆಪಾದನೆಯಿಂದ ಮಾನ್ಯ ಮುಖ್ಯಮುಂತ್ರಿಗಳು ಮುಕ್ತರಾಗಿ ಸಂಪೂರ್ಣ ಪ್ರಸ್ತಾವನೆಗಳನ್ನು ರದ್ದುಗೊಳಿಸಿ ಕಪ್ಪತ್ತಗುಡ್ಡ ಸಂರಕ್ಷಣೆಗೆ ಸ್ಪಷ್ಟ ಆದೇಶ ನೀಡುವ ಮೂಲಕ ನಾಡಿನ ಏಕೈಕ ಸಸ್ಯ ಸಂಪತ್ತನ್ನು ಹೊಂದಿದ ಕಪ್ಪತ್ತಗುಡ್ಡ ಉಳಿಸುವಲ್ಲಿ ದಿಟ್ಟ ಹೆಜ್ಜೆಯನ್ನು ಇಟ್ಟು, ಮುಖ್ಯಮಂತ್ರಿಗಳು ತಮ್ಮ ಹೆಗ್ಗುರುತುಗಳನ್ನು ಮೂಡಿಸಲಿ. ಆ ಮೂಲಕ ಉತ್ತರ ಕರ್ನಾಟಕ ಜನತೆಯ ವಿಶೇಷ ಪ್ರೀತಿಯನ್ನು ಗಳಿಸುವಂತಾಗಲಿ ಎಂದು ಬಸವರಾಜ ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.


Spread the love

LEAVE A REPLY

Please enter your comment!
Please enter your name here